ಮಾನವನ ದುರಾಸೆಗೆ ಪರಿಸರ ನಾಶ
ಗಜೇಂದ್ರಗಡ: ಪರಿಸರ ಸಕಲ ಜೀವ ರಾಶಿಗಳಿಗೆ ಆಧಾರ. ಆದರೆ ಮಾನವನ ದುರಾಸೆಗೆ ಅಮೂಲ್ಯ ಪರಿಸರ ನಶಿಸುತ್ತಿದೆ. ಹೀಗೆ ಮುಂದುವರಿದರೆ ಬರುವ ದಿನಗಳಲ್ಲಿ ಜೀವಜಂತುಗಳಿಗೆ ಮಾರಕ ಖಂಡಿತ ಎಂದು ಪ್ರಾಚಾರ್ಯ ವೈ.ಸಿ. ಪಾಟೀಲ ಹೇಳಿದರು.
ಅವರು ಪಟ್ಟಣದ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದಲ್ಲಿ ಈಚೆಗೆ ಜರುಗಿದ ಅಂಕುರ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಹಸಿರು ಸೃಷ್ಟಿಯ ಕೊಡುಗೆಯಾಗಿದ್ದು, ಇಂತಹ ಪರಿಸರ ಉಳಿವಿಗಾಗಿ ಆಡಳಿತ ಜತೆ ಸಮುದಾಯ ಕೈಜೋಡಿಸಿ ಪರಿಸರ, ಅರಣ್ಯ ಸಂಪತ್ತಿನ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕಾಯಕಕ್ಕೆ ಶಿಕ್ಷಕ ಸಮೂಹ ಮುಂದಾಗಬೇಕು ಎಂದರು.
ಕೇವಲ ಶಾಲಾ, ಕಾಲೇಜು ಮೈದಾನಗಳಲ್ಲಿ ಗಿಡಗಳನ್ನು ಬೆಳೆಸಿದರೆ ಸಾಲದು, ನಮ್ಮ ಸುತ್ತಲಿನ ಪರಿಸರದಲ್ಲಿ ಗಿಡ ನೆಟ್ಟು ಪ್ರಕೃತಿಯ ಸೊಬಗನ್ನು ಹೆಚ್ಚಿಸುವುದರ ಜತೆಗೆ ನಾವೆಲ್ಲರೂ ಆರೋಗ್ಯವಂತರಾಗಿರಲು ಪರಿಸರ ಸಂರಕ್ಷಿಸಲು ಮುಂದಾಗಬೇಕು. ನಿತ್ಯ ಕೆಲ ಸಮಯವಾದರೂ ಪರಿಸರ ಸಂಪತ್ತು ಉಳಿಸಲು ಮೀಸಲಿಡಬೇಕು. ಈ ನಿಟ್ಟಿನಲ್ಲಿ ಇಂದೇ ಸಂಕಲ್ಪ ಮಾಡಬೇಕು ಎಂದರು.
ಪ್ರಾಚಾರ್ಯ ಎ.ಪಿ. ಗಾಣಿಗೇರ ಮಾತನಾಡಿ, ಸ್ವಾರ್ಥಕ್ಕಾಗಿ ಅಮೂಲ್ಯವಾದ ನಿಸರ್ಗ ಸಂಪತ್ತನ್ನು ನಾಶಪಡಿಸುವುದರ ಜತೆಗೆ ನಾವು ಕೂಡ ವಿನಾಶದ ಅಂಚಿಗೆ ತಲುಪಿದ್ದೇವೆ. ಇನ್ನಾದರೂ ಹಸಿರು ಸಂಪತ್ತು ಉಳಿಸಲು ಮುಂದಾಗಬೇಕು. ಪರಿಸರ ಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ಮಾಡಿ, ಪರಿಸರ ರಕ್ಷಣೆಗೆ ಮುಂದಾಗಿ ಎಂದರು. ಪುರಸಭೆ ಸದಸ್ಯ ಶರಣಪ್ಪ ರೇವಡಿ, ಎಫ್.ಎನ್. ಹುಡೇದ, ಎಂ.ಪಿ. ಪಾಟೀಲ್, ಶಿವಯ್ಯ ಚಕ್ಕಡಿಮಠ, ಬಿ.ಸಿ. ಚಿನವಾಲರ, ಡಿ.ಬಿ. ವಣಗೇರಿ, ವಿ.ಆರ್. ಗಾರಗಿ, ರೋಷನ್ ಭಾಂಡಗೆ, ಚಾಂದಫೀರ ನದಾಫ್ ಮುಂತಾದವರು ಇದ್ದರು.