ಜಿಲ್ಲಾ ಸಮ್ಮೇಳನಕ್ಕೆ ಸ್ಥಳ ಪರಿಶೀಲಿಸಿದ ಡಿಸಿ
ಕನ್ನಡಪ್ರಭ ವಾರ್ತೆ, ರೋಣ, ಫೆ .13
ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಫೆ. 21 ಮತ್ತು 22ರಂದು ನಡೆಯಲಿರುವ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುವ ಹಿನ್ನೆಲೆಯಲ್ಲಿ ಸಮ್ಮೇಳನ ನಡುವ ಸ್ಥಳ ಹಾಗೂ ತಾತ್ಕಾಲಿಕ ಹೆಲಿಪ್ಯಾಡ್ ನಿಲ್ದಾಣದ ಸ್ಥಳವನ್ನು ಗುರುವಾರ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮೇಳನದ ಸಮಾರೋಪ ಸಮಾರಂಭಕ್ಕೆ ಫೆ. 22ರಂದು ಸಾಯಂಕಾಲ 4.15ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಪಟ್ಟಣಕ್ಕೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಬರಮಾಡಿಕೊಳ್ಳಲು ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗುವುದು. ಸಿಎಂ ಬರುವ ದಿನದಂದು ಹಾಗೂ ಸಮ್ಮೇಳನ ಉದ್ಘಾಟನೆ ದಿನದಂದು ಯಾವುದೇ ರೀತಿಯ ಟ್ರಾಫಿಕ್ ಜಾಮ್ ಆಗದಂತೆ ಪೊಲೀಸ್ ಇಲಾಖೆ ಮುಂಜಾಗ್ರತೆ ವಹಿಸಬೇಕು. ಇಲ್ಲಿ ಕೇವಲ 45 ನಿಮಿಷದವರೆಗೆ ಸಿಎಂ ಕಾರ್ಯಕ್ರಮ ಇರುವುದರಿಂದ ಯಾವುದೇ ಅಡತಡೆಯಾಗದಂತೆ ಪ್ರತಿ ಇಲಾಖೆಯ ಜವಾಬ್ದಾರಿ ಅತಿ ಮುಖ್ಯವಾಗಿದೆ ಎಂದು ತಿಳಿಸಿದರು. ಜಿಲ್ಲಾ ಸಮ್ಮೇಳನ ಸಮಿತಿ ಪದಾಧಿಕಾರಿಗಳಾದ ಕಸಾಪ ಜಿಲ್ಲಾ ಕಾರ್ಯದರ್ಶಿ ಶರಣು ಗೋಗೇರಿ, ತಾಲೂಕು ಅಧ್ಯಕ್ಷ ಶಿವರಾಜ ಗುರಿಕಾರ, ತಾಲೂಕು ಪ್ರಧಾನ ಕಾರ್ಯದರ್ಶಿ ವಿ.ಬಿ. ಸೋಮನಕಟ್ಟಿಮಠ, ಕೆ.ಎಸ್. ಕಳಕನ್ನವರ, ಸಿ.ಜಿ. ಹಡೆದಗಡ್ಡಿ, ಸಿ.ಕೆ. ಕೇಸರಿ ಮುಂತಾದವರೊಂದಿಗೆ ಸಮ್ಮೇಳನದ ಕಾರ್ಯಕ್ರಮದ ಕುರಿತು ಚರ್ಚಿಸಿದ ಅವರು, ಸಮ್ಮೇಳನ ನಡೆಯುವ ವೇಳೆ ಸ್ವಚ್ಛತೆ ಕಾಪಾಡುವಲ್ಲಿ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳೊಂದಿಗೆ ಜಿಪಂ ಸಿಇಒ ವೀರಣ್ಣ ತುರಮರಿ, ತಹಸೀಲ್ದಾರ್ ಎ.ಜಿ. ಪಂಡಿತ, ಎಸ್‌ಪಿ ಡಾ. ಎಸ್.ಡಿ. ಶರಣಪ್ಪ, ಡಿಎಸ್ಪಿ ವಿಜಯ ಡಂಬಳ, ಲೋಕೋಪಯೋಗಿ ಗದಗ ಎಇ ಸಿ.ಆರ್. ಬಳ್ಳಾರಿ, ಸಿಪಿಐ ವೆಂಕಟಪ್ಪ ನಾಯಕ, ಪಿಎಸ್‌ಐ ಡಿ.ಬಿ. ಪಾಟೀಲ, ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ಮುಖ್ಯಾಧಿಕಾರಿ ಬಾಬುರಾವ್ ಕಮತಗಿ, ನ್ಯಾಯವಾದಿ ವಿ.ಆರ್. ಗುಡಿಸಾಗರ, ಕೆಂಚಪ್ಪ ಗಡಗಿ, ಪುರಸಭೆ ಸದಸ್ಯರಾದ ಮಂಜುನಾಥ ಹಾಳಕೇರಿ, ಅಜ್ಜಪ್ಪ ರಡ್ಡೇರ, ತಾಪಂ ಇಒ ಎಸ್.ಎಂ. ಪಿಡಶೆಟ್ಟಿ, ಡಾ. ವೈ.ಬಿ. ಕೊಟ್ಟೂರಶೆಟ್ಟರ್, ಎಇಇ ಕೆ.ಎಲ್. ಕಟ್ಟಿಮನಿ, ಪಿ.ಡಬ್ಲ್ಯುಡಿ ಎಇಇ ಎಂ.ಬಿ. ದಾನರಡ್ಡಿ, ಕೆಇಬಿ ಎಇಇ ಪ್ರಕಾಶ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.