6 ತಿಂಗಳಾದರೂ ಮಾಹಿತಿ ನೀಡದ ಪುರಸಭೆ
ಕನ್ನಡಪ್ರಭ ವಾರ್ತೆ, ರೋಣ, ಫೆ. 17
ಪುರಸಭೆಯ ವಿವಿಧ ಯೋಜನಗಳ ಅಭಿವೃದ್ಧಿ ಮತ್ತು ಬಳಕೆ ಕುರಿತು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ 6 ತಿಂಗಳು ಕಳೆದರೂ, ಈ ವರೆಗೂ ಸ್ಥಳೀಯ ಪುರಸಭೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಇದರಿಂದ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸುವುದು ವ್ಯರ್ಥವಾಗುತ್ತದೆ ಎಂದು ಪಟ್ಟಣದ ಯುವಶಕ್ತಿ ಯುವಕ ವಿವಿಧೋದ್ದೇಶಗಳ ಅಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ಪ್ರವೀಣ ತೆಗ್ಗಿನಮನಿ ಆರೋಪಿಸಿದರು.
ಈ ಕುರಿತು ಶುಕ್ರವಾರ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2013 ಆಗಷ್ಟ 8ರಂದು 2011-12ನೇ ಮತ್ತು 2012-13ನೇ ಸಾಲಿನಲ್ಲಿ ಪುರಸಭೆ ವತಿಯಿಂದ ಸ್ವರ್ಣ ಜಯಂತಿ ಶಹರ ರೋಜಗಾರ ಯೋಜನೆಯಡಿ ಸ್ವಯಂ ಉದ್ಯೋಗ ಸಬ್ಸಿಡಿ ಸಾಲದ ಯೋಜನೆಗೆ ಆಯ್ಕೆಯಾದ ಫಲಾನುಭವಿಗಳ ವಿವರ ಹಾಗೂ ಉದ್ಯೋಗ ಕುರಿತು, 2005ರಿಂದ 2013ರ ವರೆಗೆ ರೋಣ ಪಟ್ಟಣದ ಎಲ್ಲ ವಾರ್ಡ್ಗಳಲ್ಲಿ ನೀರಿನ ಸರಬರಾಜು ಮಾಡಿದ ವಿವರ, ಕೊಳವೆ ಬಾವಿ ಪಂಪ್ಸೆಟ್ ಖರೀದಿ ಮತ್ತು ದುರಸ್ತಿ ಕುರಿತು ಮಾಹಿತಿ ಹಕ್ಕಿನಡಿ ಸಂಘದ ಮೂಲಕ ಅರ್ಜಿ ಸಲ್ಲಿಸಲಾಗಿತ್ತು. ಈ ವರೆಗೂ ಯಾವುದೇ ರೀತಿಯ ಮಾಹಿತಿಯನ್ನು ಪುರಸಭೆ ಮುಖ್ಯಾಧಿಕಾರಿಗಳು ನೀಡಿಲ್ಲ. ಈ ಕುರಿತು ಕೇಳಿದರೆ ನಾಳೆ ಮಾಹಿತಿ ಕೊಡುತ್ತೇವೆ, ನಾಡಿದ್ದು ಕೋಡುತ್ತೇವೆ ಎಂದು ಕಳೆದ 6 ತಿಂಗಳಿನಿಂದ ಹೇಳುತ್ತಲೇ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನುದಾನ ದುರ್ಬಳಕೆ ಶಂಕೆ: ಮುಖಂಡ ಅನಿಲ ನವಲಗುಂದ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಜನತೆಗೆ ಸಮರ್ಪಕವಾಗಿ ತಲುಪಿಸುವಲ್ಲಿ ಮತ್ತು ಅನುದಾನದ ದುರ್ಬಳಕೆ, ವಿಳಂಬ ಕುರಿತಂತೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದಲ್ಲಿ ತಿಂಗಳೊಳಗಾಗಿ ಸಮಗ್ರ ಮಾಹಿತಿಯನ್ನು ನೀಡಬೇಕು ಎಂಬ ನಿಯಮವಿದ್ದರೂ ಸ್ಥಳೀಯ ಪುರಸಭೆ ಮಾತ್ರ ಯಾವುದಕ್ಕೂ ತಲೆ ಕೆಡೆಸಿಕೊಳ್ಳುತ್ತಿಲ್ಲ. ಇದನ್ನು ಗಮನಿಸಿದಲ್ಲಿ ಪುರಸಭೆಯ ಅನುದಾನ ಅರ್ಹರಿಗೆ ತಲುಪದೇ ದುರ್ಬಳಕೆಯಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ, ಇಲ್ಲಿನ ಅವ್ಯವಸ್ಥೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಕುರಿತು ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನದಲ್ಲಿ ಸಂಘದ ನೇತೃತ್ವದಲ್ಲಿ ತಾಲೂಕು ಕಚೇರಿ ಹಾಗೂ ಪುರಸಭೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಮಹೇಶ ಕಿರೇಸೂರ, ಮಂಜು ಸಂಗಟಿ, ಯಲ್ಲಪ್ಪ ಕಿರೇಸೂರ, ಮಹೇಶ ಬ್ಯಾಳಿ, ಮಲೀಕಸಾಬ ಇಟಗಿ, ತರಪದಾರ, ಸುಭಾಸ ಕಿರೇಸೂರ ಮುಂತಾದವರು ಉಪಸ್ಥಿತರಿದ್ದರು.