ಭೂಮಿ ಹಕ್ಕಿಗಾಗಿ ನಾಳೆ ಬೆಂಗಳೂರು ಚಲೋ
ಕನ್ನಡಪ್ರಭ ವಾರ್ತೆ, ಗದಗ, ಫೆ. 17
ನಗರ ವಂಚಿತ ಸಮುದಾಯಗಳ ಸ್ವಾಧಿಕಾರ ಮತ್ತು ಭೂಮಿ ಹಕ್ಕಿಗಾಗಿ ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ರಾಜ್ಯದ ಸದಸ್ಯ ಸಂಘಟನೆಗಳಿಂದ ರಾಜ್ಯ ಸರ್ಕಾರದ ಗಮನ ಸೆಳೆಯಲು ಫೆ. 20ರಂದು ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ಮತ್ತು ಪ್ರತಿಭಟನಾ ಧರಣಿ ನಡೆಸಲಾಗುತ್ತಿದೆ ಎಂದು ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ ಹೇಳಿದರು.
ಶನಿವಾರ ನಗರದ ದಲಿತ ಯುವ ಸಂಘರ್ಷ ಸಮಿತಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.
ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಾವಿರಾರು ಸ್ಲಂ ನಿವಾಸಿಗಳು ಈ ಪ್ರತಿಭಟನಾ ರ್ಯಾಲಿ ಮತ್ತು ಧರಣಿಯಲ್ಲಿ ಭಾಗವಹಿಸುತ್ತಿದ್ದು, ಬೆಂಗಳೂರು ಕೇಂದ್ರ ರೇಲ್ವೆ ನಿಲ್ದಾಣದಿಂದ ಸ್ಲಂ ಜನರ ರ್ಯಾಲಿ ಪ್ರಾರಂಭಿಸಿ ಪ್ರೀಡ್ಂ ಪಾರ್ಕ್ನಲ್ಲಿ ಪ್ರತಿಭಟನಾ ಧರಣಿ ನಡೆಸಲಾಗುತ್ತದೆ. ರಾಜ್ಯ ಮಟ್ಟದ ರ್ಯಾಲಿ ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಲು ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರದ ವಿವಿಧ ಸ್ಲಂ ಪ್ರದೇಶಗಳಿಂದ 500ಕ್ಕೂ ಹೆಚ್ಚು ಸ್ಲಂ ನಿವಾಸಿಗಳು ಫೆ. 19ರಂದು ನಗರದ ರೇಲ್ವೆ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದರು.
ಸ್ಲಂ ಸಮಿತಿ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಮಾನ್ವಿ ಮಾತನಾಡಿ, ಸ್ಲಂ ಜನರ ರ್ಯಾಲಿ ಮತ್ತು ಪ್ರತಿಭಟನೆ ನಡೆಸಿ ರಾಜ್ಯದ ಸ್ಲಂ ಜನರ ಪ್ರಮುಖ ಬೇಡಿಕೆಗಳಾದ 2001ರ ಜನಸಂಖ್ಯೆಯ ಆಧಾರದಲ್ಲಿ ಬಜೆಟ್ನಲ್ಲಿ ಹಣ ಮೀಸಲು ಮತ್ತು ನಗರದ ಭೂಮಿಯಲ್ಲಿ ಪಾಲು ನಿಗದಿಗೊಳಿಸಲು, ರಾಜ್ಯದ ಸ್ಲಂ ಪ್ರದೇಶಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಘೋಷಣೆಯಾಗಬೇಕು. ನಗರದ ಸ್ಥಳೀಯ ಬಜೆಟ್ನಲ್ಲಿ ರಾಜೀವ್ ಆವಾಸ್ ಯೋಜನೆಯ ಮಾರ್ಗಸೂಚಿಯಂತೆ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಶೇ. 25ರಷ್ಟು ಅನುದಾನ ಮೀಸಲಿಡಬೇಕು. 2011ರ ರಾಷ್ಟ್ರೀಯ ಜನಗಣತಿಯಂತೆ ರಾಜ್ಯದಲ್ಲಿರುವ ಕೊಳಗೇರಿಗಳ ಸಮೀಕ್ಷೆಯಾಗಬೇಕು ಸೇರಿದಂತೆ ಹಲವು ರೀತಿಯ ಬೇಡಿಕೆಗಳ ಈಡೇರಿಕೆಗೆ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. ಸ್ಲಂ ಮಹಿಳಾ ಸಮಿತಿ ಅಧ್ಯಕ್ಷೆ ಉಮಾದೇವಿ ಕಾತರಕಿ, ಕಾರ್ಯದರ್ಶಿ ತಿಪ್ಪವ್ವ ಮುಟಗಾರ, ಯುವ ಸಮಿತಿ ಅಧ್ಯಕ್ಷ ಶರೀಫ್ ಬಿಳೆಯಲಿ, ಉಪಾಧ್ಯಕ್ಷ ಯಲ್ಲಪ್ಪ ರಾಮಗಿರಿ, ಪರಶುರಾಮ ಕಾಳೆ, ಪರವೀನ ಬಡಿಗೇರ, ಅನಿಲ ಕಾಳೆ, ಅಬುಬಕ್ಕರ ಮಕಾಂದಾರ, ಸಲೀಂ ಬಳ್ಳಾರಿ, ಯುಸೂಫ್ ಮಜ್ಜಗಿ, ಅಶೋಕ ಕುಸಬಿ ಮುಂತಾದವರು ಉಪಸ್ಥಿತರಿದ್ದರು.