ಸಮ್ಮೇಳನಕ್ಕೆ ಆಯ್ಕೆ ಋಣ ಹೆಚ್ಚಿಸಿದೆ: ಶಿರಹಟ್ಟಿ
ಶಿರಹಟ್ಟಿ/ಲಕ್ಷ್ಮೇಶ್ವರ: ಶಿರಹಟ್ಟಿ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿ ನನ್ನ ಮೇಲೆ ದೊಡ್ಡ ಋಣಭಾರ ಹೊರಿಸಿದ್ದೀರಿ, ಅದಕ್ಕಾಗಿ ಶಿರಹಟ್ಟಿ ತಾಲೂಕಿನ ಜನತೆ ಹಾಗೂ ಸಾಹಿತ್ಯಾಭಿಮಾನಿಗಳು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಸದಾಋಣಿಯಾಗಿದ್ದೇನೆ ಎಂದು ಶಿರಹಟ್ಟಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ಜಿ.ಎಂ. ಶಿರಹಟ್ಟಿ ಅಭಿಪ್ರಾಯಪಟ್ಟರು.
ಈಚೆಗೆ ಬೆಂಗಳೂರಿನ ದೂರದರ್ಶನ ಕೇಂದ್ರದಲ್ಲಿ ಅವರನ್ನು ಭೇಟಿ ಮಾಡಿ ಸಮ್ಮೇಳನದ ಅಧ್ಯಕ್ಷ ಸ್ಥಾನವಹಿಸಿಕೊಳ್ಳುವಂತೆ ಆಹ್ವಾನ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಶಿರಹಟ್ಟಿ ತಾಲೂಕಿನ ಮಣ್ಣಿನಲ್ಲಿ ಸಾಕಷ್ಟು ಸಾಹಿತ್ಯದ ಸತ್ವವಿದ್ದು ಇನ್ನೂ ಅನೇಕ ಸಾಹಿತಿಗಳು ಎಲೆ ಮರೆಯ ಕಾಯಿಯಂತೆ ಸಾಹಿತ್ಯದ ಸೇವೆ ಮಾಡುತ್ತಿದ್ದಾರೆ. ಕನ್ನಡ ತಾಯಿ ಭುವನೇಶ್ವರಿಯ ತೇರನ್ನು ತಾಲೂಕಿನ ಎಲ್ಲ ಜನತೆ ಸೇರಿ ಮುನ್ನಡೆಸೋಣ, ಕನ್ನಡವನ್ನು ಕಟ್ಟೋಣ. ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೂಡಬಿದಿರೆಯ ಖ್ಯಾತ ಸಂಘಟಿಕ, ಸಾಹಿತಿ, ಡಾ. ಮೋಹನ ಆಳ್ವಾ ಅವರು ಉದ್ಘಾಟಿಸುತ್ತಿರುವುದು ಇನ್ನೂ ಹೆಚ್ಚಿನ ಸಂತೋಷವನ್ನುಂಟು ಮಾಡಿದೆ ಎಂದರು. ತಾಲೂಕು ಕಸಾಪದ ಅಧ್ಯಕ್ಷ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಗತ ಸಮಿತಿಯ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ್ ಸಮ್ಮೇಳನದ ತಯಾರಿ ಕುರಿತು ಸರ್ವಾಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟರು. ಲೋಕೇಶ ದೊಡ್ಡಮನಿ, ಎಫ್.ಜಿ. ಪಾಟೀಲ, ಅಶೋಕ ಸೊರಟೂರ ಮುಂತಾದವರು ಹಾಜರಿದ್ದರು. ನಾಗರಾಜ ಅಕ್ಕೂರ ವಂದಿಸಿದರು.
