3 ತಿಂಗಳ ಹೆಣ್ಣು ಮಗು ಪತ್ತೆ
ಕನ್ನಡಪ್ರಭ ವಾರ್ತೆ, ರೋಣ, ಫೆ. 16
ಪಟ್ಟಣದ ಗದಗ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಕಟ್ಟಡದ ಹಿಂದುಗಡೆ (ಕುಮಾರ ಲಾಡ್ಜ್ ಎದುರಿಗೆ) ಶುಕ್ರವಾರ ರಾತ್ರಿ ಅಂದಾಜು 3 ತಿಂಗಳ ಹೆಣ್ಣು ಮಗು ಪತ್ತೆಯಾಗಿದೆ.
ಘಟನೆ ವಿವರ: ಎಟಿಎಂ ಹಿಂದುಗಡೆಯಿಂದ ಶುಕ್ರವಾರ ನಡುರಾತ್ರಿ 1 ಗಂಟೆ ಸುಮಾರಿಗೆ ಮಗುವಿನ ಅಳುವ ಧ್ವನಿ ಎಟಿಎಂ ಭದ್ರತಾ ಸಿಬ್ಬಂದಿ ಹುಸೇನಸಾಬ ಗೋನಾಳ ಎಂಬುವರಿಗೆ ಕೇಳಿಸಿದೆ. ಅಲ್ಲಿ ನೋಡಿದಾಗ ಹೆಣ್ಣು ಮಗು ಅಳುತ್ತಿರುವುದು ಕಂಡಿದೆ. ತಕ್ಷಣ ಸಮೀಪದಲ್ಲಿದ್ದ ಪೊಲೀಸ್ ಠಾಣೆಗೆ ತಿಳಿಸಿದ್ದಾನೆ.
ಪೊಲೀಸರು ಮಗುವನ್ನು ನಡುರಾತ್ರಿಯೇ ಪಟ್ಟಣದ ಪಂಡಿತ ಡಾ. ಭೀಮಸೇನ ಜೋಶಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮಗುವಿನ ದೈಹಿಕ ಬೆಳವಣಿಗೆ ಗಮನಸಿ ಅಂದಾಜು 3 ತಿಂಗಳ ಮಗುವಿರಬಹುದು ಎಂದು ತಿಳಿಸಿದ್ದು, ಮಗು ಆರೋಗ್ಯಯುತವಾಗಿದೆ. ಆದರೆ, ಮಗುವಿನ ತಲೆ ಸ್ವಲ್ಪ ಉದ್ದ ಮತ್ತು ದೊಡ್ಡದಿದೆ. ಕಣ್ಣುಗಳು ಅಗಲವಾಗಿವೆ. ಮಗುವಿಗೆ ಅಗತ್ಯವಿರುವ ತಪಾಸಣೆ ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಶಿಶು ವಿಹಾರಕ್ಕೆ: ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮಗುವನ್ನು ಶನಿವಾರ ಗದಗದಲ್ಲಿರುವ ಶಿಶು ವಿಹಾರಕ್ಕೆ ಕಳಿಸಲಾಗಿದೆ ಎನ್ನಲಾಗಿದೆ. ಮಗುವಿನ ತಂದೆ, ತಾಯಿ ಅಥವಾ ಪೋಷಕರನ್ನು ಪತ್ತೆ ಹಚ್ಚುವಲ್ಲಿ ಇಲಾಖೆ ಶ್ರಮಿಸಲಿದೆ ಎಂದು ಸಿಡಿಪಿಒ ಬಿ.ಎಸ್. ಮೋಕಾಶಿ ತಿಳಿಸಿದ್ದಾರೆ.
ವಿರೂಪ ಕಾರಣ: ಮಗುವಿನ ತಲೆ, ಕಣ್ಣು ವಿರೂಪವಾಗಿದ್ದರಿಂದ ಈ ರೀತಿಯಾಗಿ ಅನಾಥವಾಗಿ ಎಸೆದು ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಕೂಡಲೇ ಮಗುವಿನ ತಂದೆ, ತಾಯಿ ಪತ್ತೆ ಹಚ್ಚುವಲ್ಲಿ ಪೊಲೀಸ್ ತಂಡವೊಂದನ್ನು ರಚಿಸಲಾಗುವುದು. ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಗೆ ತಿಳಿಸುವಲ್ಲಿ ಸಹಕಾರ ಅಗತ್ಯವಿದೆ ಎಂದು ಪಿಎಸ್‌ಐ ಡಿ.ಬಿ. ಪಾಟೀಲ ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ ಹುಸೇನಸಾಬ ಗೋನಾಳ ಮಾನವೀಯತೆಯನ್ನು ಸಾರ್ವಜನಿಕರು ಗುಣಗಾನ ಮಾಡುತ್ತಿದ್ದಾರೆ.
ಈ ಕುರಿತು ಹುಸೇನಸಾಬ ಗೋನಾಳ ಅವರೇ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಮಾನವೀಯತೆ ಮರೆತ ಮಗುವಿನ ತಂದೆ, ತಾಯಿಗಳ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶದ ಮಾತುಗಳು ಕೇಳಿ ಬಂದಿವೆ.