ನಗರಾಭಿವೃದ್ಧಿ ಪ್ರಾಧಿಕಾರದಿಂದ ವಂಚನೆ: ಇಂದು ಪ್ರತಿಭಟನೆ
ಗದಗ: ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ನೀಡುವುದಾಗಿ ಪತ್ರಿಕೆಗಳ ಮೂಲಕ ಜಾಹಿರಾತು ನೀಡುವುದಾಗಿ 1999ರಲ್ಲಿ ಅರ್ಜಿಗಳನ್ನು ಆಹ್ವಾನಿಸಿ, ಹಣ ತುಂಬಿಸಿಕೊಂಡ ಪ್ರಾಧಿಕಾರ ಫಲಾನುಭವಿಗಳನ್ನು ಗುರುತಿಸದೇ ವಂಚನೆ ಎಸಗಿದ ಕಾರಣ ಫೆ. 17ರಂದು ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಗದಗ-ಬೆಟಗೇರಿ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಾಂತೇಶ ಚವಡಿ ಹೇಳಿದರು.ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. 14 ವರ್ಷದ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರದ ಜಾಹೀರಾತು ಗಮನಿಸಿ ತಲಾ ರು. 15 ಸಾವಿರದಂತೆ 443 ಜನರು ಪ್ರಾಧಿಕಾರ ಸೂಚಿಸಿದ್ದ ಬ್ಯಾಂಕಿನಲ್ಲಿ ಹಣ ಪಾವತಿಸಿದ್ದಾರೆ. ಅರ್ಜಿದಾರರಿಂದ ಒಟ್ಟು ರು. 25.44.250ಗಳನ್ನು ನೋಂದಣಿ ಶುಲ್ಕವೆಂದು ತುಂಬಿದ್ದು, ಇದುವರೆಗೂ ನಿವೇಶನ ನೀಡದೇ ಅರ್ಜಿದಾರರನ್ನು ವಂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ. 17ರಂದು ಬೆಳಗ್ಗೆ ನಗರದ ರಾಚೂಟೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ತೆರಳಿ ಮನವಿ ಸಲ್ಲಿಸಿ, ಸಮಸ್ಯೆ ಪರಿಹಾರಕ್ಕೆ ವಾರದ ಗಡುವು ನೀಡಲಾಗುವುದು ಎಂದರು.