ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಿಲ್ಪಕಲೆಗೆ ಹೆಸರಾದ ಹೆಬ್ಬಾಳದಲ್ಲಿ ನುಡಿ ಹಬ್ಬ

Mainashree
Updated On : 17 Feb 2014, 10:28 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಫೆ. 16
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಫೆ. 19ರಂದು ಜರುಗಲಿರುವ 3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಜರುಗಿಸುವ ನಿಟ್ಟಿನಲ್ಲಿ ಇಡೀ ಗ್ರಾಮವೇ ಉತ್ಸುಕವಾಗಿದ್ದು, ತಾಲೂಕು ಮಟ್ಟದ ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಲು ಸ್ಥಳೀಯ ಎಲ್ಲ ಸಂಘ ಸಂಸ್ಥೆಗಳು, ಮುಖಂಡರು, ಹಿರಿಯರು ಟೊಂಕಕಟ್ಟಿರುವುದು ವಿಶೇಷವಾಗಿದೆ.
ತಾಲೂಕು ಸದಾ ಬರದ ದವಡೆಯಲ್ಲಿ ಸಿಲುಕುತ್ತಿದ್ದು, 3 ವರ್ಷಗಳಿಂದಲೂ ಸತತ ಬರದ ಛಾಯೆಯನ್ನು ಅನುಭವಿಸುತ್ತಿದೆ. ಹೆಬ್ಬಾಳ ಗ್ರಾಮದ ಸಮಸ್ತ ಜನತೆ ಅದನ್ನೆಲ್ಲ ಮರೆತು ಕನ್ನಡಾಂಬೆಯ ಸೇವೆಗೆ ಸಜ್ಜಾಗಿರುವುದು ಅತ್ಯಂತ ಶ್ಲಾಘನೀಯ. ತಾಲೂಕು ಕನ್ನಡ 3ನೇ ಸಾಹಿತ್ಯ ಸಮ್ಮೇಳನವನ್ನು ಹೆಬ್ಬಾಳ ಗ್ರಾಮದಲ್ಲಿ ಮಾಡಬೇಕು ಎಂದು ನಿರ್ಧರಿತವಾಗುತ್ತಿದ್ದಂತೆಯೇ ಗ್ರಾಮದ ಎಲ್ಲ ಹಿರಿಯ ಮುಖಂಡರು, ಸಂಘಟನೆಗಳು ಒಗ್ಗಟ್ಟು ಹಾಗೂ ಒಮ್ಮತದಿಂದ ಇದನ್ನು ಯಶಸ್ವಿಯಾಗಿ ಪೂರೈಸಿ ಹೆಮ್ಮೆ ಪಡಬೇಕೆಂಬ ದೃಢ ಸಂಕಲ್ಪದಿಂದ ಇಡೀ ಗ್ರಾಮ ಪಣತೊಟ್ಟು ನಿಂತಿದೆ.
ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಸಿದ್ಧತೆ ನಡೆಸಿದ್ದು, ಬರಲಿರುವ ಸಾಹಿತ್ಯಾಭಿಮಾನಿಗಳಿಗೆ, ಸಾಹಿತಿಗಳಿಗೆ, ಆಸಕ್ತರಿಗೆ ಒಟ್ಟಾರೆ ಎಲ್ಲಿಯೂ ವ್ಯವಸ್ಥೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಊಟೋಪಚಾರ ಸೇರಿದಂತೆ ಸಂಪೂರ್ಣ ವ್ಯವಸ್ಥೆಯ ಹೊಣೆಗಾರಿಕೆ ಹೊತ್ತಿರುವ ಗ್ರಾಮಸ್ಥರು ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಶಾಸಕ ರಾಮಕೃಷ್ಣ ದೊಡ್ಡಮನಿ ನೇತೃತ್ವದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಕೆ.ಎ. ಬಳಿಗೇರ ಸೇರಿದಂತೆ ಕಸಾಪ ಕಾರ್ಯಕಾರಿ ಮಂಡಳಿ ಸದಸ್ಯರು ಸಭೆ ನಡೆಸಿ ಕಾರ್ಯಕ್ರಮದ ಯಶಸ್ವಿಗಾಗಿ ಅವಿರತ ಪ್ರಯತ್ನ ನಡೆಸುತ್ತಿದ್ದಾರೆ.
ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಜರುಗಲಿರುವ ಫೆ. 19ರಂದು ಹೆಬ್ಬಾಳ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಿಸಿ ವಿವಿಧ ರೀತಿಯ ಗೋಷ್ಠಿ ಹಾಗೂ ಕನ್ನಡದ ಕಳಕಳಿಯನ್ನು ಹೆಚ್ಚಿಸಲು ಕಸಾಪ ಎಲ್ಲ ನಿಟ್ಟಿನಿಂದಲೂ ಪ್ರಯತ್ನಿಸುತ್ತಿದೆ. ಹೆಬ್ಬಾಳ ಗ್ರಾಮದ ಎಲ್ಲ ಮುಖಂಡರೂ ಈ ನಿಟ್ಟಿನಲ್ಲಿ ತಮ್ಮ ತನು, ಮನ, ಧನಗಳಿಂದ ಸಾಹಿತ್ಯ ಸಮ್ಮೇಳನದ ಸೇವೆಗೆ ಸಜ್ಜಾಗಿದ್ದಾರೆ. ಈ ಸಮ್ಮೇಳನದಲ್ಲಿ ತಾಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಸೆಳೆಯುವ ನಿಟ್ಟಿನಲ್ಲಿ ನಿರ್ಣಯಗಳನ್ನು ಕೈಗೊಂಡು ಜಿಲ್ಲೆಗೆ ಇದೊಂದು ಮಾದರಿ ಹಾಗೂ ಆದರ್ಶಮಯವಾದ ಸಾಹಿತ್ಯ ಸಮ್ಮೇಳನವಾಗಲಿ ಎಂದು ಹಾರೈಸೋಣ.
ಕುಸುರಿ ಕೆಲಸಕ್ಕೆ ಹೆಬ್ಬಾಳ ಹೆಸರುವಾಸಿ
ಇದೇ ಗ್ರಾಮದಲ್ಲಿ ಎಲೆಮರೆ ಕಾಯಿಯಂತೆ ಪ್ರಚಾರ ಬಯಸದೇ ತಲೆ ತಲಾಂತರದಿಂದ ಸುಮಾರು ಸಾವಿರಾರು ಮೂರ್ತಿಗಳನ್ನು ಮಾಡಿ ಇನ್ನೂ ಕ್ರಿಯಾಶೀಲರಾಗಿ ತಮ್ಮನ್ನು ತೊಡಗಿಸಿಕೊಂಡು ದುಡಿಯುತ್ತಿರುವವರಲ್ಲಿ 70ರ ವಯಸ್ಸಿನ ಮಾನಪ್ಪ ಚಂದ್ರಶೇಖಪ್ಪ ಸುತಾರ ಒಬ್ಬರು. ಓದಿದ್ದು ಕೇವಲ ಕನ್ನಡ ಮಾಧ್ಯಮದಲ್ಲಿ 7ನೇ ತರಗತಿ. ತಮ್ಮ ತಂದೆಯ ಮೂಲ ವೃತ್ತಿಯಾದ ಶಿಲ್ಪಕಲೆಯನ್ನು ಮುಂದುವರಿಸಿದ್ದಾರೆ. ಗಣಪತಿ, ಸರಸ್ವತಿ, ಲಕ್ಷ್ಮೀ, ವೀರಭದ್ರ, ಸತ್ಯನಾರಾಯಣ, ರಾಮಲಕ್ಷ್ಮಣ, ಸೀತಾ, ಆಂಜನೇಯ, ವಿಠೋಬಾ-ರುಖುಮಾಯಿ, ಕಾಳಿಕಾದೇವಿ, ಪರಮೇಶ್ವರ, ಈಶ್ವರ, ಬಸವಣ್ಣ, ಅಂಬೇಡ್ಕರ ಹೀಗೆ ನೂರಾರು ಬಗೆಯ ಮೂರ್ತಿಗಳು, ಪುರಾಣ ಪುರುಷರು, ರಾಷ್ಟ್ರ ನಾಯಕರ, ರಾಜಕೀಯ ನಾಯಕರ ಮೂರ್ತಿಗಳನ್ನು ಮಾಡಿದ್ದು, ಈ ಭಾಗದ ಅತ್ಯಂತ ಬೇಡಿಕೆಯ ಶಿಲ್ಪಿ ಇವರಾಗಿದ್ದಾರೆ. ಇವರು ತಯಾರಿಸುವ ಮೂರ್ತಿಗಳು, ಗೋವಾ, ಬಳ್ಳಾರಿ, ಹೂವಿನಹಡಗಲಿ, ಕೊಪ್ಪಳ, ಗಂಗಾವತಿ, ಹಾವೇರಿ, ಹಾನಗಲ್, ಹುಬ್ಬಳ್ಳಿ, ಧಾರವಾಡ, ಗದಗ, ಹಿರೇಕೆರೂರು, ಸಿಂಧನೂರು ತುಂಬೆಲ್ಲ ದೇವತಾಸ್ವರೂಪ ಪಡೆದು ಪೂಜೆಗೊಳ್ಳುತ್ತಿವೆ.

ಮಹದೇವಪ್ಪ ಎಂ. ಸ್ವಾಮಿ

ಕ್ಯಾಮೆರಾಮನ್ ಪ್ರಭು ನಿಧನ
ಗದಗ:
ನಗರದ ಸಿಟಿ ಟಿವಿ ಕ್ಯಾಮೆರಾಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಭು ಮತ್ತಿಕಟ್ಟಿ ಭಾನುವಾರ ಅಪಘಾತದಲ್ಲಿ ನಿಧನರಾಗಿದ್ದಾರೆ. ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-63ರ ಅಡವಿಸೋಮಾಪುರ ರಸ್ತೆಯಲ್ಲಿ ಭಾನುವಾರ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಈ ಅಪಘಾತದಲ್ಲಿ ಪ್ರಭು ಮತ್ತಿಕಟ್ಟಿ ನಿಧನರಾಗಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಉತ್ತಮ ವಿಡಿಯೋ ಚಿತ್ರೀಕರಣಕ್ಕಾಗಿ ಜಿಲ್ಲಾಡಳಿತದ ಸ್ವಾತಂತ್ರ್ಯ ದಿನಾಚರಣೆಯಂದು ನೀಡುವ ಉತ್ತಮ ಪ್ರಶಸ್ತಿ ಸೇರಿದಂತೆ ಪ್ರಶಂಸೆಗೆ ಪಾತ್ರರಾಗಿದ್ದ ಪ್ರಭು ಮತ್ತಿಕಟ್ಟಿ ನಿಧನ ಪತ್ರಕರ್ತರ ಬಳಗಕ್ಕೆ ನೋವು ತಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement