ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮತ್ತೆ ಗರಿಗೆದರಿದ ಗಜೇಂದ್ರಗಡ ತಾಲೂಕು ಕೇಂದ್ರದ ಆಸೆ

Vishwanath S
Updated On : 14 Feb 2014, 1:33 am

ಗಜೇಂದ್ರಗಡ: ಸಿಎಂ ಸಿದ್ದರಾಮಯ್ಯ ಅವರು ಫೆ. 14ರಂದು ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಗಜೇಂದ್ರಗಡವನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಘೋಷಿಸಿ, ಹೊಸ ತಾಲೂಕುಗಳಿಗೆ ಅನುದಾನ ನೀಡಿ ಅಧಿಕೃತ ತಾಲೂಕಾಡಳಿತಕ್ಕೆ ಚಾಲನೆ ನೀಡಲಿದ್ದಾರೆಯೇ ಎನ್ನುವ ಆಸೆ ಜನತೆಯಲ್ಲಿ ಮೂಡಿದೆ.
ಹಿಂದಿನ ಬಿಜೆಪಿ ಸರ್ಕಾರ ಅಂತಿಮ ಅವಧಿಯಲ್ಲಿ ಗಜೇಂದ್ರಗಡ ಸೇರಿದಂತೆ ರಾಜ್ಯದ 43 ಹೊಸ ತಾಲೂಕು ಕೇಂದ್ರ ಎಂದು ಘೋಷಿಸಿತ್ತು. ಹೊಸದಾಗಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರದಿಂದ ಅನುದಾನ ಕೊರತೆ ಎದುರಾದ ಪರಿಣಾಮ ಹೊಸ ತಾಲೂಕುಗಳಿಗೆ ಸದ್ಯ ಚಾಲನೆ ನೀಡಲಾಗಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಇದರಿಂದ ಹೊಸ ತಾಲೂಕು ರಚನೆಯ ಕನಸು ಮತ್ತೆ ಜನರಲ್ಲಿ ನಿರಾಸೆ ಮೂಡಿಸಿತ್ತು.
43 ಹೊಸ ತಾಲೂಕುಗಳ ಜತೆಗೆ ಇನ್ನಷ್ಟು ಹೊಸ ತಾಲೂಕು ಘೋಷಣೆ ಸೇರ್ಪಡೆ ವಿಷಯ ಈಗ ಕೇಳಿಬರುತ್ತಿದೆ. ಹೀಗಾಗಿ ಇಂದು ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಹೊಸ ತಾಲೂಕುಗಳ ಆಸೆ ಜನರಲ್ಲಿ ಮೂಡಿದೆ.
ಜಿಲ್ಲಾಡಳಿತವೂ ಗಜೇಂದ್ರಗಡ ತಾಲೂ ಕು ರಚನೆಗೆ ಸಿದ್ಧತೆ ಕೈಗೊಂಡಿದೆ. ಇದಕ್ಕೆ ಪೂರಕವೆಂಬಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಹಾಗೂ ಗದಗ ಜಿಲ್ಲಾಡಳಿತದ ಪತ್ರದ ಸಂಖ್ಯೆ ಆರ್.ಇ.ವಿ/ವಿವ/350/2012-13 ಇಲಾಖೆ ವತಿಯಿಂದ ಕಳೆದ ಜ. 15ರಂದು ರೋಣ ತಾಲೂಕಿನ ಗಜೇಂದ್ರಗಡ ಪುರಸಭೆಗೆ ಹಾಗೂ ವಿಶೇಷ ತಹಸೀಲ್ದಾರ್‌ಗೆ ಹೊಸ ತಾಲೂಕು ರಚನೆಗೆ ಸಂಬಂಧಿಸಿದಂತೆ ಕೆಲ ಮುಖ್ಯ ದಾಖಲೆಗಳನ್ನು ಒದಗಿಸಲು ಮಾಹಿತಿ ರವಾನಿಸಿದ ಬಗ್ಗೆ ಅಧಿಕಾರಿಗಳಿಂದ ತಿಳಿದು ಬಂದಿದೆ.
