ಅಕ್ಕಮಹಾದೇವಿ ನಾಡು ಕಂಡ ಮೇರು ಕವಿಯಿತ್ರಿ
ಗದಗ: ವಚನ ಸಾಹಿತ್ಯದಲ್ಲಿ ಕಾವ್ಯದ ಮೌಲ್ಯವನ್ನು ಸುಳುಹುಗಾಗಿಸಿದ ಅಕ್ಕಮಹಾದೇವಿ ನಾಡು ಕಂಡ ಮೇರು ಕವಯಿತ್ರಿ ಆಗಿದ್ದಾಳೆ ಎಂದು ಗದಗ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ವಿ. ಬಡಿಗೇರ ಹೇಳಿದರು.
ಗದಗ ತಾಲೂಕು ಕದಳಿ ವೇದಿಕೆಯು ಗದುಗಿನ ಶೋಭಾ ಪೊಲೀಸ್ ಪಾಟೀಲರ ನಿವಾಸದಲ್ಲಿ ಭಾನುವಾರ ಏರ್ಪಡಿಸಿದ್ದ ಗೃಹಗೋಷ್ಠಿ ಕಾರ್ಯಕ್ರಮದಲ್ಲಿ ಜೀವನ ಮತ್ತು ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು.
ಬದುಕಿನ ಮೂಲದಿಂದ ಬಂದದ್ದು ನೈಜ ಸಾಹಿತ್ಯ, ಸಾಹಿತ್ಯವು ಕಲ್ಪನೆಯ ಲೋಕದಲ್ಲಿ ವಿಹರಿಸುವ ವಸ್ತುವಾಗಬಾರದು ಬದುಕನ್ನೇ ಗುರಿಯಾಗಿಟ್ಟುಕೊಂಡು ದೈನಂದಿನ ನೋವು ಸಲಿವನ್ನು ಕಾವ್ಯವಾಗಿಸಿದ ಜನಪದ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿರುವುದಕ್ಕೆ ಅದು ರೂಢಿಸಿಕೊಂಡ ಜನಸಾಮಾನ್ಯ ಬದುಕಿನ ಪ್ರೀತಿಯೇ ಕಾರಣ. ಜೀವನದ ಅನುಭವಗಳ ನೈಜ ಚಿತ್ರಣಗಳು ಕಾವ್ಯವಾಗಿ ಹೊರಹೊಮ್ಮಿದಾಗ ಅದು ಸಾಹಿತ್ಯವಾಗವುದಲ್ಲದೇ ಜನಮನ್ನಣೆಗೆ ಪಾತ್ರವಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕದಳಿ ವೇದಿಕೆ ಅಧ್ಯಕ್ಷೆ ಕವಿತಾ ದಂಡಿನ ಮಾತನಾಡಿ, ಕದಳಿ ವೇದಿಕೆ ಮೂಲಕ ಮಹಿಳೆಯರಲ್ಲಿಯ ಸೂಕ್ತ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡುತ್ತಿದ್ದು, ಇದರಲ್ಲಿ ಪಾಲ್ಗೊಳ್ಳುವ ಮೂಲಕ ಕದಳಿ ವೇದಿಕೆಯ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಕೋರಿದರು. ಮಾರ್ಚ್ ತಿಂಗಳ ಗೋಷ್ಠಿಯಲ್ಲಿ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಕವಿಗೋಷ್ಠಿ ಆಯೋಜಿಸಲಾಗುವುದು ಅದಕ್ಕಾಗಿ ಭಾಗವಹಿಸುವ ಇಚ್ಛಿತರು ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದರು.
ಸುಮಾ ಪಾಟೀಲ, ಸುಲೋಚನಾ ಐಹೋಳಿ ಮುಂತಾದವರು ಉಪಸ್ಥಿತರಿದ್ದರು. ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಾ ವರವಿ ಹಾಗೂ ಕಾರ್ಯದರ್ಶಿ ಶ್ರೀದೇವಿ ಪಾಟೀಲ, ಶೋಭಾ ಪೊಲೀಸ್‌ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಶ್ರೀದೇವಿ ಹಿರೇಮಠ ಪ್ರಾರ್ಥಿಸಿದರು, ಶೋಭಾ ಪೊಲೀಸ್‌ಪಾಟೀಲ ಸ್ವಾಗತಿಸಿದರು. ಕಲಾವತಿ ಹವಳದ ನಿರೂಪಿಸಿದರು. ಶಾಂತಾ ಮುಂದಿನಮನಿ ವಂದಿಸಿದರು.