ಉತ್ತಮ ಭಾರತಕ್ಕಾಗಿ 'ನಿಮ್ಮ ಧ್ವನಿ, ನಮ್ಮ ಪ್ರಣಾಳಿಕೆ' ಅಭಿಯಾನ
ಗದಗ: ಉತ್ತಮ ಭಾರತ ನಿರ್ಮಾಣಕ್ಕಾಗಿ ಬಿಜೆಪಿಯು ನಿಮ್ಮ ಧ್ವನಿ, ನಮ್ಮ ಪ್ರಣಾಳಿಕೆ ಅಭಿಯಾನವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಮೋಹನ್ ಮಾಳಶೆಟ್ಟಿ ಹೇಳಿದರು.
ಅವರು ನಗರದ ಹಾತಲಗೇರಿ ನಾಕಾದಲ್ಲಿ ಗುರುವಾರ ಬಿಜೆಪಿ ಯುವ ಮೋರ್ಚಾದ ನೇತೃತ್ವದಲ್ಲಿ 2014ರ ಲೋಕಸಭಾ ಚುನಾವಣೆಗಾಗಿ ಹಮ್ಮಿಕೊಳ್ಳಲಾಗಿದ್ದ ನಿಮ್ಮ ಧ್ವನಿ, ನಮ್ಮ ಪ್ರಣಾಳಿಕೆ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇವಲ ಒಳ್ಳೆಯ ಆಡಳಿತವೊಂದೆ ಸಾಕಾಗುವುದಿಲ್ಲ. ಅದು ಜನಪರ ಮತ್ತು ಸಕ್ರಿಯವಾಗಿರಬೇಕು. ಒಳ್ಳೆಯ ಆಡಳಿತ ಎಂದರೆ ಜನರನ್ನೇ ಅಭಿವೃದ್ಧಿ ಪ್ರಕ್ರಿಯೆಯ ಕೇಂದ್ರಬಿಂದುವಾಗಿ ಇಟ್ಟುಕೊಳ್ಳುವುದು ಎಂಬ ಮೋದಿಯ ಸಂದೇಶದಂತೆ ಈ ನಿಮ್ಮ ಧ್ವನಿ, ನಮ್ಮ ಪ್ರಣಾಳಿಕೆ ಅಭಿಯಾನವನ್ನು ಗುರುವಾರದಿಂದ ದೇಶಾದ್ಯಂತ ಪ್ರಾರಂಭಿಸಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ದೇಶದ ಅಭಿವೃದ್ಧಿಗೆ ಹಾಗೂ ಮತದಾರರ ಪ್ರಗತಿಗೆ ಅವಶ್ಯವಿರುವ 15 ಅಂಶಗಳುಳ್ಳ ಪ್ರಣಾಳಿಕೆಯನ್ನು ಬಿಜೆಪಿಯು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳಿಸಲಿದೆ.
