ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಭಕ್ತರ ಹೃದಯದಲ್ಲಿ ಸ್ಥಾನ ಸಿಕ್ಕಾಗ ಸ್ವಾಮಿಗಳು ಶ್ರೀಮಂತರು: ಶ್ರೀ

Vishwanath S
Updated On : 14 Feb 2014, 1:34 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಫೆ. 13
ಒಂದು ಮಠಕ್ಕೆ ನೂರಾರು ಎಕರೆ ಆಸ್ತಿ ಇದ್ದರೆ, ದೊಡ್ಡ ದೊಡ್ಡ ಶಾಲಾ-ಕಾಲೇಜುಗಳಿದ್ದರೆ, ಸಾಕಷ್ಟು ಬೆಳ್ಳಿ, ಬಂಗಾರ, ವಜ್ರಗಳಿದ್ದರೆ ಮಾತ್ರ ಸ್ವಾಮಿಗಳು ಶ್ರೀಮಂತರಾಗಲ್ಲ. ಭಕ್ತರ ಹೃದಯದಲ್ಲಿ ಸ್ಥಾನ ಸಿಕ್ಕಾಗ ಸ್ವಾಮಿಗಳು ಶ್ರೀಮಂತರಾಗುತ್ತಾರೆ ಎಂದು ಕೊಪ್ಪಳ ಗವಿಮಠದ ಜ.ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳು ಹೇಳಿದರು.
ಅವರು ಬುಧವಾರ ರಾತ್ರಿ ಮುಂಡರಗಿ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಮಾಜ ಚಿಂತನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾತ್ರೆಯಲ್ಲಿ ಕೇವಲ ಉತ್ತತ್ತಿ ಒಗೆದು, ಮನೆಯಲ್ಲಿ ಸಿಹಿ ಅಡುಗೆ ಮಾಡಿಕೊಂಡು ಊಟ ಮಾಡಿ ಮುಗಿಸಿದರೆ ಅಂತಹ ಜಾತ್ರೆಗೆ ಅರ್ಥ ಬರುವುದಿಲ್ಲ. ಜಾತ್ರೆಯ ನೆಪದಲ್ಲಿ ವಿವಿಧ ವಿಷಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರೆ ಆ ಜಾತ್ರೆಗೊಂದು ನಿಜವಾದ ಅರ್ಥ ಬರುತ್ತದೆ. ಯಾವುದೇ ದೇವರು ನಮ್ಮನ್ನು ಕಾಡುವುದಿಲ್ಲ. ಒಂದು ವೇಳೆ ಕಾಡಿದರೆ ಅವುಗಳು ದೇವರೇ ಅಲ್ಲ. ನಮ್ಮಲ್ಲಿರುವ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇಂದಿಗೂ ಅನೇಕ ಮೂಢನಂಬಿಕೆಗಳು ಜೀವಂತವಾಗಿವೆ. ನಮ್ಮಲ್ಲಿರುವ ಅಜ್ಞಾನ ನಮ್ಮನ್ನು ಇನ್ನೂ ಕಾಡುತ್ತಿದೆ. ಮೂಢನಂಬಿಕೆ ಬೇರು ಸಹಿತ ಕಿತ್ತೊಗೆಯಲು ಜನರಲ್ಲಿ ಜಾಗೃತಿ ತುಂಬುವುದೇ ನಿಜವಾದ ಜಾತ್ರೆಗಳ ಉದ್ದೇಶವಾಗಿದೆ ಎಂದರು.
ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಶಾಸಕ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ರು. 5 ಲಕ್ಷ ಶ್ರೀಮಠಕ್ಕೆ ನೀಡುವುದಾಗಿ ತಿಳಿಸಿದರು. ಜ. ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಾತ್ರಾ ಕಮಿಟಿ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ. ಆರ್.ಎಂ. ಷಡಕ್ಷರಯ್ಯನವರು ಸಂಪಾದಿಸಿದ ಕಲಕೇರಿ ಸಂಸ್ಥಾನದ ದಾಖಲೆಗಳ ಸಾಂಸ್ಕೃತಿಕ ಅಧ್ಯಯನ ಗ್ರಂಥವನ್ನು ಜ. ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಬಿಡುಗಡೆಗೊಳಿಸಿದರು. ನಂತರ ಶ್ರೀಗಳು ರಚಿಸಿದ ಮೂರು ಕೃತಿಗಳು ಬಿಡುಗಡೆಗೊಂಡವು. ನಂತರ 2012-13ನೇ ಸಾಲಿನ ಜ.ಅನ್ನದಾನೀಶ್ವರ ಪ್ರತಿಷ್ಠಾನದ ಪುರಸ್ಕಾರವನ್ನು ಗುಂಡನಾಯಕನಹಳ್ಳಿಯ ಪ್ರೊ. ಶಂಕರಗೌಡ ಬಿರಾದಾರ ಅವರಿಗೆ ನೀಡಿ ಗೌರವಿಸಲಾಯಿತು. ಡಾ. ವೃಷಭೇಂದ್ರ ಸ್ವಾಮಿ, ಕೆ.ಆರ್. ಪರಂಜ್ಯೋತಿ, ಡಾ. ಆರ್.ಎಂ. ಷಡಕ್ಷರಯ್ಯ ಮಾತನಾಡಿದರು. ಬಳಗಾನೂರಿನ ಶಿವಶಾಂತವೀರ ಶರಣರು, ಹೂವಿನಶಿಗ್ಲಿಯ ಚನ್ನವೀರ ಶ್ರೀ, ವಿರೂಪಾರ ಮುಧಕೇಶ್ವರ ಶ್ರೀ ಸೇರಿದಂತೆ ಅನೇಕ ಪೂಜ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement