ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ: ಬಾಗಮಾರ
ಗಜೇಂದ್ರಗಡ: ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ತೊಡಗುವುದರಿಂದ ಆರೋಗ್ಯ ಸದೃಢಗೊಳ್ಳುವುದರ ಜತೆಗೆ ವ್ಯಕ್ತಿತ್ವ ವಿಕಸನ ಹೊಂದುತ್ತದೆ ಎಂದು ಭಗವಾನ್ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಕಾರ್ಯದರ್ಶಿ ಅಜಿತ ಬಾಗಮಾರ ಹೇಳಿದರು.
ಸ್ಥಳಿಯ ಬಿಎಎಂಎಸ್ ಕಾಲೇಜು ವತಿಯಿಂದ ಈಚೆಗೆ ಜರುಗಿದ ಗಾಯನ ಸ್ಪರ್ಧೆಯ ವಿಜೇತೆ ಮಹಾವಿದ್ಯಾಲಯದ ಅಂತಿಮ ವರ್ಷದ ಹಿಮಾಚಲ ಪ್ರದೇಶದ ಲಾಹೋಲ್ಸ್ಮೀತ್ ಮೂಲದ ವೈದ್ಯೆ ವಿದ್ಯಾರ್ಥಿನಿ ಮನಿಶಾ ಕುಮಾರಿಗೆ ಪಾರಿತೋಷಕ ವಿತರಿಸಿ ಮಾತನಾಡಿದರು.
ದಣಿದ ದೇಹಕ್ಕೆ ಮುದ ನೀಡುವ, ರೋಗ ನಿರೋಧಕ ಶಕ್ತಿ ಹೊಂದಿರುವ ಗಾಯನ ಕಲೆ ದೇವರ ಕೊಡುಗೆ. ಇಂತಹ ವಿಶೇಷ ಭಾಗ್ಯ ಎಲ್ಲರಿಗೂ ಸಿಗದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿನ ಕಲೆಯನ್ನು ಸಂದರ್ಭಕ್ಕನುಗುಣವಾಗಿ ಪ್ರದರ್ಶಿಸಿ ಕಲಾ ಕೌಶಲ್ಯತೆ ಮೆರೆದು ಜನಮನ್ನಣೆಗೆ ಪಾತ್ರರಾಗಿ ಎಂದರು.
ಡಾ. ರುದ್ರಾಂಬಿಕಾ ಬಿರಾದಾರ ಮಾತನಾಡಿ, ವಿದ್ಯಾರ್ಥಿ ಬದುಕಿನಲ್ಲಿ ಸತತ ಅಧ್ಯಯನ ಹಾಗೂ ಕ್ರಿಯಾಶೀಲತೆ ಮನುಷ್ಯನ ಉನ್ನತಿಗೆ ರಹದಾರಿ. ಜತೆಗೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದರು.
ಈ ಸಂದರ್ಭದಲ್ಲಿ ಡಾ. ರೇಶ್ಮಾ ಕೋಲಕಾರ, ಸ್ವಪ್ನ ಬಾಗಮಾರ, ಡಾ. ಪೂರ್ಣಿಮಾ ಬೆಲ್ಲದ, ನಮ್ರತಾ ಬಾಗಮಾರ, ಡಾ. ಜಗದೀಶ ಹಿರೇಮಠ, ಎ.ಡಿ. ಕೋಲಕಾರ ಮುಂತಾದವರು ಉಪಸ್ಥಿತರಿದ್ದರು.
