ಆಕಸ್ಮಿಕ ಬೆಂಕಿ: 5 ಗುಡಿಸಲು ಭಸ್ಮ
ರೋಣ: ಆಕಸ್ಮಿಕ ಬೆಂಕಿ ತಗುಲಿ 5 ಗುಡಿಸಲು ಭಸ್ಮವಾಗಿ, ಗುಡಿಸಲಿನಲ್ಲಿದ್ದ ದವಸ, ಧಾನ್ಯ, ಪಾತ್ರೆಗಳು, ಬಟ್ಟೆಗಳು ಸುಟ್ಟಿದ್ದು, ಓರ್ವನಿಗೆ ಗಾಯವಾದ ಘಟನೆ ತಾಲೂಕಿನ ಸರ್ಜಾಪುರದಲ್ಲಿ ಸೋಮವಾರ ನಡುರಾತ್ರಿ 12ರ ಸುಮಾರಿಗೆ ನಡೆದಿದೆ. ರಾತ್ರಿ 12ರ ಸುಮಾರಿಗೆ ಗುಡಿಸಲಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿಗೆ ಕ್ರಮೇಣ ಪಕ್ಕದ 5 ಗುಡಿಸಲಿಗೆ ತಗುಲಿದೆ. ಬೆಂಕಿ ನಂದಿಸಲು ಗ್ರಾಮಸ್ಥರು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿತು. ಬೆಂಕಿಗೆ ಆಹುತಿಯಾದ ಗುಡಿಸಲು ಶಿವಪ್ಪ ಲಮಾಣಿ, ಗಂಗಪ್ಪ ಲಮಾಣಿ, ರಾಮಪ್ಪ ಲಮಾಣಿ ಮತ್ತು ಸೋಮಪ್ಪ ಲಮಾಣಿ ಎಂಬುವರಿಗೆ ಸೇರಿದ್ದವಾಗಿವೆ. ವಾಸು ಬಡಿಗೇರ ಎಂಬುವರಿಗೆ ಸುಟ್ಟ ಗಾಯಗಳಾಗಿವೆ. ಶಿವಪ್ಪ ಲಮಾಣಿ ಎಂಬುವರ ರು. 20 ಸಾವಿರ ನಗದು, ದುಗಣಪ್ಪ ಲಮಾಣಿ ಎಂಬುವರ ರು. 50 ಸಾವಿರ ನಗದು ಬೆಂಕಿಯಲ್ಲಿ ಸುಟ್ಟಿವೆ ಎಂದು ತಿಳಿದು ಬಂದಿದೆ. ಒಬ್ಬರು ಗೋವಾದಿಂದ ದುಡಿದು ಕಳೆದವಾರ ಹಿಂದೆ ರು. 20 ಸಾವಿರ ತಂದಿದ್ದರು. ಇನ್ನೊಬ್ಬರು ಮುಂದಿನ ತಿಂಗಳ ಇರುವ ಮಂಗಲ ಕಾರ್ಯಕ್ಕೆಂದು ತಂದಿಟ್ಟಿದ್ದರು. ಗುಡಿಸಲಲ್ಲಿ ಇದ್ದ ಎಲ್ಲ ಸಾಮಗ್ರಿಗಳು ಸೇರಿದಂತೆ ವಿದ್ಯಾರ್ಥಿ ಉಮೇಶ ಲಮಾಣಿ ಎಂಬುವನ ಶಾಲಾ, ಕಾಲೇಜ್ ಪ್ರಮಾಣಪತ್ರಗಳು, ಪುಸ್ತಕಗಳು ಸಂಪೂರ್ಣ ನಾಶವಾಗಿವೆ. ತಹಸೀಲ್ದಾರ್ ಎ.ಜಿ. ಪಂಡಿತ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಪರಿಹಾರ ಕುರಿತು ಚರ್ಚಿಸಲಾಗುವುದು ಎಂದರು. ಘಟನಾ ಸ್ಥಳಕ್ಕೆ ಶಾಸಕ ಜಿ.ಎಸ್. ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ವೈಯಕ್ತಿಕವಾಗಿ ತಲಾ ರು. 5000 ನೆರವಿನ ಹಸ್ತ ನೀಡಿ ಸಾಂತ್ವನ ಹೇಳಿದರು. ಈ ಕುರಿತು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡುವಂತ ವ್ಯವಸ್ಥೆ ಕಲ್ಪಿಸಲಾಗುವುದು. ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯ ಗ್ರಾಪಂಗೆ ಸೂಚನೆ ನೀಡಲಾಗುವುದು ಎಂದರು. ಶರಣಗೌಡ ಪಾಟೀಲ, ನ್ಯಾಯವಾದಿ ವಿ.ಆರ್. ಗುಡಿಸಾಗರ, ಬಸವರಾಜ ನವಲಗುಂದ, ಡಾ. ಶಶಿಧರ ಹಟ್ಟಿ ಸೇರಿದಂತೆ ಮುಂತಾದವರಿದ್ದರು.