ನೇಕಾರರು ಯೋಜನೆ ಬಳಸಿಕೊಳ್ಳಿ
ಗದಗ: ನೇಕಾರರು ಸರ್ಕಾರದಿಂದ ದೊರೆಯುವ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಬೆಟಗೇರಿಯ ಬಿ.ಬಿ. ಬಣ್ಣದ ಕೈಮಗ್ಗ ನೇಕಾರರ ಅಭಿವೃದ್ಧಿ ಸಹಕಾರಿ ಸಂಘದ ಸದಸ್ಯರಿಗೆ ನೇಕಾರರ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ ಬ್ಯಾಂಕಿನಿಂದ ರು. 50 ಸಾವಿರ ಸಾಲ ಪಡೆದ ಚೆಕ್‌ಗಳನ್ನು ವಿತರಣೆ ಮಾಡಿ ಮಾತನಾಡಿದರು.
ಕೈಮಗ್ಗ ನೇಕಾರರಿಗೆ ಇರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬೇಕು. ಈಗಾಗಲೇ ಸರ್ಕಾರವು ರು. 25 ಸಾವಿರ ವರೆಗೆ ನೇಕಾರರ ಸಾಲ ಮನ್ನಾ ಮಾಡಿದೆ. ನೇಕಾರರು ತಮ್ಮ ಉದ್ಯೋಗವನ್ನು ಸರಿಯಾಗಿ ನಡೆಸಿಕೊಂಡು ಹೋಗಲು ನೇಕಾರರ ಕ್ರೆಡಿಟ್ ಕಾರ್ಡ್ ಎಂಬ ಯೋಜನೆ ಜಾರಿ ಮಾಡಿದ್ದು, ಇದರ ಮೂಲಕ ಬ್ಯಾಂಕಿನಿಂದ ಸಾಲ ಪಡೆದು ನೇಕಾರಿಕೆ ಉದ್ಯೋಗ ಮಾಡಬಹುದಾಗಿದೆ ಎಂದರು.
ಸಂಘದ ಅಧ್ಯಕ್ಷ ಅಶೋಕ ಬಣ್ಣದ ಮಾತನಾಡಿ, ಕೋ-ಆಫ್ ಬ್ಯಾಂಕಿನಲ್ಲಿ ಮಾತ್ರ ನೇಕಾರರಿಗೆ ಶೇ. 3ರಂತೆ ಬಡ್ಡಿ ಆಕರಣೆ ಮಾಡಲು ಅವಕಾಶವಿದೆ. ಆದರೆ, ಕೋ-ಆಫ್ ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿ ಸರಿಯಲ್ಲದ ಕಾರಣ ನೇಕಾರರಿಗೆ ಅಲ್ಲಿ ಸಾಲ ಮಂಜೂರು ಆಗುವುದಿಲ್ಲ. ಆದ್ದರಿಂದ ರಾಷ್ಟ್ರೀಕೃತ ಬ್ಯಾಂಕಿನಿಂದ ಪಡೆದ ನೇಕಾರರ ಕ್ರೆಡಿಟ್ ಕಾರ್ಡ್ ಸಾಲಕ್ಕೂ ಶೇ. 3ರಂತೆ ಬಡ್ಡಿ ಆಕರಣೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು.
ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಎನ್.ಟಿ. ನೆಗಳೂರ ಮಾತನಾಡಿ, ಇಲಾಖೆಯಿಂದ ಈಗಾಗಲೇ ನೇಕಾರರ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ ವಿವಿಧ ಬ್ಯಾಂಕಿಗೆ ಸಾಲ ಮಂಜೂರು ಮಾಡಲು ಶಿಫಾರಸು ಮಾಡಿದ್ದು ಸದ್ಯದಲ್ಲೇ ನೇಕಾರರಿಗೆ ಸಾಲ ಮಂಜೂರಾಗಲಿದೆ ಎಂದರು. ಲಕ್ಷ್ಮಣ ಗಣಪಾ, ತಿಮ್ಮಯ್ಯ ಗಣಪಾ, ಜಗನ್ನಾಥಪ್ಪ ಆಮ್ರದ, ಪ್ರಭು ಬುರುವರೆ ಮುಂತಾದವರು ಹಾಜರಿದ್ದರು.