ಲಕ್ಕುಂಡಿ ಉತ್ಸವ: ಕ್ರೀಡೆ, ಪ್ರದರ್ಶನ
ಗದಗ: ಗದಗ ಜಿಲ್ಲಾ ಲಕ್ಕುಂಡಿ ಉತ್ಸವದ ಅಂಗವಾಗಿ ಫೆ. 22 ಹಾಗೂ 23ರಂದು ಲಕ್ಕುಂಡಿಯಲ್ಲಿ ಕ್ರೀಡಾ ಪ್ರದರ್ಶನ ಹಾಗೂ ಸ್ಪರ್ಧೆಗಳನ್ನು ನಡೆಸಲಾಗುವುದು. ಫೆ. 22ರ ಬೆಳಗ್ಗೆ 7.15ಕ್ಕೆ ಲಕ್ಕುಂಡಿಯ ಕಾಶಿ ದೇವಸ್ಥಾನದಿಂದ ಕದಾಂಪುರ ಹಾಗೂ ಅಲ್ಲಿಂದ ಮರಳಿ ಬರುವ ಕ್ರಾಸ್ಕಂಟ್ರಿ ಓಟದ ಸ್ಪರ್ಧೆಯನ್ನು ಪುರುಷ ಹಾಗೂ ಮಹಿಳೆಯರಿಗಾಗಿ ಆಯೋಜಿಸಲಾಗಿದೆ. (ಸಂಪರ್ಕವಾಣಿ ಪಾಟೀಲ-9844333569) ಸಂಜೆ 4ಕ್ಕೆ ಲಕ್ಕುಂಡಿಯ ಬಿ.ಎಚ್. ಪಾಟೀಲ ಪ್ರೌಢಶಾಲೆಯ ಮೈದಾನದಲ್ಲಿ ಶಿರಹಟ್ಟಿಯ ರಾಮಗಿರಿ ಜಿಲಾ ಮಲ್ಲಕಂಬ ಸಂಸ್ಥೆಯಿಂದ ಸ್ಥಿರ ಮಲ್ಲಕಂಬ ಪ್ರದರ್ಶನ ಜರುಗಲಿದೆ. ಸಂಜೆ 6ಕ್ಕೆ 14 ವರ್ಷದೊಳಗಿನ 30, 32 ಹಾಗೂ 35 ಕೆಜಿ ಒಳಗಿನ ಬಾಲಕರಿಗೆ, 30, 35 ಕೆಜಿ ಒಳಗಿನ ಬಾಲಕಿಯರಿಗೆ, 17 ವರ್ಷದೊಳಗಿನ 42, 46 ಹಾಗೂ 50 ಕೆಜಿ ಬಾಲಕರಿಗೆ, 44 ಮತ್ತು 50 ಕೆಜಿ ಬಾಲಕಿಯರಿಗೆ ಹಾಗೂ ಮಹಿಳೆಯರಿಗೆ ಹಾಗೂ ಪುರುಷರ ವಿಭಾಗದಲ್ಲಿ 55, 60 ಹಾಗೂ 66 ಕೆಜಿ ವಿಭಾಗದ ಜಿಲ್ಲಾ ಮಟ್ಟದ ಮತ್ತು 66 ರಿಂದ 74 ಕೆಜಿ ಪುರುಷರಿಗಾಗಿ ಲಕ್ಕುಂಡಿ ಕೇಸರಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗಳು ಜರುಗಲಿವೆ. (ಶರಣುಗೌಡ ಬೇಲೇರಿ-9880037735) ಸಂಜೆ 5ಕ್ಕೆ ಪುರುಷರಿಗೆ ಮಾತ್ರ ಸಂಗ್ರಹಣೆ ಕಲ್ಲು ಭಾರಎತ್ತುವ ಸ್ಪರ್ಧೆ ಏರ್ಪಡಿಸಲಾಗಿದೆ. (ಸಂಪರ್ಕವಾಣಿ ಬೆಂತೂರ-9844813115 ) ಫೆ. 23ರಂದು ಬೆಳಗ್ಗೆ 11ಕ್ಕೆ ಲಕ್ಕುಂಡಿಯ ಬಿ.ಎಚ್. ಪಾಟೀಲ ಪ್ರೌಢಶಾಲೆ ಮೈದಾನದಲ್ಲಿ ಪುರುಷರಿಗಾಗಿ ಜಿಲ್ಲಾ ಮಟ್ಟದ ಕಬಡ್ಡಿ ಸ್ಪರ್ಧೆ ಜರುಗಲಿದೆ. (ಸಂಪರ್ಕವಾಣಿ ಕೊರಡೂರು 9739812944) ಕ್ರೀಡಾಪಟುಗಳಿಗೆ ಊಟೋಪಚಾರ ಹಾಗೂ ವಸತಿ ಕಲ್ಪಿಸಲಾಗುತ್ತಿದ್ದು, ಬೇರೆ ಊರುಗಳಿಂದ ಬಂದ ನೋಂದಣಿ ಆದ ಕ್ರೀಡಾಪಟುಗಳಿಗೆ ಪ್ರವಾಸ ಭತ್ಯೆ ನೀಡಲಾಗುವುದು. ವಿಜೇತರಿಗೆ ನಗದು ಬಹುಮಾನ ಹಾಗೂ ಪುರಸ್ಕಾರ ನೀಡಲಾಗುವುದು. ಸ್ಪರ್ಧೆಯಲ್ಲಿ ಪಾಲ್ಗೊಂಡವರು ಅಕ್ಷೇಪಣೆ ಸಲ್ಲಿಸುವ ಸಂದರ್ಭ ಬಂದಲ್ಲಿ ಹಿಂದುರಿಗಿಸಲಾಗದ ಆಕ್ಷೇಪಣಾ ಶುಲ್ಕವಾಗಿ ರು. 1 ಸಾವಿರಗಳೊಂದಿಗೆ ಮನವಿ ಸಲ್ಲಿಸಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯ ಲಕ್ಕುಂಡಿ ಉತ್ಸವ ಸಾಹಸ ಕ್ರೀಡಾ ಸಮಿತಿ ಪ್ರಕಟಣೆ ತಿಳಿಸಿದೆ.
ರೋಣ: 5 ದಿನ ಭಾವೈಕ್ಯತಾ ಶಿಬಿರ
ಗದಗ: ಯುವ ಜನರಲ್ಲಿ ಭಾರತದ ಏಕತೆಗೆ ಕುರಿತ ಅಭಿಮಾನ ಬೆಳೆಸಲು ಕೇಂದ್ರ ಸರ್ಕಾರವು ನೆಹರು ಯುವ ಕೇಂದ್ರಗಳ ಮೂಲಕ ಭಾವೈಕ್ಯತಾ ಶಿಬಿರಗಳನ್ನು ದೇಶಾದ್ಯಂತ ಏರ್ಪಡಿಸುತ್ತಿದೆ. ಅದರಂಗವಾಗಿ ಗದಗ ನೆಹರುಯುವ ಕೇಂದ್ರದಿಂದ ಜಿಲ್ಲೆಯ ರೋಣ ಪಟ್ಟಣದ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆಯ ಆಯುರ್ವೇದ ಮಹಾವಿದ್ಯಾಲಯದಲ್ಲಿ ಅದರ ಸಹಯೋಗದೊಂದಿಗೆ ಭಾವೈಕ್ಯತಾ ಶಿಬಿರ ಫೆ. 20 ರಿಂದ 24ರ ವರೆಗೆ ನಡೆಯಲಿದೆ. ಈ ಶಿಬಿರದಲ್ಲಿ ಪಂಜಾಬ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕರ್ನಾಟಕದ 4 ಜಿಲ್ಲೆಗಳ ಒಟ್ಟು 150 ಜನರ ವಿವಿಧ ರೀತಿಯ 10 ಕಲಾ ತಂಡಗಳು ಭಾಗವಹಿಸುವವು. ವಿಚಾರ ಸಂಕಿರಣ, ಕಲಾ ಪ್ರದರ್ಶನ, ಜಾಥಾ, ಶ್ರಮದಾನ ಹಾಗೂ ಯೋಗಾಭ್ಯಾಸ ಮುಂತಾದವುಗಳು ಜರುಗಲಿವೆ. ಫೆ. 21ರಂದು ಬೆಳಗ್ಗೆ 10ಕ್ಕೆ ರೋಣ ಪಟ್ಟಣದಲ್ಲಿ ಕೋಮು ಸೌಹಾರ್ದತಾ ಜಾಥಾ ನಂತರ ಸಾಯಿ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 11ಕ್ಕೆ ಶಿಬಿರದ ಉದ್ಘಾಟನೆ ಜರುಗಲಿದೆ. ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಶಾಸಕ ಜಿ.ಎಸ್. ಪಾಟೀಲ, ಜಿಪಂ ಅಧ್ಯಕ್ಷೆ ಕಮಲಮ್ಮ ಸಜ್ಜನರ ಸೇರಿದಂತೆ ಜಿಲ್ಲೆಯ ಸಂಸದರು, ವಿಧಾನಸಭೆ ಹಾಗೂ ವಿಪ ಸದಸ್ಯರು, ತಾಪಂ ಅಧ್ಯಕ್ಷ ಉಪಾಧ್ಯಕ್ಷರು, ಸದಸ್ಯರು ಭಾಗವಹಿಸುವರು ಎಂದು ಗದಗ ಜಿಲ್ಲಾ ಯುವ ಸಮನ್ವಯ ಅಧಿಕಾರಿ ಬಿ. ಗೋವಿಂದ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿ ವಿರೋಧಿ ನೀತಿ: ಖಂಡನೆ
