ಪುರಸಭೆ ಅಧ್ಯಕ್ಷರು ಸರಿಯಾಗಿ ಆಡಳಿತ ನಡೆಸುತ್ತಿಲ್ಲ: ಎಂ.ಎಸ್. ಹಡಪದ
ಗಜೇಂದ್ರಗಡ: ಸ್ಥಳೀಯ ಪುರಸಭೆ ಅಧ್ಯಕ್ಷರು ಜನಸಾಮಾನ್ಯರ ಕುಂದುಕೊರತೆಗಳ ಬಗ್ಗೆ ಚರ್ಚಿಸಲು ಸಾಮಾನ್ಯ ಸಭೆ ನಡೆಸದೆ ತುಘಲಕ್ ಮಾದರಿಯ ಆಡಳಿತ ನಡೆಸುತ್ತಿದ್ದಾರೆ. ಇದರಿಂದ ಪುರಸಭೆ ಆಡಳಿತ ವಿರುದ್ಧ ಜನ ರೋಸಿದ್ದಾರೆ ಎಂದು ಪುರಸಭೆ ಸಿಪಿಐ(ಎಂ) ಪಕ್ಷ ಸದಸ್ಯ ಎಂ.ಎಸ್. ಹಡಪದ ಆರೋಪಿಸಿದರು.
ಪುರಸಭೆಯ ಸಭಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರದ ನಿಯಮಾವಳಿಯಂತೆ ಪ್ರತಿ ತಿಂಗಳಿಗೊಮ್ಮೆ ಅಧ್ಯಕ್ಷರು ಸಾಮಾನ್ಯಸಭೆ ಕರೆದು ಸಾರ್ವಜನಿಕರ ಕುಂದುಕೊರತೆಗಳ ಜೊತೆಗೆ ಆಡಳಿತ ನಿರ್ವಹಣೆ ಕುರಿತು ಚರ್ಚಿಸಿ ಕಾರ್ಯಗತಗೊಳಿಸಬೇಕು. ಪುರಸಭೆ ಅಧ್ಯಕ್ಷರು ಈ ನಿಯಮ ಗಾಳಿಗೆ ತೂರಿ ಆಡಳಿತ ನಡೆಸುತ್ತಿದ್ದಾರೆ. ಸ್ಥಳೀಯ ಆಡಳಿತ ಅಧಿಕಾರ ವಹಿಸಿಕೊಂಡು ಎಂಟು ತಿಂಗಳು ಕಳೆದಿವೆ. ಈ ಎಂಟು ತಿಂಗಳಲ್ಲಿ ಎರಡು ಬಾರಿ ಮಾತ್ರ ಕಾಟಾಚಾರದ ಸಾಮಾನ್ಯ ಸಭೆ ನಡೆಸಿದ್ದಾರೆ. ಪಟ್ಟಣದ ಗುಡ್ಡಿದ ಬಳಿ ಪುರಸಭೆ ವತಿಯಿಂದ ನಿರ್ಮಿಸಿರುವ ಉದ್ಯಾನಕ್ಕೆ ಹುತಾತ್ಮ ಭಗತ್‌ಸಿಂಗರ ಹೆಸರು ನಾಮಕರಣ, ಪಟ್ಟಣದಲ್ಲಿ ಖಾಸಗಿ ಒಡೆತನದವರು ನಿರ್ಮಿಸಿರುವ ಬಡಾವಣೆಗಳಲ್ಲಿ ಪುರಸಭೆಗೆ ಕಾಯ್ದಿರಿಸಿದ ಜಾಗೆಗಳಿಗೆ ತಂತಿ ಬೇಲಿ, ಹಾಕಿ ಪುರಸಭೆ ನಾಮಫಲಕ ಹಾಕಬೇಕೆಂದು ಮೊದಲ ಸಾಮಾನ್ಯ ಸಭೆಯಲ್ಲಿ ಕೈಗೊಂಡ ಠರಾವುನ್ನು ಇನ್ನೂವರೆಗೂ ಕಾರ್ಯ ರೂಪಕ್ಕೆ ತರದಿರುವುದು ಆಡಳಿತ ವ್ಯವಸ್ಥೆ ಬಗೆಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ ಎಂದು ಆರೋಪಿಸಿದರು.
ಕೂಡಲೇ ಸರ್ಕಾರದ ನಿಯಮಾವಳಿಯಂತೆ ಸಾಮಾನ್ಯ ಸಭೆ ಕರೆದು ಪಟ್ಟಣದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರಕ್ಕೆ ಮುಂದಾಗದಿದ್ದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಸಿಪಿಐ(ಎಂ) ಪಕ್ಷ ಪುರಸಭೆ ಆಡಳಿತ ವಿರುದ್ಧ ಉಗ್ರ ಹೋರಾಟಕ್ಕೆ ಮುಂದಾಗಲಿದೆ ಎಂದು ತಿಳಿಸಿದರು.