ತಾಲೂಕು ಕೇಂದ್ರ ಕಚೇರಿ ಸೇರಿದಂತೆ ವಿವಿಧ ಇಲಾಖೆಯ ಕಾರ್ಯಾಲಯಗಳ ಕಟ್ಟಡ ನಿರ್ಮಾಣಕ್ಕಾಗಿ ಖಾಸಗಿ ಜಮೀನುಗಳನ್ನು ಖರೀದಿಸಬೇಕಾದ ವಿಸ್ತೀರ್ಣ       (ಸರ್ವೇ ನಂಬರ್), ಸರ್ಕಾರಿ ಕಚೇರಿಗೆ ಖಾಸಗಿ ಕಟ್ಟಡ ಬಾಡಿಗೆ ರೂಪದಲ್ಲಿ ಲಭ್ಯವಿರುವ ಕಟ್ಟಡಗಳ ಸಂಖ್ಯೆ, ನೀರಿನ ಮೂಲ, ಕೊಳವೆ ಬಾವಿಗಳ ಸಂಖ್ಯೆ, ಸರ್ಕಾರಿ ಕೆರೆಗಳ ಸಂಖ್ಯೆ ಸೇರಿದಂತೆ ಶೈಕ್ಷಣಿಕ, ವೈದ್ಯಕೀಯ, ರಾಷ್ಟ್ರೀಯ, ಪ್ರಾದೇಶಿಕ ಹಾಗೂ ಖಾಸಗಿ ಬ್ಯಾಂಕ್, ಕೃಷಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಸಂಗ್ರಹಿಸಲಾಗಿದೆ.
4 ಸಮಿತಿ ವರದಿ ಸಲ್ಲಿಕೆ: ಹೊಸ ತಾಲೂಕುಗಳ ಪುನರ್ ರಚನೆ ಸಂಬಂಧ ಈ ಹಿಂದೆ 4 ಸಮಿತಿಗಳು ವರದಿ ನೀಡಿದ್ದವು. ಇದರಲ್ಲಿ ಎಂ. ವಾಸುದೇವರಾವ್, ಪಿ.ಸಿ. ಗದ್ದಿಗೌಡರ, ಟಿ.ಎಂ. ಹುಂಡೇಕಾರ ಸಮಿತಿಗಳು ಗಜೇಂದ್ರಗಡ ತಾಲೂಕು ಕೇಂದ್ರವಾಗಲು ಅರ್ಹವಾಗಿದೆ ಎಂದು ವರದಿ ಸಲ್ಲಿಸಿದ್ದವು. ಆದರೆ, 2008ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ನೇಮಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಂ.ಬಿ. ಪ್ರಕಾಶ ನೇತೃತ್ವದ ಸಮಿತಿ ಗಜೇಂದ್ರಗಡವನ್ನು ನೂತನ ತಾಲೂಕು ಪಟ್ಟಿಯಿಂದ ಕೈಬಿಟ್ಟಿತು.
ಕೆಲ ದಿನಗಳ ಹಿಂದೆ ಸರ್ಕಾರ ಎಂ.ಬಿ. ಪ್ರಕಾಶ ವರದಿ ಆಧರಿಸಿ ನೂತನ ತಾಲೂಕು ಕೇಂದ್ರಗಳ ರಚನೆಗೆ ಮುಂದಾಗಿದೆ ಎಂದು ತಿಳಿಯಲಾಗಿತ್ತು. ಇದನ್ನರಿತ ಗಜೇಂದ್ರಗಡ ತಾಲೂಕು ಹೋರಾಟ ಸಮಿತಿ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳು ಆಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರರನ್ನು ಭೇಟಿ ಮಾಡಿ ತಾಲೂಕು ಕೇಂದ್ರವಾಗುವ ಕುರಿತು ಸಮಗ್ರ ಭೌಗೋಳಿಕ ಮಾಹಿತಿ ನೀಡಿ ಮನವಿ ಸಲ್ಲಿಸಿತು. ಬಳಿಕ ಎಲ್ಲ ಸಮಿತಿಗಳು ನೀಡಿದ ವರದಿ ಆಧಾರ ಹಿನ್ನೆಲೆಯಲ್ಲಿ ಸರ್ಕಾರ ಗಜೇಂದ್ರಗಡ ಸೇರಿದಂತೆ ರಾಜ್ಯದ 43 ಹೊಸ ತಾಲೂಕುಗಳಿಗೆ ಹಸಿರು ನಿಶಾನೆ ತೋರಿತು.