ಮೃತಪಟ್ಟವರ ಕುಟುಂಬಕ್ಕೆ ರು. 5 ಲಕ್ಷ ನೀಡಿ: ಒತ್ತಾಯ
ಗದಗ: ಜಿಲ್ಲೆಯ ಮುಂಡರಗಿ-ಮೇವುಂಡಿ ಮಾರ್ಗಮಧ್ಯದಲ್ಲಿ ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ರು. 5 ಲಕ್ಷ ಹಾಗೂ ಗಾಯಾಳುಗಳಿಗೆ ರು. 2 ಲಕ್ಷ ನೀಡಬೇಕೆಂದು ಒತ್ತಾಯಿಸಿ ಜೈ ಭೀಮ ಸೇನಾ ಸಂಘರ್ಷ ಸಮಿತಿ ಗದಗ ಘಟಕದಿಂದ ಗುರುವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಈ ಟ್ರ್ಯಾಕ್ಟರ್ನಲ್ಲಿ ಪ್ರಯಾಣಿಸುತ್ತಿದ್ದವರು ಬಡಕುಟುಂಬದವರೆಲ್ಲರೂ ದಲಿತರು, ಕೂಲಿ ಕಾರ್ಮಿಕರಾಗಿದ್ದಾರೆ. ರಾಜ್ಯ ಸರ್ಕಾರವು ಮೃತರ ಕುಟುಂಬಕ್ಕೆ ರು. 5 ಲಕ್ಷ ನೀಡಬೇಕು ಎಂದು ಒತ್ತಾಯಿಸಿದರು. ಜೈಭೀಮ ಸೇನಾ ಸಂಘರ್ಷ ಸಮಿತಿಯ ಅಧ್ಯಕ್ಷ ಗಣೇಶ ಹುಬ್ಬಳ್ಳಿ, ವಿಜಯ ಕಲ್ಮನಿ, ಕಾರ್ಯದರ್ಶಿ ರಾಘವೇಂದ್ರ ಪರಾಪುರ, ಉಪಾಧ್ಯಕ್ಷ ಮಂಜುನಾಥ ತೌಜಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿಮನಿ, ದೀಪಕ ಕಲ್ಮನಿ, ಪರಶುರಾಮ ಸಂಗಾಪುರ, ಓಬಳೇಶ ಯಶವಂತಪುರ, ವಿಜಯ ತಳಗೇರಿ, ಮಂಜುನಾಥ ಪರಾಪುರ, ಶ್ರೀಕಾಂತ ಪಿರೂರ, ಹೇಮಂತ ಹುಬ್ಬಳ್ಳಿ, ಮಂಜುನಾಥ ಕಲ್ಲೂರ, ಪರಶುರಾಮ ಸೀತಿಮನಿ, ಎ.ವಿಜಯಕುಮಾರ, ಬಸವರಾಜ ಬದಾಮಿ, ಪ್ರೇಮ ಹುಬ್ಬಳ್ಳಿ, ಮರಿಯಪ್ಪ ಪರಾಪುರ, ಶಂಕರ ಹುಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಮೋದಿ ಬ್ಯಾನರ್ ತೆಗೆಸಿದ ಪುರಸಭೆ: ಆಕ್ರೋಶ
ನರಗುಂದ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ನಮೋ ಬ್ರಿಗೇಡ್ ಉದ್ಘಾಟನೆ ಅಂಗವಾಗಿ ಹಾಕಲಾಗಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಬ್ಯಾನರ್ಗಳನ್ನು ಪುರಸಭೆ ಅಧಿಕಾರಿಗಳು ಹರಿದು ಹಾಕಿದ್ದಕ್ಕೆ ಹಿಂದೂಪರ ಸಂಘಟನೆಗಳ ಯುವಕರು ಪುರಸಭೆಗೆ ಕೀಲಿ ಹಾಕಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾನರ್ಗಳನ್ನು ಹಿಂದೂಪರ ಸಂಘಟನೆಗಳಿಗೆ ತೆಗೆಯಲು ಯಾವುದೇ ಸೂಚನೆ ನೀಡದೇ ಏಕಾಏಕಿ ಅವುಗಳನ್ನು ತಮ್ಮ ಸಿಬ್ಬಂದಿಯ ಮೂಲಕ ತೆಗೆಸಿರುವುದು ಅಪರಾಧವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನವಾದ ಹಕ್ಕಿದೆ. ಆದರೆ, ಪುರಸಭೆಯ ಅಧಿಕಾರಿಗಳು ಅದನ್ನು ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ರೀತಿ ಬ್ಯಾನರ್ಗಳನ್ನು ಹರಿದು ಹಾಕಲು ನಿಮಗೆ ತಿಳಿಸಿದ್ದು ಯಾರು ಎನ್ನುವುದನ್ನು ಹೇಳುವರೆಗೂ ನಾವು ಪ್ರತಿಭಟನೆ ಮುಂದುವರಿಸುತ್ತೇವೆ ಎಂದಾಗ ಕಿರಿಯ ಎಂಜಿನಿಯರ ಬಿ.ಎ. ನದಾಫ್ ಈ ಬಗ್ಗೆ ಕ್ಷಮೆ ಕೇಳಿ ನಾಳೆ ಗಾಂಧಿ ಚೌಕದಲ್ಲಿ ದಿ. ಮಲ್ಲಿಕಾರ್ಜುನ ಬಂಡಿಯವರು ಬ್ಯಾನರ್ ಮಾಡಿಸಿ ಹಾಕಲು ಪುರಸಭೆ ಕ್ರಮ ತೆಗೆದುಕೊಳ್ಳುತ್ತದೆ ಎಂದರು. ಇದಕ್ಕೆ ಯುವಕರು ಒಪ್ಪದೆ ಇದ್ದಾಗ ಸಿಪಿಐ ಎಸ್.ಆರ್. ಪಾಟೀಲ ಅವರು ಯುವಕರನ್ನು ಸಮಾಧಾನಪಡಿಸಿ ಮುಂದೆ ಹೀಗೆ ಆಗದಂತೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
ಸಂಜು ನಲವಡೆ, ಸಿದ್ದು ಹೂಗಾರ, ಶರಣು ಘಾಟಗೆ, ಪ್ರವೀಣ ಯಳ್ಳೂರ, ಪ್ರದೀಪ ಸುಬೇದಾರ, ಯೋಗೇಶ ಗುಡಾರದ, ವಿಶಾಂತ ಚಿತ್ರಗಾರ, ದಾನಪ್ಪ ಸಂಭಾಳಕೆ, ಅನಿಲ್ ಘಾಟಗೆ ಹಾಜರಿದ್ದರು.