ಕುಡಿವ ನೀರಿಗೆ ಗೋವನಾಳ ಗ್ರಾಮಸ್ಥರ ಪರದಾಟ
ಲಕ್ಷ್ಮೇಶ್ವರ: ಸಮೀಪದ ಗೋವನಾಳ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕುಡಿವ ನೀರು ಪೂರೈಕೆ ಸ್ಥಗಿತವಾಗಿದ್ದು ಗ್ರಾಮದ ಜನತೆ ನೀರಿಗಾಗಿ ಕೊಡಗಳನ್ನು ಹಿಡಿದು ಪರದಾಡುತ್ತಿದ್ದು, ಅಧಿಕಾರಿಗಳು ಇತ್ತ ಗಮನ ನೀಡುತ್ತಿಲ್ಲ ಎಂದು ಗ್ರಾಮಸ್ಥರ ಆಕ್ರೋಶವಾಗಿದೆ.
ರಾಮಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮವಾದ ಗೋವನಾಳ 2 ಸಾವಿರ ಜನಸಂಖ್ಯೆ ಹೊಂದಿದೆ. 3 ಜನ ಗ್ರಾಪಂ ಸದಸ್ಯರಿದ್ದಾರೆ. ಕಳೆದ ಒಂದು ವಾರದಿಂದ ನೀರು ಪೂರೈಕೆ ಇಲ್ಲ. ಅಲ್ಲಿ ಪೈಪ್ ಬ್ಲಾಕ್ ಆಗಿದೆ, ಇಲ್ಲಿ ಪೈಪ್ ಬ್ಲಾಕ್ ಆಗಿದೆ ಎಂದು ಹೇಳುತ್ತ ಊರಿನ ತುಂಬ ನೆಲ ಅಗಿಯುವ ಕಾರ್ಯ ಮಾಡುತ್ತಿರುವುದನ್ನು ಬಿಟ್ಟು ಬೇರೇನೂ ಮಾಡುತ್ತಿಲ್ಲ. ಮನೆಯ ಕೆಲಸಗಳನ್ನು ಬಿಟ್ಟು ದಿನವಿಡೀ ನೀರು ತರುವುದೇ ಕಾಯಕವಾಗಿದೆ ಎಂದು ಗೋವನಾಳ ಗ್ರಾಮದ ಕುತುಬ್ಜಿ ಮಸೂತಿ, ಸರೋಜವ್ವ ಭೂವನಗೌಡ್ರ ಆರೋಪಿಸಿದರು. ಬೇಸಿಗೆ ಬರುವ ಮೊದಲೇ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದರೂ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಇತ್ತ ಕಡೆ ತಲೆ ಹಾಕುತ್ತಿಲ್ಲ. ಊರಿನಲ್ಲಿ ಎಲ್ಲರೂ ಮೈಲಾರದ ಜಾತ್ರೆಗೆ ಹೋಗುವ ತಯಾರಿ ಹಾಗೂ ರೈತಾಪಿ ವರ್ಗದ ಜನರಿಗೆ ಸುಗ್ಗಿಯ ಕಾಲವಾಗಿದ್ದರಿಂದ ಮುಂಜಾನೆ ಹೊಲಗಳಿಗೆ ಹೋಗುವ ಕಾರ್ಯ ಬಿಟ್ಟು ನೀರು ತರುವ ಕಾರ್ಯದಲ್ಲಿ ಮುಳುಗುವಂತಾಗಿದೆ ಎಂದು ಲಕ್ಷ್ಮಣ ಬಾರಕೇರ, ಲೋಹಿತ್ ಅಂಗಡಿ, ಮಂಜು ಹುಬ್ಬಳ್ಳಿ, ಮಂಜು ಮರಿಲಿಂಗನಗೌಡರ, ನಿಂಗಪ್ಪ ಮಾಡಳ್ಳಿ, ಹನುಮಂತಪ್ಪ ಬಾಲೆಹೊಸೂರ, ಸಿದ್ದಲಿಂಗಪ್ಪ ಸೊರಟೂರ ಮೊದಲಾದವರು ದೂರುತ್ತಾರೆ.