ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಐತಿಹಾಸಿಕ ತಾಣಗಳ ತೊಟ್ಟಿಲಲ್ಲಿ ಸಾಹಿತ್ಯ ಜಾತ್ರೆ

Lingaraj Badiger
Updated On : 21 Feb 2014, 12:35 pm

ಕನ್ನಡಪ್ರಭ ವಾರ್ತೆ, ರೋಣ, ಫೆ. 20
ಐತಿಹಾಸಿಕ ತೊಟ್ಟಿಲು, ಪ್ರಸಿದ್ಧ ತಾಣಗಳ ಬೀಡು, ಬಯಲು ಗಂಡು ಮೆಟ್ಟಿನ, ಸೀಮೆಯ ನಾಡೆಂದು ಕರೆಸಿಕೊಳ್ಳುವ ಗದಗ ಜಿಲ್ಲೆಯ ರೋಣ ತಾಲೂಕಿನಲ್ಲೀಗ ಸಾಹಿತ್ಯ ಜಾತ್ರೆಯ ಸೊಬಗು ಹೆಚ್ಚಿದೆ.
ಫೆ. 22 ಮತ್ತು 23ರಂದು ಪಟ್ಟಣದಲ್ಲಿ ಜರುಗುವ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರು ತಾಲೂಕಿನ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡಲೇ ಬೇಕು. ಅವು ಅಷ್ಟೊಂದು ಆಕರ್ಷಣೀಯವಾಗಿವೆ. ತಾಲೂಕಿನ ಕೇಂದ್ರ ಸ್ಥಾನವಾದ ರೋಣದಲ್ಲಿ ದ್ರೋಣಾಚಾರ್ಯ ಜನಿಸಿದ್ದಾನೆ ಎಂಬ ಐತಿಹ್ಯವಿದೆ. ಅದಕ್ಕಾಗಿ ರೋಣಕ್ಕೆ ದ್ರೋಣಪುರ ಎಂತಲೂ ಕರೆಯುತ್ತಾರೆ. ಇಲ್ಲಿ 10ನೇ ಶತಮಾನದ ಪಾರ್ಶ್ವನಾಥ ತೀರ್ಥಂಕ ಜೀನ ಬಸದಿಯಿದ್ದು, ಇಲ್ಲಿ 24 ತೀರ್ಥಂಕರ ಮೂರ್ತಿ ಸ್ಥಾಪಿಸಲಾಗಿದೆ. ಪಟ್ಟಣದಲ್ಲಿ ಶೈವ ದೇವಾಲಯಗಳಾದ ಲೋಕನಾಥೇಶ್ವರ ದೇಗುಲ, ರಾಮನಾಥೇಶ್ವರ ದೇಗುಲ, ಮಲ್ಲಿನಾಥೇಶ್ವರ, ಈಶನಾಥೇಶ್ವರ ದೇಗುಲ, ಜೋಡು ಮಾರುತಿ ದೇಗುಲ, ಗುಲಗಂಜಿ ಮಠ, ವೀರಭದ್ರೇಶ್ವರ ದೇವಸ್ಥಾನ, ಪ್ರಾಚೀನ ಕಾಲದ ಅಜ್ಜಮ್ಮನ ಬಾವಿ, ಗೌಡ್ರ ಬಾವಿ ಸೇರಿದಂತೆ ಅನೇಕ ಐತಿಹಾಸಿಕ ತಾಣಗಳನ್ನು ಪಟ್ಟಣ ಹೊಂದಿದ್ದು, ಇಲ್ಲಿನ ದೇಗುಲಗಳು ಮನಮೋಹಕ, ಸುಂದರವಾದ ಕೆತ್ತನೆ, ಆಕರ್ಷಕ ಮೂರ್ತಿ, ಸಭಾ ಮಂಟಪ ಒಳಗೊಂಡಿದೆ.
ಐತಿಹಾಸಿಕ ದೇವಸ್ಥಾನಗಳು: ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ಸಾವಿರ ವರ್ಷಗಳ (10ನೇ ಶತಮಾನ) ಇತಿಹಾಸ ಹೊಂದಿದ ರಾಷ್ಟ್ರಕೂಟರ ಕಾಲಕ್ಕೆ ಸೇರಿದ್ದ ಬ್ರಹ್ಮದೇವರ ದೇಗುಲವಿದೆ. ಸೈಯಡಿ(ಸವಡಿ)ಯಲ್ಲಿ 3 ಶಾಸನ ಪತ್ತೆಯಾಗಿದ್ದು, ಇವುಗಳಲ್ಲಿ ಕ್ರಿಶ 970ರ ರಾಷ್ಟ್ರಕೂಟರ ಖೊಟ್ಟಿಗಗನ ಶಾಸನ, ಕ್ರಿಶ 1083ರ ಶಾಸನ, ಇಮ್ಮಡಿ ದೇವರಾಯನ ಕಾಲದ ಕ್ರಿಶ 1431ರ ಶಾಸನ ಪ್ರಮುಖವಾದವುಗಳಾಗಿವೆ. ಬ್ರಹ್ಮದೇವರ ದೇಗುಲದಲ್ಲಿ ಗರ್ಭಗುಡಿ, ತೆರೆದ ಮಂಟಪ, ವಿಶಾಲಸಭಾ ಮಂಟಪ ಹೊಂದಿರುವ ಇದರ ಗರ್ಭಗುಡಿಯಲ್ಲಿ ಒಂದೇ ಪೀಠದಲ್ಲಿ ಹಂಸಪೀಠ ಮೇಲಿರುವ ಚತುರ್ಮುಖ ಬ್ರಹ್ಮ, ನಂದಿಪೀಠದ ಮೇಲಿರುವ ಶಿವಲಿಂಗ ಹಾಗೂ ಗರುಡ ಪೀಠದ ಮೇಲಿರುವ ಚತುರ್ಮುಖ ವಿಷ್ಣು ಮೂರ್ತಿಗಳಿವೆ. ಇಲ್ಲಿಂದ ಅಬ್ಬಿಗೇರಿ, ನರೇಗಲ್‌ಗೆ ಬಂದರೆ ಕೋಡಿಕೊಪ್ಪ ಹುಚ್ಚಿರೇಶ್ವರ ಮಠ, ಬಾಗಲಕೋಟೆ ಮಲ್ಲಣಾರ್ಯ ಸಮಾಧಿ ಸ್ಥಳ, ದತ್ತಾತ್ರೇಯ ದೇವಸ್ಥಾನಗಳಿವೆ. ಮರಾಠರು, ಪೇಶ್ವೆಗಳು, ಮಹಾರಾಷ್ಟ್ರದಿಂದ ಬಂದ ಘೋರ್ಪಡೆ ಮನೆತನದವರ ಆಳ್ವಿಕೆಗೆ ಒಳಪಟ್ಟ ಗಜೇಂದ್ರಗಡದ ಉತ್ತರ ಭಾಗಕ್ಕೆ ವಿಶಾಲವಾಗಿ ಹರಡಿರುವ ಸುಂದರ ಕೋಟೆಯಿದೆ. ಗುಡ್ಡದ ಮೇಲ್ಭಾಗದಲ್ಲಿ ಆಕಳು, ಮಂಗನ, ಅಕ್ಕ-ತಂಗಿಯರ ಹೊಂಡ, ಮದ್ದು ಗುಂಡಿನ ಮನೆ ಮತ್ತು ಗುಡ್ಡದ ಕೆಳಗಿರುವ ಘೋರ್ಪಡೆಯವರ ವಾಡೆ ಕಣ್ಮನ ಸೆಳೆಯುತ್ತವೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದ ಕಾಲಕಾಲೇಶ್ವರ ದೇವಸ್ಥಾನ, ಐತಿಹಾಸಿಕ ಪ್ರಸಿದ್ಧಿಯ ದೇವಾಲಯ ತೊಟ್ಟಿಗಳ ತೊಟ್ಟಿಲು ಸೂಡಿ, ಸುಕ್ಷೇತ್ರ ಇಟಗಿ ಭೀಮಾಂಬಿಕಾ ದೇವಸ್ಥಾನಗಳಿವೆ.
ಕಾಲಕಾಲೇಶ್ವರದಿಂದ ರೋಣ ರಸ್ತೆಯ ಮೂಲಕ 11 ಕಿಮೀ ಸಾಗಿದರೆ ಅಕ್ಕಾದೇವಿ ಆಳಿದ ಐತಿಹಾಸಿಕ ಸೂಡಿ ಗ್ರಾಮ ಕಾಣಸಿಗುತ್ತದೆ. ಇಲ್ಲಿ ಪ್ರಾಚೀನ ಕಲೆ, ವಾಸ್ತು ಶಿಲ್ಪಗಳ ಗತ ವೈಭವ ಸಾರುವ ಜೋಡು ಕಳಸದ ದೇಗುಲ, ಮಲ್ಲಿಕಾರ್ಜುನ ದೇಗುಲ, ಹುಡೆದಗಡ್ಡಿ, ರಕ್ಕಸಬಾವಿ, ನಗರೇಶ್ವರ, ನಂದಿ, ಗಣೇಶ, ಈಶ್ವರ ಮುಂತಾದ ಐತಿಹಾಸಿಕ ದೇಗುಲಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಚಾಲುಕ್ಯ, ರಾಷ್ಟ್ರಕೂಟ ಕಾಲದಲ್ಲಿ ಇಲ್ಲಿ ಅನೇಕ ಶೈವ ದೇವಾಲಯಗಳನ್ನು ಸ್ಥಾಪಿಸಲಾಗಿದೆ. ಅವುಗಳು ಇಂದಿಗೂ ತನ್ನ ಸೊಬಗನ್ನು ಮೆರೆಯುತ್ತಾ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಹೀಗೆ ಸಾಹಿತ್ಯಾಸಕ್ತರು ಸಾಹಿತ್ಯ ಜಾತ್ರೆಯ ಜ್ಞಾನ ದಾಸೋಹದ ಜತೆಗೆ ಇಲ್ಲಿನ ಐತಿಹಾಸಿಕ ಪ್ರವಾಸಿ ತಾಣಗಳ ಸೊಬಗು ಸವಿಯಲು ಮರೆಯದಿರಿ.
- ಪಿ.ಎಸ್. ಪಾಟೀಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement