ಪ್ರತಿಯೊಬ್ಬರೂ ರಕ್ತದಾನ ಮಾಡಿ
ಕನ್ನಡಪ್ರಭ ವಾರ್ತೆ, ಗದಗ, ಫೆ. 17
ನಿತ್ಯ ರಕ್ತದ ಅವಶ್ಯಕತೆಯಿಂದಾಗಿ ನೂರಾರು ಜನರ ಪ್ರಾಣ ಹಾನಿಯಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಮಾನವೀಯತೆ ತೋರಿಸಿ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘ ಬೆಂಗಳೂರು, ರಾಜ್ಯ ಸರ್ಕಾರಿ ನೌಕರರ ಪತ್ರಿಕೆ, ಯುವ ರೆಡ್ಕ್ರಾಸ್ ಘಟಕ ಹಾಗೂ ಕಾಲೇಜಿನ ವಿದ್ಯಾರ್ಥಿ ಸಂಘ, ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಶನಿವಾರ ಜರುಗಿದ ಸ್ವಾಮಿವಿವೇಕಾನಂದರ 151ನೇ ಜಯಂತ್ಯುತ್ಸವ, ಸಸಿ ನೆಡುವ ಕಾರ್ಯಕ್ರಮ, ರಕ್ತದಾನ ಶಿಬಿರ ಹಾಗೂ ಸಾಧಕರಿಗೆ ಸನ್ಮಾನ ಮತ್ತು ನಗೆಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನದಿಂದ ಒಂದು ಜೀವ ಉಳಿಸಿದ ಪುಣ್ಯ ಪ್ರಾಪ್ತಿಯಾಗುತ್ತದೆ. ಹಾಗಾಗಿ ಯುವಕರು ರಕ್ತದಾನದ ಬಗ್ಗೆ ಇರುವ ಯಾವುದೇ ರೀತಿಯ ತಪ್ಪು ತಿಳಿವಳಿಕೆ ನಂಬಬಾರದು ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಹರ್ಷವರ್ಧನ ಶೀಲವಂತ ಮಾತನಾಡಿ, ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಇಂದು ಭಾರತೀಯರು ಗಣನೀಯ ಸಂಖ್ಯೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ನಾವು ನಮ್ಮಲ್ಲಿನ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು. ನಾವು ನಮ್ಮಲ್ಲಿನ ಪ್ರತಿಭೆಯನ್ನು ಹೇಗೆ ಜೋಡಿಸಿಕೊಳ್ಳುತ್ತೇವೆ ಎಂಬುದರ ಮೇಲೆ ದೇಶದ ಭವಿಷ್ಯ ನಿಂತಿದೆ.
ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಭಾರತದ ಪ್ರತಿಭೆಗಳು ಎಷ್ಟೇ ಇದ್ದರೂ ಉಳಿದ ಶೇ. 99ರಷ್ಟು ಪ್ರತಿಭೆಗಳು ದೇಶದಲ್ಲಿಯೇ ಇದ್ದಾರೆ. ಆದರೆ, ಅವರ ಸಾಮರ್ಥ್ಯವನ್ನು ನಾವು ಬಳಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ದೇಶದಲ್ಲಿ ಸಂಸ್ಕೃತಿ, ಸಂಸ್ಕಾರ, ಶಿಕ್ಷಣ ಪಡೆದುಕೊಳ್ಳಲು ನಾವುಗಳು ಬೇರೆಡೆಗೆ ಮುಖಮಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರೇಮನಾಥ ಗರಗ, ಗಜೇಂದ್ರಗಡ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎಸ್.ಟಿ. ಭೈರಪ್ಪನವರ, ಹುಬ್ಬಳ್ಳಿ ಮಹಿಳಾ ಪಾಲಿಟೆಕ್ನಿಕ್ನ ಸಿವಿಲ್ ವಿಭಾಗದ ಮುಖ್ಯಸ್ಥ ಸುರೇಶ ಅಳ್ಳಗಿ ಮಾತನಾಡಿದರು.
ಇದೇ ಸಂದರ್ಭ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಹರ್ಷವರ್ಧನ ಶೀಲವಂತ, ಆರ್.ಎನ್. ಗೋಡಬೋಲೆ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ರಾಜೇಶ ಹೊಂಗಲ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯ ನೌಕರರ ಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಕೋಲ್ಲಾರ, ರೆಡ್ಕ್ರಾಸ್ ಸಂಸ್ಥೆ ಗೌರವ ಕಾರ್ಯದರ್ಶಿ ಆರ್.ಎನ್. ಗೋಡಬೋಲೆ, ಸಿ.ಆರ್. ಕಂದಗಲ್, ಪ್ರಶಾಂತಗೌಡ. ಎಂ., ವೀರಯ್ಯ ಹಿರೇಮಠ, ವಿಠ್ಠಲಕುಮಾರ ವಗ್ಗಾ, ಎಸ್.ಎಂ. ತಳಗೇರಿ, ಜಿ.ಎಸ್. ಪವಾಡದ ಇತರರು ಉಪಸ್ಥಿತರಿದ್ದರು.
ರಮೇಶ ಕೆಂಚಪ್ಪನವರ ಸ್ವಾಗತಿಸಿದರು. ವೀಣಾ ರಾಯಣ್ಣವರ ಹಾಗೂ ಮಂಜುಳಾ ಹಿರೇಮಠ ನಿರೂಪಿಸಿದರು. ಭರತ ಪುಡಕಲಕಟ್ಟಿ ವಂದಿಸಿದರು.