ಉತ್ಸವಕ್ಕೆ ಲಕ್ಕುಂಡಿ ಶೃಂಗಾರ
ಕನ್ನಡಪ್ರಭ ವಾರ್ತೆ, ಗದಗ, ಫೆ. 20
ಶಿಲ್ಪಕಲೆಯ ಮೂಲಕ ರಾಜ್ಯಾದ್ಯಂತ ಪ್ರಖ್ಯಾತಿ ಪಡೆದಿರುವ ಗದಗ ಜಿಲ್ಲೆಯ ಲಕ್ಕುಂಡಿಗೆ ಮೆರಗು ನೀಡುವಂತೆ ಫೆ. 22ರಿಂದ 24ರ ವರೆಗೆ ಲಕ್ಕುಂಡಿ ಉತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಲಕ್ಕುಂಡಿಯಲ್ಲಿ ಎಲ್ಲಿಲ್ಲದ ಸಂಭ್ರಮದ ಕಳೆ ಕಂಡುಬರುತ್ತಿದೆ. ಈಗಾಗಲೇ ಉತ್ಸವಕ್ಕೆ ಬೇಕಾದ ಸಕಲ ಸಿದ್ಧತೆ ಜಿಲ್ಲಾಡಳಿತ ಕೈಗೊಂಡಿದ್ದು, ಇಡೀ ಗ್ರಾಮವೇ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಲಕ್ಕುಂಡಿ ಉತ್ಸವಕ್ಕೆ ರು. 60 ಲಕ್ಷ ವೆಚ್ಚವನ್ನು ಜಿಲ್ಲಾಡಳಿತ ನಿಗದಿಪಡಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರು. 30 ಲಕ್ಷ, ಪ್ರವಾಸೋದ್ಯಮ ಇಲಾಖೆಯಿಂದ ರು. 10 ಲಕ್ಷ ಹಾಗೂ ಸ್ಥಳೀಯ ಸಂಪನ್ಮೂಲಗಳಿಂದ ರು. 20 ಲಕ್ಷ ಸಂಗ್ರಹಿಸಲಾಗುತ್ತಿದೆ.
ಈ ಉತ್ಸವಕ್ಕೆ ಈಗಾಗಲೇ ಇದಕ್ಕೆ ಸಂಬಂಧಿಸಿದ 15 ಸಮಿತಿ ರಚಿಸಿ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಲಕ್ಕುಂಡಿ ಉತ್ಸವವು ಜಿಲ್ಲಾ ಉತ್ಸವವಾಗುವುದರಿಂದ ಜಿಲ್ಲಾಮಟ್ಟದ ಎಲ್ಲ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರನ್ನು ಒಳಗೊಂಡ ಸಮಿತಿ ರಚನೆಯ ಸಂಪೂರ್ಣವಾಗಿ ಪೂರ್ಣಗೊಂಡಿದೆ.
3 ವರ್ಷಗಳ ನಂತರ ಉತ್ಸವ: ಕಳೆದ 2011ರ ನಂತರ 3 ವರ್ಷಗಳ ಬಳಿಕ ಈ ಲಕ್ಕುಂಡಿ ಉತ್ಸವ ಆಚರಿಸಲಾಗುತ್ತಿದೆ. ಈ ಬಾರಿಯ ಉತ್ಸವವನ್ನು ಅದ್ಧೂರಿಯಾಗಿ ನಡೆಸಲು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ನಿರ್ಧರಿಸಿದ್ದು, ಇದಕ್ಕೆ ಬೇಕಾದಂತ ಅನುದಾನದ ಕೊರತೆ ನೀಗಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ.
ಗ್ರಾಮದ ನನ್ನೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಉತ್ಸವ ನಡೆಸಲು ನಿರ್ಧರಿಸಲಾಗಿದ್ದು, ಈ ದೇವಸ್ಥಾನದ ಸುತ್ತಲಿನ ಪ್ರದೇಶದ ಸ್ವಚ್ಛ ಕಾರ್ಯ ಕೈಗೊಳ್ಳಲಾಗಿದೆ.
ಉತ್ಸವಕ್ಕೆ ಸಾರ್ವಜನಿಕರಿಗೆ ಹಾಗೂ ಗಣ್ಯರಿಗೆ ಆಗಮಿಸಲು ಮತ್ತು ನಿರ್ಗಮಿಸಲು ಪ್ರತ್ಯೇಕ ದ್ವಾರ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಸಾರ್ವಜನಿಕರಿಗೆ ಊಟದ ವ್ಯವಸ್ಥೆ, ಕ್ರೀಡಾಕೂಟಕ್ಕೆ ಆಟದ ಮೈದಾನದ ಸಿದ್ಧತೆಗೊಳ್ಳುತ್ತಿದೆ.
ಫೆ. 22ರಿಂದ 24ರ ವರೆಗೆ ನಡೆಯುವ ಲಕ್ಕುಂಡಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸುವ ಉದ್ದೇಶ ಹೊಂದಿದ್ದು, ಸಕಲ ಸಿದ್ಧತೆ ಜಿಲ್ಲಾಡಳಿತ ಕೈಗೊಂಡಿದೆ. ಗ್ರಾಮದ ಶುಚಿತ್ವ, ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗೆ ಹಾಗೂ ಉತ್ಸವದಲ್ಲಿ ಪಾಲ್ಗೊಳ್ಳುವ ಜನರಿಗೆ ಆಸನದ ವ್ಯವಸ್ಥೆ ಸೇರಿದಂತೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
-ಎನ್.ಎಸ್. ಪ್ರಸನ್ನಕುಮಾರ,
ಜಿಲ್ಲಾಧಿಕಾರಿ
ಲಕ್ಕುಂಡಿ ಗ್ರಾಮದ ರಸ್ತೆ, ಕೆರೆ, ಕಾಲುವೆಗಳ ದುರಸ್ತಿ, ಊರ ಸ್ವಚ್ಛತೆಗಾಗಿ ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ಐತಿಹಾಸಿಕ ಸ್ಥಳಗಳನ್ನು ಶೃಂಗರಿಸುವ ಕಾಮಗಾರಿ ಕೈಕೊಳ್ಳಲಾಗುತ್ತಿದೆ. ಉತ್ಸವದ ಮುಖ್ಯವೇದಿಕೆ ನಿರ್ಮಾಣ, ಅಲ್ಲಿ ಜರುಗುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅದರಲ್ಲಿ ಭಾಗವಹಿಸುವ ನಾಡಿನ ಕಲಾವಿದರನ್ನು ಕರೆಯಿಸಲು ಕೈಕೊಳ್ಳಬೇಕಾಗಿರುವ, ಸೂಕ್ತ ಪೊಲೀಸ್ ಬಂದೋಬಸ್ತ್ ಹಾಗೂ ಊಟೋಪಚಾರದ ಸಿದ್ಧತೆ ನಡೆದಿವೆ. ಜಿಲ್ಲಾಧಿಕಾರಿ, ಶಾಸಕ, ಸಚಿವರ ಮಾರ್ಗದರ್ಶನದಲ್ಲಿ ಉತ್ಸವಕ್ಕೆ ಬೇಕಾದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
-ವೀರಣ್ಣ ತುರಮರಿ,
ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ
- ಅಜೀಜಅಹ್ಮದ ಬಳಗಾನೂರ