ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜನರ ಉತ್ತಮ ಸಹಕಾರದಿಂದ ದೇಶದ ಪ್ರಗತಿ ಸಾಧ್ಯ: ಪಾಟೀಲ

Vishwanath S
Updated On : 14 Feb 2014, 1:34 am

ಕನ್ನಡಪ್ರಭ ವಾರ್ತೆ, ಗದಗ, ಫೆ. 13
ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ರೈತರೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಸಹಕಾರ ಮನೋಭಾವನೆಯೊಂದಿಗೆ ವ್ಯವಹರಿಸಿದಲ್ಲಿ ಸಂಘ-ಸಂಸ್ಥೆಗಳು ಅಭಿವೃದ್ಧಿಯ ಜತೆಗೆ ದೇಶದ ಅಭಿವೃದ್ಧಿಗೆ ಸಹಕಾರಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲ ಹೇಳಿದರು.
ಅವರು ಗುರುವಾರ ನಗರದ ಎಪಿಎಂಸಿ ಯಾರ್ಡ್‌ನಲ್ಲಿರುವ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರಿ ಯೂನಿಯನ್, ಸಹಕಾರ ಇಲಾಖೆ ಹಾಗೂ ಧಾರವಾಡ ಹಾಲು ಒಕ್ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ರೋಣ ಹಾಗೂ ಶಿರಹಟ್ಟಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರಿಗೆ ಹಾಗೂ ಕಾರ್ಯದರ್ಶಿಗಳಿಗೆ ಹಮ್ಮಿಕೊಳ್ಳಲಾಗಿದ್ದ 1 ದಿನದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಜನರಿಗೆ ಹಾಗೂ ರೈತ ವರ್ಗವು ಕೃಷಿ ಹಾಗೂ ಇನ್ನಿತರೆ ಸ್ವಉದ್ಯೋಗದೊಂದಿಗೆ ಹಾಲು ಉತ್ಪಾದನಾ ಉದ್ಯಮವನ್ನು ಹೆಚ್ಚಾಗಿ ಅಳವಡಿಸಿಕೊಂಡಿರುವುದನ್ನು ನಾವಿಂದು ಕಾಣುತ್ತೇವೆ. ಕೃಷಿಯೊಂದಿಗೆ ಹೈನುಗಾರಿಕೆಗೆ ಜೀವನದ ಆರ್ಥಿಕ ಮುಗ್ಗಟ್ಟು ಹೊಡೆದೋಡಿಸಲು ಸಹಕಾರಿಯಾಗಿದೆ. ಈ ಕುರಿತು ಪ್ರತಿಯೊಬ್ಬರೂ ಜಾಗೃತಿ ಹೊಂದಿ ಈ ಹೈನು ಉತ್ಪಾದನೆ ಅಳವಡಿಸಿಕೊಳ್ಳಲು ಅಧಿಕಾರಿ ವರ್ಗದವರು ಜನರಲ್ಲಿ ಹೆಚ್ಚಿನ ರೀತಿಯ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಸರ್ಕಾರವೂ ರೈತರ ಅಭಿವೃದ್ಧಿಗಾಗಿ ಹಲವು ರೀತಿಯ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಈ ಕುರಿತು ರೈತರು ಅರಿತು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಸರ್ಕಾರ ಹಾಲು ಉತ್ಪಾದಕರಿಗೆ ರು. 4 ಸಬ್ಸಿಡಿ ನೀಡಲಾಗಿದೆ. ಕೆಸಿಸಿ ಬ್ಯಾಂಕ್ ಕೋರ್ ಬ್ಯಾಂಕಿಂಗ್ ಸೌಲಭ್ಯ ಹೊಂದಿದೆ. ಇದರಿಂದ ರೈತರು ತಾವು ಎಲ್ಲೇ ಇದ್ದರೂ ಹಣ ಪಡೆದುಕೊಳ್ಳುವಲ್ಲಿ ಸಹಕಾರಿಯಾಗಿದೆ. ಜತೆಗೆ ಕೆಸಿಸಿ ಬ್ಯಾಂಕ್ ಶೇ. 3ರಲ್ಲಿ ಆಕಳು ಸಾಲ, ಮಹಿಳಾ ಸಂಘಗಳಿಗೆ ಶೇ. 4ರಷ್ಟು ಬಡ್ಡಿ ಸಾಲದ ಜತೆಗೆ ಹಲವು ರೀತಿಯ ಸಾಲಸೌಲಭ್ಯ ನೀಡುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.
ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮಚಂದ್ರ ಭಟ್ ಮಾತನಾಡಿ, ಈ ವರ್ಷ ಪ್ರತಿ ತಿಂಗಳಿಗೆ 2 ಲಕ್ಷ ಲೀಟರ್ ಹಾಲು ಉತ್ಪಾದನೆಯ ಗುರಿ ಹೊಂದಿದೆ. ಕಳೆದ ತಿಂಗಳಲ್ಲಿ 1 ಲಕ್ಷ 60 ಸಾವಿರ ಲೀಟರ್ ಹಾಲು ಉತ್ಪಾದಿಸಲಾಗಿದೆ. ಇದರಲ್ಲಿ 90 ಸಾವಿರ ಲೀ. ಹಾಲನ್ನು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ. 50 ಸಾವಿರ ಲೀಟರ್ ಹಾಲನ್ನು ಹೊರರಾಜ್ಯಗಳಿಗೆ ಮಾರಾಟ ಮತ್ತು ಉಳಿದ ಹಾಲನ್ನು ಪೌಡರ್ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಶುದ್ಧ ಹಾಲು ಉತ್ಪಾದನೆ, ಹಾಲಿನ ಸಂರಕ್ಷಣೆ ಕುರಿತು, ಹೊಸ ತಂತ್ರಜ್ಞಾನ, ಕಾಯ್ದೆಗಳ ಕುರಿತು ಕಾರ್ಯಾಗಾರ, ತರಬೇತಿ ಶಿಬಿರದ ಮೂಲಕ ಮಾಹಿತಿ    ನೀಡಲಾಗುತ್ತಿದೆ. ಫೆ. 15ರಿಂದ ರಾಜ್ಯಾದ್ಯಂತ ಕಾಲುಬೇನೆಗೆ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ   ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾದ ನೀಲಕಂಠ ಅಸೂಟಿ, ಎಸ್.ಪಿ. ಪಾಟೀಲ ಮುಂತಾದವರು ಮಾತನಾಡಿದರು. ಎಚ್.ಜಿ. ಹಿರೇಗೌಡ್ರ, ಸಾವಿತ್ರಿ ಕಡಿ, ಎಸ್.ಬಿ. ಹಿರೇಮಠ, ಎಂ.ಎಸ್. ಕಲಗುಡಿ, ಸಿ.ಎಂ. ಪಾಟೀಲ, ಬಿ.ವಿ. ಪಾಟೀಲ, ಎಸ್.ವಿ. ಯಂಡಿಗುಡಿ, ಪ್ರಶಾಂತ ಮುದೋಳ, ಪಿ.ಎಸ್. ಆಶಿ, ಎಚ್.ಎನ್. ಬಸವರಾಜ, ಜಿ.ಎಸ್. ಸಾಲೋಟಗಿ ಸೇರಿದಂತೆ ರೋಣ ಶಿರಹಟ್ಟಿ ತಾಲೂಕಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು. ಎಂ.ವಿ. ಮಡಿವಾಳರ ಸ್ವಾಗತಿಸಿದರು. ನಾಗರಾಜ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement