ಸಮಾಜ ಏಳ್ಗೆಗೆ ದುಡಿದವರ ಸ್ಮರಣೆ ಅಗತ್ಯ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಫೆ. 15
ಬಂಜಾರ ಸಮಾಜದ ಕುಲಗುರುಗಳಾಗಿರುವ ಸಂತ ಸೇವಾಲಾಲ ಮಹಾರಾಜರು ಅಂದು ಸಮಾಜದ ಏಳ್ಗೆಗಾಗಿ ಮಾಡಿದ ಕಾರ್ಯವನ್ನು ಇಂದು ಸಮಾಜದ ಎಲ್ಲ ಬಾಂಧವರು ನೆನಪಿಸಿಕೊಳ್ಳಬೇಕಾಗಿದೆ. ನಮ್ಮಲ್ಲಿರುವ ಒಳಪಂಗಡಗಳನ್ನು ಮರೆತು ಒಗ್ಗಟ್ಟಿ ನಿಂದ ಸಾಗುವುದರಿಂದ ಸಾಮಾಜಿಕ, ರಾಜಕೀಯವಾಗಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ರಾಮಣ್ಣ ಲಮಾಣಿ ಅಭಿಪ್ರಾಯ ಪಟ್ಟರು.
ಶನಿವಾರ ಕರ್ನಾಟಕ ಪ್ರದೇಶ ಲಂಬಾಣಿ ಬಂಜಾರ ಕಲ್ಯಾಣ ಸೇವಾ ಸಂಘದ ಶಿರಹಟ್ಟಿ ತಾಲೂಕು ಘಟಕದಿಂದ ಸಂತ ಸೇವಾಲಾಲರ 275ನೇ ಜಯಂತ್ಯುತ್ಸವದ ಅಂಗವಾಗಿ ಪಟ್ಟಣದ ಬಿ.ಡಿ. ತಟ್ಟಿ ಕಿವುಡ ಮಕ್ಕಳ ವಸತಿ ಶಾಲೆ ಆವರಣದಲ್ಲಿ ಮಕ್ಕಳಿಗೆ ಸಿಹಿಯೂಟ ವಿತರಿಸಿ ಅವರು ಮಾತನಾಡಿದರು. ಬಂಜಾರ ಸಮಾಜದವರು ಸಮಾಜಮುಖಿಗಳಾಗಿ ಕಾರ್ಯ ಮಾಡುವ ನಿಟ್ಟಿನಲ್ಲಿ ಸಾಗುತ್ತಿದ್ದಾರೆ. ಆದರೆ, ಅವರಿಗೆ ಬೆಂಬಲ ನೀಡುವಂತಹ ಕಾರ್ಯಗಳು ಸಮಾಜದಲ್ಲಿ ಆಗುತ್ತಿಲ್ಲ, ಬಂಜಾರ ಸಮಾಜ ವಿಶಿಷ್ಟ ಸಂಸ್ಕೃತಿ ಹೊಂದಿದ ಸಮಾಜವಾಗಿದ್ದು, ತನ್ನ ಸಂಪ್ರದಾಯ ಸಂಸ್ಕೃತಿಗಳಿಂದ ಭಾರತದಲ್ಲಿ ಹೆಸರುವಾಸಿಯಾಗಿದೆ. ಇಂತಹ ವಿಶಿಷ್ಟ ಸಮಾಜದ ಕುಲಗುರುವಾಗಿರುವ ಸಂತ ಸೇವಾಲಾಲ ಅವರ ಇಷ್ಟದಂತೆ ಎಲ್ಲರೂ ಒಂದಾಗಿ ಸಾಗಿ ಸಂಘಟಿತರಾಗಬೇಕೆಂದು ಕರೆ ನೀಡಿದರು. ಗ್ರಾಪಂ ಮಾಜಿ ಅಧ್ಯಕ್ಷ ರಾಮಣ್ಣ ಲಮಾಣಿ, ಸಂಘದ ಶಿರಹಟ್ಟಿ ತಾಲೂಕು ಘಟಕ ಅಧ್ಯಕ್ಷ ಶಿವಪ್ಪ ಲಮಾಣಿ, ಎಂ.ಡಿ. ಪಾಟೀಲ ಮಾತನಾಡಿದರು. ಈ ಸಂದರ್ಭ ಟೋಪಣ್ಣ ಲಮಾಣಿ, ಪುಂಡಲೀಕ ಲಮಾಣಿ, ಪಿಎಸ್ಐ ವಿಕಾಸ್ ಪಿ.ಎಲ್., ನಾನಪ್ಪ ಲಮಾಣಿ, ಲಾಲಪ್ಪ ಲಮಾಣಿ, ದೇವಣ್ಣ ಛಬ್ಬಿ, ಚಂದಪ್ಪ ಲಮಾಣಿ, ಚಂದ್ರಶೇಖರ ಲಮಾಣಿ, ಸೋಮು ಲಮಾಣಿ, ವಿಠ್ಠಲ್ ನಾಯಕ, ತಾವರೆಪ್ಪ ಲಮಾಣಿ, ಮಹೇಶ ಲಮಾಣಿ, ಧರ್ಮಪ್ಪ ಲಮಾಣಿ, ಗಣೇಶ ನಾಯಕ, ಚಂದೆಪ್ಪ ಲಮಾಣಿ, ಉಮೇಶ ನೆಲೋಗಲ್, ಪರಮೇಶ ಸೂರಣಗಿ, ರಾಜು ನೆಲೋಗಲ್ ಇದ್ದರು.