ಈಗ ರಾಜ್ಯದ ನೂತನ ಸರ್ಕಾರ ಹೊಸ ತಾಲೂಕುಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಅನುದಾನ ಒದಗಿಸಿ ಆಡಳಿತಾತ್ಮಕವಾಗಿ ಅಧಿಕೃತ ಚಾಲನೆ ನೀಡಿದರೆ ಜನತೆಯ ದಶಕದ ಕನಸು ನನಸಾಗಲಿದೆ ಎಂದು ಆಶಾಭಾವನೆಯಿಂದ ರಾಜ್ಯ ಬಜೆಟ್‌ನತ್ತ ಜನ ಚಿತ್ತ ಹರಿಸಿದ್ದಾರೆ.
ತಾಲೂಕಿಗೆ ಗುರುತಿಸಿದ ಗ್ರಾಮಗಳು
ನರೇಗಲ್, ಮಾರನಬಸರಿ, ನಾಗೇಂದ್ರಗಡ, ಚಿಲಝರಿ, ಲಕ್ಕಲಕಟ್ಟಿ, ಉಣಚಗೇರಿ (ಗಜೇಂದ್ರಗಡ), ಅಮರಗಟ್ಟಿ, ಪುರ್ತಗೇರಿ, ರುದ್ರಾಪುರ, ಹಿರೇಕೊಪ್ಪ, ಮಾಟರಂಗಿ, ರಾಂಪುರ, ನಾಗರಸಕೊಪ್ಪ, ವೀರಾಪುರ, ಗೋಗೇರಿ, ಕುಂಟೋಜಿ, ರಾಜೂರ, ವದೇಗೋಳ, ಭೈರಾಪುರ, ಜಿಗೇರಿ, ಕೊಡಗಾನೂರ, ಮ್ಯಾಕಲಝರಿ, ದಿಂಡೂರ, ಗೌಡಗೇರಿ, ನಿಡಗುಂದಿ, ಬೆಣಚಮಟ್ಟಿ, ಕಳಕಾಪುರ, ಹಾಲಕೇರಿ, ಸೂಡಿ, ಬಳಗೋಡ, ಬೆವಿನಕಟ್ಟಿ, ಗುಳಗುಳಿ, ಇಟಗಿ, ದ್ಯಾಮುಣಸಿ, ಮುಶಿಗೇರಿ, ಹಿರೇಅಳಗುಂಡಿ, ಶಾಂತಗೇರಿ, ಚಿಕ್ಕಅಳಗುಂಡಿ, ನೆಲ್ಲೂರ, ಹಿರೇಕುರುಮನಾಳ, ಬೊಮ್ಮಸಾಗರ, ಕಲ್ಲಿಗನೂರ, ಸರ್ಜಾಪುರ ಗ್ರಾಮ ಸೇರಿ ಒಟ್ಟು 43 ಗ್ರಾಮಗಳು ಗಜೇಂದ್ರಗಡ ತಾಲೂಕಿಗೆ ಸೇರಿಸಲು ಗುರುತಿಸಿದ ಗ್ರಾಮಗಳು.


-ಡಿ.ಜಿ. ಮೋಮಿನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement