ಸಿದ್ದು ಬಹಿರಂಗ ಚರ್ಚೆಗೆ ಬರಲಿ: ಬಿಎಸ್ವೈ
ಗದಗ: ನನ್ನ ಅಧಿಕಾರಾವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ನಿಮ್ಮ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬಹಿರಂಗ ಸವಾಲು ಹಾಕಿದರು.
ಭಾನುವಾರ ಸಂಜೆ ಗದಗ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ 'ಭಾರತ ಗೆಲ್ಲಿಸಿ' ಬೃಹತ್ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ಬಿಎಸ್ವೈ ಭ್ರಷ್ಟಾಚಾರ ಮಾಡಿದ್ದಾರೆ. ಜೈಲಿಗೆ ಹೋಗಿದ್ದಾರೆ ಇದೇ ಇವರ ಸಾಧನೆ ಎಂದು ನನ್ನ ಬಗ್ಗೆ ಲೇವಡಿ ಮಾಡುತ್ತೀರಾ? ನನ್ನ ಬಗ್ಗೆ ಮಾತನಾಡುವ ಮುನ್ನ ಸ್ವಲ್ಪ ಎಚ್ಚರದಿಂದ ಮಾತನಾಡಿ, ನಾನು ರಾಜ್ಯದ ಜನತೆಯ ಪರವಾಗಿ ಕೆಲಸ ಮಾಡುತ್ತ ಬಂದಿದ್ದೇನೆ, ಮುಂದೆಯೂ ಮಾಡುತ್ತೇನೆ. ನಿಮ್ಮ ಕೇಂದ್ರ ಸರ್ಕಾರ ಎಷ್ಟೊಂದು ಕೋಟಿ ಹಗರಣ ಮಾಡಿದೆ ಎಂದು ನಿಮಗೆ ಗೊತ್ತಿಲ್ಲವೇ? ನಿಮ್ಮ ಧರ್ಮಸಿಂಗ್ ಅಧಿಕಾರದಲ್ಲಿ ನಡೆದಿರುವ ಅಕ್ರಮದ ಕುರಿತು ನಿಮಗೆ ಗೊತ್ತಿಲ್ಲವೇ? ನಿಮ್ಮ ಸಚಿವ ಸಂಪುಟದಲ್ಲಿನ ಭ್ರಷ್ಟರನ್ನು ಕೈ ಬಿಟ್ಟಿಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಗುಡುಗಿದರು.
ನಾನು ಜಾರಿಗೆ ತಂದಿದ್ದ ಹಲವಾರು ಜನಪರ ಯೋಜನೆಗಳ ಅನುಷ್ಠಾನದಲ್ಲಿ ನೀವು ಮಾಡುತ್ತಿರುವ ವಿಳಂಬಕ್ಕೆ ನಿಮ್ಮ ಸರ್ಕಾರದಲ್ಲಿರುವ ಕಡತಗಳೇ ಸಾಕ್ಷಿ. ಭಾಗ್ಯಲಕ್ಷ್ಮೀಯಂತಹ ಯೋಜನೆಗೆ ನೀವು ಎಷ್ಟು ಹಣ ನೀಡಿದ್ದೀರಿ? ಎಷ್ಟು ಬಡವರಿಗೆ ಬಾಂಡ್ ವಿತರಣೆ ಮಾಡಿದ್ದೀರಿ? ಈ ಕುರಿತು ರಾಜ್ಯದ ಜನತೆಗೆ ತಿಳಿಯಬೇಕಾದಲ್ಲಿ ಬಹಿರಂಗವಾಗಿ ಚರ್ಚೆಯಾಗಬೇಕಿದೆ. ಇದಕ್ಕೆ ನೀವು ಸಿದರಿದ್ದೀರಾ ಎಂದು ಆಕ್ರೋಶ ಭರಿತರಾಗಿ ಮಾತನಾಡಿದರು.