ಈ ಪ್ರಣಾಳಿಕೆಯಲ್ಲಿ ಅವಶ್ಯವಿರುವ ಅಂಶಗಳನ್ನು ಜನರಿಂದ, ಯುವ ಸಮೂಹದಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ದೇಶದ ಅಭಿವೃದ್ಧಿಗೆ ಹಾಗೂ ಜನರಿಗೆ ಸಹಕಾರಿಯಾಗುವಂತಹ ಅಂಶಗಳನ್ನು ಈ ಪ್ರಣಾಳಿಕೆಯಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಿಜೆಪಿಯು 15 ಅಂಶ ಗಮನದಲ್ಲಿಕೊಂಡಿದ್ದು, ಅವುಗಳ ಕುರಿತು ಸಾರ್ವಜನಿಕರಲ್ಲಿರುವ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ನಿಮ್ಮ ಧ್ವನಿ, ನಮ್ಮ ಪ್ರಣಾಳಿಕೆಯಲ್ಲಿ ಒಳ್ಳೆಯ ಆಡಳಿತ, ಸುಸ್ಥಿರ ಆರ್ಥಿಕತೆ ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ರಾಷ್ಟ್ರೀಯ ಸುರಕ್ಷತೆ, ಮೂಲಸೌಕರ್ಯ, ಗ್ರಾಮೀಣ ಅಭಿವೃದ್ಧಿ, ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನ, ವಿದೇಶ ವ್ಯವಹಾರ, ಸಾಮಾಜಿಕ ಅಭಿವೃದ್ಧಿ, ಇಂಧನ ಸುರಕ್ಷತೆ, ಜಲ ನಿರ್ವಹಣೆ, ಐಟಿ-ಐಟಿಇಎಸ್, ಬಿಟಿ ಮತ್ತು ಟೆಲಿಕಾಂ ಕುರಿತು ಸಾರ್ವಜನಿಕರಿಂದ ಹಾಗೂ ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಅಲ್ಲದೇ ಈ 15 ಅಂಶಗಳಲ್ಲದೇ ಸಾರ್ವಜನಿಕರಿಂದ ಉತ್ತಮ ಭಾರತಕ್ಕಾಗಿ ನಿಮ್ಮ ಸಲಹೆ ಏನು, ನನ್ನ ಲೋಕಸಭಾ ಕ್ಷೇತ್ರದ ಬೆಳವಣಿಗೆಗಾಗಿ ನನ್ನ ಸಲಹೆಗಳೇನು ಎಂಬುದರ ಕುರಿತು ಕರಪತ್ರ ಹಂಚಿ ಅವರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುವ ಕಾರ್ಯ ಮಾಡಲಾಗುತ್ತಿದೆ. ಈಗಾಗಲೇ ಅಳವಡಿಸಿಕೊಳ್ಳಲಾಗಿರುವ ಕರಪತ್ರದಲ್ಲಿನ ಅಂಶಗಳನ್ನು ಹೊರತುಪಡಿಸಿ ಸಾರ್ವಜನಿಕರಿಂದ ಬರುವ ಹೊಸ ಅಂಶಗಳನ್ನು ಪಡೆದು ಮುಂಬರುವ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಅಳವಡಿಸಲು ಕ್ರಮಕೈಗೊಳ್ಳುವುದು ಈ ಅಭಿಯಾನದ ಉದ್ದೇಶವಾಗಿದೆ. ಜಿಲ್ಲೆಯ ಎಲ್ಲ ಸಾರ್ವಜನಿಕರು ಈ ಅಭಿಯಾನದಲ್ಲಿ ಪಾಲ್ಗೊಂಡು ದೇಶದ ಅಭಿವೃದ್ಧಿಗೆ ಬೇಕಾಗುವ ನಿಮ್ಮ ಸಲಹೆಗಳನ್ನು ನೀಡಿ ದೇಶದ ಅಭಿವೃದ್ಧಿಗೆ ನಿಮ್ಮ ಕೈ ಜೋಡಿಸಿ ಬಿಜೆಪಿಯನ್ನು ಬಲಪಡಿಸುವಂತೆ ಕೋರಿದರು.
ಲೋಹ ಸಂಗ್ರಹಣಾ ಸಮಿತಿಯ ಜಿಲ್ಲಾ ಸಹ ಸಂಚಾಲಕ ಶ್ರೀಪತಿ ಉಡುಪಿ, ಈಶಣ್ಣ ಮುನವಳ್ಳಿ, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪುರೋಹಿತ, ಮುಂತಾದವರು ಮಾತನಾಡಿದರು. ಶರಣು ಮುದೋಳ, ಸುಧೀರ ಕಾಟಿಗರ, ಪ್ರೀತಮ್ ಹಿರೇಮಠ, ಪವನ್ ಬಾಕಳೆ, ಸುರೇಶ ಚಿತ್ತರಗಿ, ಗಂಗಾಧರ ಹಬೀಬ, ಅಜಯ ಮುನವಳ್ಳಿ, ಸಿದ್ಧರಾಮೇಶ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.