ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನರೇಗಲ್ಲಿಗೆ ಸುಸಜ್ಜಿತ ಪೊಲೀಸ್ ಠಾಣೆ

Mainashree
Updated On : 18 Feb 2014, 10:36 am

ಕನ್ನಡಪ್ರಭ ವಾರ್ತೆ, ನರೇಗಲ್ಲ, ಫೆ. 17
ರೋಣ ತಾಲೂಕಿನ ಮಹತ್ವದ ಪಟ್ಟಣವಾಗಿರುವ ನರೇಗಲ್ಲಿನಲ್ಲಿ ಶೀಘ್ರದಲ್ಲಿಯೇ ಸುಸಜ್ಜಿತ ಪೊಲೀಸ್ ಠಾಣೆ ನಿರ್ಮಾಣವಾಗಲಿದೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ ಹೇಳಿದರು.
ಈಚೆಗೆ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಪೊಲೀಸ್ ಠಾಣೆ ಜಾಗೆಯನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗಿರುವ ಈ ಠಾಣೆ 1964ರಲ್ಲಿ ನಿರ್ಮಾಣಗೊಂಡಿದೆ. ಈಗಾಗಲೇ ಸರಿಸುಮಾರು 40 ವಸಂತಗಳನ್ನು ಕಳೆದಿರುವ ಈ ಠಾಣೆಗೆ ಮುಕ್ತಿ ನೀಡಿ ಹೊಸ ಠಾಣೆ ನಿರ್ಮಿಸಲಾಗುವುದು. 2013-14ನೇ ಸಾಲಿನ ಶೇ. 13ರ ಅನುದಾನದಲ್ಲಿ ಅಂದಾಜು ರು. 85 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವುದು.
ಗದಗ ಜಿಲ್ಲೆಯ ರೋಣದಲ್ಲಿ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಹೆಚ್ಚೂ ಕಡಿಮೆ ಅದೇ ದಿನ ಲಕ್ಕುಂಡಿ ಉತ್ಸವವೂ ಜರುಗುವ ಸಂಭವವಿದೆ. ಅಂದು ಮುಖ್ಯಮಂತ್ರಿ ಜಿಲ್ಲೆಗೆ ಭೇಟಿ ನೀಡಲಿದ್ದು, ಅದರಂಗವಾಗಿ ಈಗಾಗಲೇ ಸಿಇಒ ವೀರಣ್ಣ ತುರಮುರಿ ಮತ್ತು ಡಿಸಿ ಎನ್.ಎಸ್.ಪ್ರಸನ್ನಕುಮಾರ ಎರಡೂ ಕಡೆಗಳಲ್ಲಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ವೇದಿಕೆ, ಪಾರ್ಕಿಂಗ್ ಮತ್ತಿತರ ಸೌಲಭ್ಯಗಳ ಬಗ್ಗೆಯೂ ಪರಿಶೀಲನೆ ಮಾಡಲಾಯಿತು ಎಂದರು.
ನರೇಗಲ್ಲನಲ್ಲಿ ಈಗ ಒಟ್ಟು 24 ಪೊಲೀಸ್ ವಸತಿ ಗೃಹಗಳಿದ್ದು, ಅದರಲ್ಲಿ 12 ಹೊಸತು ಮತ್ತು 12 ಹಳೆಯದಿವೆ. ಹಳೆಯ ವಸತಿ ಗೃಹಗಳ ದುರಸ್ತಿ ಕಾರ್ಯವನ್ನು 2 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ದುರಸ್ತಿ ಮತ್ತು ಒಳ ಚರಂಡಿಗಾಗಿ ಒಟ್ಟು ರು. 17.71 ಲಕ್ಷ ವ್ಯಯಿಸಲಾಗುತ್ತಿದೆ. ನರೇಗಲ್ಲ ಪಟ್ಟಣದ ಜನತೆಯ ಆರೋಗ್ಯದ ದೃಷ್ಟಿಯಿಂದ ಪಪಂ ಸಹ ಪಟ್ಟಣದಲ್ಲಿ ಒಳ ಚರಂಡಿ ಕಾಮಗಾರಿಗಳನ್ನು ಶೀಘ್ರವೇ ಪ್ರಾರಂಭಿಸಬೇಕೆಂದು ಆಗ್ರಹಿಸಿದ ಅವರು ಇದರಿಂದ ಶೇ. 95ರಷ್ಟು ರೋಗಗಳನ್ನು ದೂರವಿರಿಸಬಹುದು ಎಂದರು.
ಹಿಂದಿನ ಸ್ಥಳದಲ್ಲಿದ್ದ ಪೊಲೀಸ್ ವಸತಿ ಗೃಹದ ಜಾಗೆಯಲ್ಲಿ ಈಗ ಕಸ ಕಡ್ಡಿ, ಗಿಡಗಂಟೆ ಬೆಳೆದಿದ್ದನ್ನು ಗಮನಿಸಿರುವ ಎಸ್‌ಪಿ ಈ ಜಾಗೆಯನ್ನು ತಕ್ಷಣವೇ ತೆರವುಗೊಳಿಸಬೇಕೆಂದು ಸಿಪಿಐ ವೆಂಕಟಪ್ಪ ನಾಯಕಗೆ ಸೂಚಿಸಿದರು.
ಪಿಎಸ್‌ಐ ಎಲ್.ಕೆ. ಜೂಲಕಟ್ಟಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement