ಗದಗ-ಬೆಟಗೇರಿ ಭೀಷ್ಮ ಕೆರೆ ಅಭಿವೃದ್ಧಿಗೊಳಿಸಿ
ಗದಗ-ಬೆಟಗೇರಿ ಅವಳಿ ನಗರದ ಅಂತರ್ಜಲದ ಮೂಲವಾಗಿದ್ದ ಹಾಗೂ ಗದಗ ನಗರದ ಹೃದಯ ಭಾಗದಲ್ಲಿರುವ ಭೀಷ್ಮ ಕೆರೆ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೇ ಸಂಪೂರ್ಣವಾಗಿ ಹಾಳಾಗಿದೆ.
ಈ ಕೆರೆಯನ್ನು ಅಭಿವೃದ್ಧಿಗೊಳಿಸಿದಲ್ಲಿ ಗದಗ-ಬೆಟಗೇರಿ ಅವಳಿ ನಗರದಲ್ಲಿನ ಕೊಳವೆ ಬಾವಿಗಳಿಗೆ ಹಾಗೂ ಅಂತರ್ಜಲ ಹೆಚ್ಚಿಸಲು ಸಹಕಾರಿಯಾಗಲಿದೆ. ಆದರೆ, ಈ ಕೆರೆ ಜಿಲ್ಲಾಡಳಿತ, ನಗರಸಭೆ ದಿವ್ಯ ನಿರ್ಲಕ್ಷ್ಯದಿಂದ ಹಾಳಾಗಿದೆ. ಕೆಲ ವರ್ಷಗಳಿಂದ ಕೆರೆಯ ಮುಖ್ಯ ಕಾಲುವೆಗಳೆಲ್ಲ ದುರಸ್ತಿಗದೆಗೆ ಬಂದಿದ್ದು, ಇದರಿಂದ ಮಳೆಗಾಲದಲ್ಲಿ ಕೆರೆಗೆ ನೀರು ಬಾರದಂತಾಗಿದೆ.
ಇನ್ನೊಂದೆಡೆ ಕೆರೆ ಸೌಂದರ್ಯವೇ ಸಂಪೂರ್ಣವಾಗಿ ಹಾಳಾಗಿದೆ. ಇನ್ನು ಈ ಕೆರೆಯ ಪಶ್ಚಿಮ ಭಾಗದಲ್ಲಿ ಅಲ್ಪ ಪ್ರಮಾಣದ ನೀರು ಸಂಗ್ರಹವಾಗಿದ್ದು, ಹಂದಿಗಳಿಂದಾಗಿ ನೀರು ಕಲುಷಿತಗೊಂಡಿದ್ದು, ಕೆಟ್ಟ ವಾಸನೆ ಬೀರುತ್ತಿದೆ.
ಇಲ್ಲಿ ಸಂಚರಿಸುವ ಜನರಿಗೆ ತೀವ್ರ ತೊಂದರೆಯಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಗಮನ ನೀಡದೇ ಇರುವುದು ಖಂಡನಾರ್ಹ.ಇನ್ನು ಈ ಭೀಷ್ಮ ಕೆರೆಯ ಮಧ್ಯದಲ್ಲಿಯೇ ಮಹಾನ್ ಮಾನವತಾವಾದಿ ಬಸವಣ್ಣನವರ 111 ಅಡಿ ಎತ್ತರದ ಬೃಹತ್ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು ಸ್ವಾಗತಾರ್ಹ. ಆದರೆ, ಈ ಕೆರೆಯ ಹೂಳೆತ್ತಿ, ಬಂದಾಗಿರುವ ಕಾಲುವೆಗಳನ್ನು ದುರಸ್ತಿಗೊಳಿಸಿ ಕೆರೆಯಲ್ಲಿ ನೀರು ನಿಲ್ಲುವಂತೆ ಮಾಡಿದ್ದರೆ ಸೌಂದರ್ಯ ಹೆಚ್ಚುತ್ತಿತ್ತು.
ಈ ಕೂಡಲೇ ಸಚಿವರು, ಜಿಲ್ಲಾಡಳಿತ ಹಾಗೂ ನಗರಸಭೆ ಗದಗ-ಬೆಟಗೇರಿ ಅವಳಿ ನಗರದ ಮುಕುಟದಂತಿರುವ ಭೀಷ್ಮ ಕೆರೆ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ದುರಸ್ತಿಗೊಳಿಸಿದಲ್ಲಿ 111 ಅಡಿಯ ಬಸವಣ್ಣ ಮೂರ್ತಿಯ ಜತೆಗೆ ಗದಗ-ಬೆಟಗೇರಿ ಅವಳಿ ನಗರದ ಸೌಂದರ್ಯ ಹೆಚುತ್ತದೆ.
- ಮಹೇಶ ಸಂಕನಗೌಡ್ರ, ಸತೀಶ ಕಿತ್ತೂರ
ಸ್ಥಳೀಯ ನಿವಾಸಿಗಳು