24ರಿಂದ ಕವಿವಿ 2ನೇ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿ
ಹೊಳೆಆಲೂರು: ಸ್ಥಳೀಯ ಕಲ್ಮೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದ ವತಿಯಿಂದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸ್ತುತ ಸಾಲಿನ 2ನೇ ವಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟಗಳು ಫೆ. 24ರಿಂದ 26ರ ವರೆಗೆ ನಡೆಯಲಿದೆ. ಫೆ. 24ರಿಂದ ಮೂರು ದಿನಗಳ ಕಾಲ ಮಹಾವಿದ್ಯಾಲಯದ ಆತಿಥ್ಯದಲ್ಲಿ ನಡೆಯಲಿರುವ ಕಬಡ್ಡಿ ಪಂದ್ಯಾಟದಲ್ಲಿ ಪಾಲ್ಗೊಳ್ಳಲಿರುವ 2ನೇ ವಲಯ ಮಟ್ಟದ ಹಾಗೂ ಅಂತರ ವಲಯ ಮಟ್ಟದಲ್ಲಿ ಬರುವ ಎಲ್ಲ ಪದವಿ ಮಹಾವಿದ್ಯಾಲಯಗಳಿಗೆ ಈ ಕುರಿತು ಈಗಾಗಲೇ ಪತ್ರಗಳನ್ನು ಕಳುಹಿಸಲಾಗಿದೆ. ಪಾಲ್ಗೊಳ್ಳಲಿರುವ ಕಬಡ್ಡಿ ತಂಡದ ಕಾಲೇಜುಗಳವರು ಫೆ. 22 ರೊಳಗಾಗಿ ಪ್ರವೇಶ ಫೀ ರು. 400 ಡಿಡಿಯನ್ನು ಪ್ರಾಚಾರ್ಯರು ಕಲ್ಮೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹೊಳೆಆಲೂರ, ತಾ. ರೋಣ ಈ ಹೆಸರಿನಲ್ಲಿ ತೆಗೆದು ತಂಡದ ಅರ್ಹತಾ ಪತ್ರದ ಜತೆಗೆ ಕಳಿಸಿಕೊಡಲು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕ್ರೀಡಾವಿಭಾಗದ ಕಾರ್ಯಾಧ್ಯಕ್ಷ ಪ್ರೊ. ಬಸವರಾಜ ಬೆಳವಟಗಿ(9448776221), ದೈಹಿಕ ನಿರ್ದೇಶಕ ಎ.ಎಸ್. ಪಾಟೀಲ(9481707817) ಇಲ್ಲಿಗೆ ಸಂಪರ್ಕಿಸುವಂತೆ ಪ್ರಾ. ಎಸ್.ಎಸ್. ಪಟ್ಟಣಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಬಡ್ಡಿ ಪಂದ್ಯಾವಳಿ 24ರಂದು ಉದ್ಘಾಟನೆ: ಕವಿವಿ 2ನೇ ವಲಯ ಮಟ್ಟದ ಮತ್ತು ಅಂತರ್ ವಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯನ್ನು ಫೆ. 24ರಂದು ಬೆಳಗ್ಗೆ 10ಕ್ಕೆ ಬೆಳಗಾವಿ ಪಿಎಸ್‌ಐ ಪಿ.ಆರ್. ಯಾವಗಲ್ ಉದ್ಘಾಟಿಸುವರು. ಪ್ರಾ. ಎಸ್.ಎಸ್. ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಎಂ.ವಿ. ಗಾಣಿಗೇರ, ಎಂ.ಬಿ. ಕೋಳೇರಿ, ಎಂ.ಸಿ.ಬ್ಯಾಡಗಿ ಆಗಮಿಸುವರು. ಫೆ. 25ರಂದು ಮಧ್ಯಾಹ್ನ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ಶೆಲ್ಲಿಕೇರಿ ವಹಿಸುವರು. ಧಾರವಾಡ ಜಿಲ್ಲಾ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ. ದೇವಾನಂದ ಗಾಂವಕರ, ಎಂ.ಎನ್. ತೇಜಿಗೌಡ್ರ ಅತಿಥಿಗಳಾಗಿ ಆಗಮಿಸುವರು. ಸಂಸ್ಥೆಯ ಅಧ್ಯಕ್ಷ ಸಿ.ಜಿ. ಬೀರನೂರ ಬಹುಮಾನ ವಿತರಿಸುವರು. ಫೆ. 26ರಂದು ಬೆಳಗ್ಗೆ 10ಕ್ಕೆ ಕವಿವಿ ಅಂತರ್ ವಲಯ ಮಟ್ಟದ ಕಬಡ್ಡಿ ಪಂದ್ಯಾಟವನ್ನು ಕವಿವಿ ಧಾರವಾಡದ ಕುಸ್ತಿ ತರಬೇತುದಾರ ಬಿ.ಎಂ. ಪಾಟೀಲ ಉದ್ಘಾಟಿಸಲಿದ್ದು, ಪ್ರಾ. ಎಸ್.ಎಸ್. ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಎನ್.ಜಿ. ಪಾಟೀಲ, ಬಿ.ಬಿ. ಸಾಸಳ್ಳಿ ಆಗಮಿಸುವರು. ಸಂಜೆ 4ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ಸಂಸ್ಥೆಯ ಚೇರ್‌ಮನ್ ಸಿ.ಜಿ. ಬೀರನೂರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಡಿ.ಎಸ್. ಶೆಲ್ಲಿಕೇರಿ, ವಿ.ಎಲ್. ಬದಾಮಿ ಆಗಮಿಸುವರು. ಸಂಸ್ಥೆಯ ಉಪಾಧ್ಯಕ್ಷ ಎಂ.ಬಿ. ಕೋಳೇರಿ ಬಹುಮಾನ ವಿತರಿಸುವರು ಎಂದು ಕ್ರೀಡಾವಿಭಾಗದ ಕಾರ್ಯಾಧ್ಯಕ್ಷ ಪ್ರೊ. ಬಸವರಾಜ ಬೆಳವಟಗಿ, ದೈಹಿಕ ನಿರ್ದೇಶಕ ಎ.ಎಸ್. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.