ಗದಗ: ರಾಜ್ಯ ಸರ್ಕಾರವು ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ವಿದ್ಯಾರ್ಥಿ ಜನತಾದಳದ ಜಿಲ್ಲಾಧ್ಯಕ್ಷ ಪ್ರಭುರಾಜಗೌಡ ಪಾಟೀಲ ಆರೋಪಿಸಿದ್ದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟಕ್ಕೆ ತನ್ನದೇ ಆದ ಮಹತ್ವವಿದೆ. ವಿದ್ಯಾರ್ಥಿಗಳು ಭ್ರಷ್ಟಾಚಾರದ ವಿರುದ್ಧ, ವಿದ್ಯಾರ್ಥಿ ಸಮೂಹಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಿದರೆ ತಮ್ಮ ಬಣ್ಣ ಬಯಲಾಗುತ್ತೇ ಎಂಬ ಭಯದಿಂದ ಮುಖ್ಯಮಂತ್ರಿಗಳು ಈ ಮಸೂದೆ ಮಂಡಿಸಿದ್ದಾರೆ. ವಿದ್ಯಾರ್ಥಿ ಶಕ್ತಿ ರಾಷ್ಟ್ರ ಶಕ್ತಿ, ಇಂದಿನ ವಿದ್ಯಾರ್ಥಿಗಳೇ ಮುಂದಿನ ನಾಯಕರು, ವಿದ್ಯಾರ್ಥಿ ಸಮೂಹ ಕೂಡ ದೇಶದ ಸಂಪನ್ಮೂಲ. ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣ ವಿರೋಧಿಸಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಿದ್ದು, ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆಯವರಿಗೆ ಇಡೀ ದೇಶದ ವಿದ್ಯಾರ್ಥಿಗಳು, ಯುವಕರು ಬೆಂಬಲ ಸೂಚಿಸಿದ್ದು, ಇಂತಹ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನ ರಾಜ್ಯ ಸರ್ಕಾರ ಮಾಡುತ್ತಿದೆ.
ಈ ಕೂಡಲೇ ಮುಖ್ಯಮಂತ್ರಿಗಳು ವಿದ್ಯಾರ್ಥಿ ವಿರೋಧಿ ಮಸೂದೆ ಹಿಂಪಡೆಯಬೇಕು ಮತ್ತು ವಿದ್ಯಾರ್ಥಿ ಸಮೂಹಕ್ಕೆ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ರಾಜ್ಯಾಂದ್ಯಂತ ವಿದ್ಯಾರ್ಥಿಗಳು ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ವಿದ್ಯಾ ರ್ಥಿ ಜನತಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲು ಗೊಲ್ಲರ ಆಗ್ರಹಿಸಿದ್ದಾರೆ.
ಧರ್ಮದಡಿ ನಡೆದರೆ ಭಾವೈಕ್ಯ ಉಸಿರಾಗುತ್ತದೆ
ಮುಂಡರಗಿ: ಧರ್ಮಗಳು ಸರ್ವಸಮುದಾಯಗಳಿಗೆ ಲೇಸನ್ನು ಬಯಸುವ ಶ್ರೇಷ್ಠತೆ ಹೊಂದಿರುತ್ತವೆ. ಸೂಫಿಸಂತ ಮತ್ತು ಶರಣಸಂತರು ಸಮಾಜದಲ್ಲಿನ ಅಸಮಾನತೆ ಓಡಿಸಿ ಜನಪರ ಕಾಳಜಿಯ ಧರ್ಮ ಜಗತ್ತಿಗೆ ನೀಡಿದರು. ಅಂತಹ ಧರ್ಮದಡಿಯಲ್ಲಿ ಕಾರ್ಯನಿರ್ವಹಿಸಿದರೆ ಭಾವೈಕ್ಯ ನಮ್ಮ ಉಸಿರಾಗುತ್ತದೆ ಎಂದು ಕೂಡಲ ಸಂಗಮ ಪೀಠದ ಜ. ಜಯಮೃತ್ಯುಂಜಯ ಶ್ರೀಗಳು ಹೇಳಿದರು. ಅವರು ತಾಲೂಕಿನ ಕಲಕೇರಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡ ಹಜರತ್ ಸಯ್ಯದ ಸದಾಷಹ ಖಾದರಿ ಸಾಹೇಬರ ಉರೂಸ್ ಕಾರ್ಯಕ್ರಮದ ಧರ್ಮಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದರು. ಯಾವುದೇ ಧರ್ಮದವರಾಗಿರಲಿ ಎಲ್ಲರೂ ಪರಸ್ಪರ ಪ್ರೀತಿಸುತ್ತ ಸಹೋದರರಂತೆ ಬದುಕು ಸಾಗಿಸುವುದನ್ನು ಕಲಿಯಬೇಕು ಎಂದರು. ಕಾರಟಗಿಯ ಬಿ.ಪೀರಭಾಷಾ ಸೂಫಿ ಸಂತರ ಕುರಿತು ಉಪನ್ಯಾಸ ನೀಡಿದರು. ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಕಲಕೇರಿ ಗ್ರಾಮದ ಉರೂಸ್ ಕಾರ್ಯಕ್ರಮದಲ್ಲಿ ಎಲ್ಲ ಧರ್ಮದ ಗುರುಗಳನ್ನು ಕರೆಸಿ ಅವರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದರು. ಶರಣಪ್ಪ ಮತ್ತಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಕೇರಿ ಉರೂಸ್ ಕಮಿಟಿಯ ಅಧ್ಯಕ್ಷ ಎಂ.ಯು. ಮಕಾನದಾರ ಅಧ್ಯಕ್ಷತೆ ವಹಿಸಿದ್ದರು. ಬೆಳಗಟ್ಟಿ ಹಜರತ್ ಮುಸ್ತಫಾಖಾದ್ರಿ ಸಾಹೇಬ ಮತ್ತು ಗುರು ಮುದುಕೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಎ.ಎಸ್. ಮಕಾನದಾರ, ಐ.ಕೆ. ಕಮ್ಮಾರ, ಡಾ. ಸುರೇಶಕುಮಾರ ಪೆಂಡಮ್, ಪಿ.ಕೆ. ಪಾಟೀಲ ಮುಂತಾದವರನ್ನು ಸನ್ಮಾನಿಸಲಾಯಿತು. ಅಂದಪ್ಪ ಮೇಟಿ, ಶಂಕ್ರಪ್ಪ ದೇಸಾಯಿ, ಕೆ.ಎ. ದೇಸಾಯಿ, ರಾಜಶೇಖರ ಮೇಟಿ, ಎಸ್.ಡಿ. ಮಕಾನದಾರ, ಕೊಟ್ರಪ್ಪ ಗೋದಿಹುಗ್ಗಿ, ರಾಜಾಹುಸೇನ ಖತೀಬ, ಪೀರಸಾಬ್ ನದಾಫ್, ಜಾಫರಸಾಬ್ ಲಕ್ಷ್ಮೇಶ್ವರ, ಎಚ್.ಎಸ್. ಮುಲ್ಲಾ, ಧನಂಜಯ ದ್ರಾಕ್ಷಿ, ನೂರಅಹ್ಮದ ಮಕಾನದಾರ ಮುಂತಾದವರು ಇದ್ದರು. ಜಯರುದ್ದೀನ್ ಮುಲ್ಲಾ ನಿರೂಪಿಸಿ, ವಂದಿಸಿದರು.
