ವೈವಿಧ್ಯತೆ ಮೂಡಿಸುವ ಜಿಲ್ಲಾ ಸಮ್ಮೇಳನದ ಲಾಂಛನ
ರೋಣ: ಪಟ್ಟಣದಲ್ಲಿ ಫೆ. 22 ಮತ್ತು 23ರಂದು ಜರುಗುವ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗದಗ ಜಿಲ್ಲೆ ಹಾಗೂ ರೋಣ ತಾಲೂಕಿಗೆ ಸಂಬಂಧಿಸಿದ ವಿಶೇಷಣ ಮತ್ತು ವೈವಿಧ್ಯತೆಯನ್ನೊಳಗೊಂಡ ಲಾಂಛನ ಅನಾವರಣಗೊಂಡಿದೆ.
ಗದಗದ ಬಣ್ಣದ ಮನೆಯ ಕಲಾವಿದ, ಶಿಕ್ಷಕ ವಿಜಯ ಕಿರೇಸೂರ ಲಾಂಛನವನ್ನು ವಿನ್ಯಾಸಗೊಳಿಸಿದ್ದಾರೆ. ಈ ಲಾಂಛನದಲ್ಲಿ ನಾಡು-ನುಡಿ, ಸ್ಥಳೀಯ ನೆಲ-ಜಲದ ಕುರಿತು ಹೆಮ್ಮೆ ಮೂಡಿಸುವ ಸಂಗತಿಗಳು, ಸಾಹಿತ್ಯಿಕ, ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ, ಐತಿಹಾಸಿಕ ಮತ್ತು ಕೃಷಿಯ ಸಮೃದ್ಧಿ ನೆನಪಿಸುವುದು ಸೇರಿದಂತೆ ದೇವಸ್ಥಾನ, ಶಿಲ್ಪಕಲೆ, ಜಿಲ್ಲೆಯ ನಕ್ಷೆ, ಭುವನೇಶ್ವರಿ (ಕನ್ನಡಾಂಬೆ) ತಾಯಿಯ ಭಾವಚಿತ್ರ, ಚಾಮರ, ಕನ್ನಡ ಧ್ವಜ ಹಾಗೂ ನಾಡಿನ ಕಲೆ ಬಿಂಬಿಸಲಾಗಿದೆ.
ಲಾಂಛನದಲ್ಲಿ ವಿನ್ಯಾಸಗೊಳಿಸಲಾದ ಚಿತ್ರಗಳಲ್ಲಿ ಮೊದಲಿಗೆ ಕನ್ನಡ ತಾಯಿ ಭುವನೇಶ್ವರಿ ದೇವಿ ಹಾಗೂ ಚಾಮರ, ಕನ್ನಡದ ಧ್ವಜಗಳನ್ನು ನೋಡಬಹುದು. ಸೂಡಿಯ ಜೋಡಿ ಕಳಸದ ಗುಡಿ ದ್ವೀಕೋಟಾಚಲ ಅಕ್ಕೇಶ್ವರ ದೇವಾಲಯ 11ನೇ ಶತಮಾನದ ಭಾಗದಲ್ಲಿ ಕಲ್ಯಾಣ ಚಾಲುಕ್ಯರ ಸಾಮಂತರಾದ ಅಕ್ಕಾದೇವಿ ನಿರ್ಮಿಸಿದ ದೇವಾಲಯವನ್ನು ನೋಡಬಹುದು. ಇಟಗಿಯ ಸುಕ್ಷೇತ್ರದ ಭೀಮಾಂಬಿಕೆದೇವಿ, ನರೇಗಲ್ ಕೋಡಿಕೊಪ್ಪದ ಹುಚ್ಚೀರಪ್ಪಜ್ಜನವರ ಮೂರ್ತಿ, ಸವಡಿಯ ಬ್ರಹ್ಮ ದೇವಾಲಯದ ವಾಸ್ತು ಶಿಲ್ಪ, ಹಾಳಕೆರೆಯ ಧಾರ್ಮಿಕ ಹರಿಕಾರರಾಗಿದ್ದ ಅನ್ನದಾನೇಶ್ವರ ಶ್ರೀಗಳ ಭಾವಚಿತ್ರ, ಗದಗ ಜಿಲ್ಲೆಯ ನಕ್ಷೆ, 11-12ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದ ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿದ್ದ ಕಾಲಕಾಲೇಶ್ವರ ದೇವಾಲಯದ ದ್ವಾರಬಾಗಿಲು ಮತ್ತು ದೀಪಸ್ತಂಭ ಚಿತ್ರಗಳು, ಹಾಗೂ ಹಿಂದೂ ಮುಸ್ಲಿಂ ಭಾವೈಕ್ಯತೆ ಬಿಂಬಿಸುವ ನರೇಗಲ್‌ನ ಅಡ್ನೂರ ದರ್ಗಾ, ಹೊಳೆಆಲೂರಿನ ಹತ್ತಿರ ಹರಿದಿರುವ ಮಲಪ್ರಭಾ ನದಿ ಹಾಗೂ ಅಡ್ಡಲಾಗಿ ನಿರ್ಮಿಸಿರುವ ಸೇತುವೆ, ಶ್ರಮಿಕ ಸಂಸ್ಕೃತಿಯ ಸಂಕೇತವಾಗಿರುವ ಉಳುಮೆ ಮಾಡುತ್ತಿರುವ ರೈತನ ಚಿತ್ರ ಮತ್ತು ಆಕರ್ಷಕವಾದ ಕಂಚಿನ ಚೌಕಟ್ಟುನ್ನು ಲಾಂಛನ ಒಳಗೊಂಡಿದೆ.