ಮಹಿಳಾ ಸಮುದಾಯ ಸಬಲತೆಗೆ ಹಲವು ಯೋಜನೆ
ಗಜೇಂದ್ರಗಡ: ಮಹಿಳಾ ಸಮುದಾಯ ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲರಾಗಲು ಸರ್ಕಾರ ಹಲವಾರು ಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಯೋಜನೆಯ ಲಾಭ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಎಂದು ಸಮುದಾಯ ಅಭಿವೃದ್ಧಿ ಸಂಘದ ಅಧ್ಯಕ್ಷೆ ಅನ್ನಪೂರ್ಣಾ ಚವ್ಹಾಣ ಹೇಳಿದರು.
ಪಟ್ಟಣದ ಸರ್ಕಾರಿ ಗಂಡು ಮಕ್ಕಳ ಪ್ರಾಥಮಿಕ ಶಾಲೆ ನಂ. 1ರಲ್ಲಿ ಬುಧವಾರ ಪುರಸಭೆಯ ಸ್ವರ್ಣಜಯಂತಿ, ಶಹರಿ ರೋಜಗಾರ ಯೋಜನೆಯ ನಿರಂತರ ಉಳಿತಾಯ ಮತ್ತು ಸ್ವಸಹಾಯ ಗುಂಪುಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಲೆಕ್ಕ ಪುಸ್ತಕಗಳ ನಿರ್ವಹಣೆ ಒಕ್ಕೂಟದ ಮಾಹಿತಿ ಬ್ಯಾಂಕ್ ಸಂಪರ್ಕ ಕುರಿತ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ವಸಹಾಯ ಗುಂಪುಗಳ ಮೂಲಕ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳೆಯರು ತಮ್ಮ ಆರ್ಥಿಕ ಅನುಗುಣಕ್ಕೆ ತಕ್ಕಂತೆ ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು. ಪುರಸಭೆ ಸ್ಥಾಯಿ ಸಮಿತಿ ಮುಖ್ಯಸ್ಥ ಅಶೋಕ ವನ್ನಾಲ ಮಾತನಾಡಿದರು. ಉಪಾಧ್ಯಕ್ಷೆ ಅಕ್ಕಮ್ಮ ಜಾನಾಯಿ, ಸದಸ್ಯ ಚಂದ್ರಶೇಖರ ಚಳಗೇರಿ, ಶಾರದಾ ರಾಠೋಡ, ಮಾಜಿ ಅಧ್ಯಕ್ಷೆ ಪುಷ್ಪಾವತಿ ಭಾಂಡಗೆ, ಯೋಜನಾಧಿಕಾರಿ ಎನ್.ಎಚ್. ಖುದಾನವರ, ಬಿ.ಟಿ. ಬಂಡಿವಡ್ಡರ, ಪ್ರಸಾದ ಭಟ್, ವಿಷ್ಣು ಅಂಬೋರೆ, ಆನಂದ ಮಳಗಿ, ಬಿ.ಎಸ್. ಬಳಗಾನೂರ ಇದ್ದರು.