ಕನ್ನಡ ಬೆಳೆಸುವ ಕಾರ್ಯವಾಗಲಿ: ಶಿರಹಟ್ಟಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಫೆ. 20
(ಹೆಬ್ಬಾಳ,ಸಿದ್ಧರಾಮ ಶಿವಯೋಗಿಗಳ ಮಹಾವೇದಿಕೆ): ನಾಡು, ನುಡಿ ರಕ್ಷಣೆ ಮಾಡುವ ನಿಟ್ಟಿನಲ್ಲಿ ಹೊಸ ತಲೆಮಾರಿನ ಯುವ ಸಮುದಾಯವನ್ನು ಗಟ್ಟಿ ತಂಡವಾಗಿ ಕಟ್ಟುವ ಕೆಲಸ ಹಿರಿಯರ ಮೇಲಿದೆ ಎಂದು ಸಮ್ಮೇಳನಾದ್ಯಕ್ಷ ಜಿ.ಎಂ. ಶಿರಹಟ್ಟಿ ಹೇಳಿದರು.
ಅವರು ಬುಧವಾರ ರಾತ್ರಿ ತಾಲೂಕಿನ ಹೆಬ್ಬಾಳ ಗ್ರಾಮದ ಶಿವಯೋಗೀಶ್ವರ ಪ್ರೌಢಶಾಲಾ ಮೈದಾನಲ್ಲಿ ಏರ್ಪಡಿಸಿದ್ದ ಶಿರಹಟ್ಟಿ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಾಹಿತ್ಯವೆಂದರೆ ಕೇವಲ ಶಬ್ದಗಳ ಆಡಂಬರ, ಚಂದಸ್ಸಿನ ಚಮತ್ಕಾರವಲ್ಲ. ಭಾವ ರಸಾನುಭೂತಿ ಮೇಳೈಸಿದಾಗ ಮಾತ್ರ ಅದು ಸಾಹಿತ್ಯವೆನಿಸುತ್ತದೆ. ಮಾತೃಭಾಷೆಯಲ್ಲಿಯೇ ಶಿಕ್ಷಣ ಕೊಡಿಸುವ ಮೂಲಕ ಭಾಷೆಯ ಉಳಿವಿಗೆ ಶ್ರಮಿಸಬೇಕು. ರಾಜ್ಯದಲ್ಲಿ ಕನ್ನಡ ಭಾಷೆ ತನ್ನದೇ ಆದ ಗೌರವ, ಮೌಲ್ಯ ಹೊಂದಿದೆ. ಇಂತಹ ಕನ್ನಡವನ್ನು ಉಳಿಸಿ, ಬೆಳೆಸುವುದು ಪ್ರತಿ ಕನ್ನಡಿಗರ ಕರ್ತವ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ತಾಲೂಕಿನಲ್ಲಿ ಈ ಹಿಂದೆ ನಡೆದ ಸಮ್ಮೇಳನಕ್ಕೂ ಹೆಬ್ಬಾಳ ಗ್ರಾಮದಲ್ಲಿ ನಡೆದ ಸಮ್ಮೇಳನಕ್ಕೂ ಹೋಲಿಸಿದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಸ್ಥಳೀಯರ ಸಹಕಾರ, ಉತ್ಸಾಹ ಹಾಗೂ ಅವರ ಕನ್ನಡ ಪ್ರೇಮ ನಿಜಕ್ಕೂ ಶ್ಲಾಘನೀಯ. ಹೆಬ್ಬಾಳ ಗ್ರಾಮದವರು ಸ್ವಯಂ ಪ್ರೇರಿತವಾಗಿ ಕನ್ನಡ ತಾಯಿಯ ಸೇವೆಯಲ್ಲಿ ತೊಡಗಿದ್ದಾರೆ. ಆದ್ದರಿಂದ ಸಮ್ಮೇಳನ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಆಗಲು ಸಾಧ್ಯವಾಯಿತು ಎಂದರು. ಬಸವರಾಜ ಶ್ರೀಗಳು, ಸುಜ್ಞಾನದೇವ ಶಿವಾಚಾರ್ಯ ಶ್ರೀ, ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಶ್ರೀ, ಕಸಾಪ ಅಧ್ಯಕ್ಷ ಕೆ.ಎ. ಬಳಿಗೇರ, ಎನ್.ವೈ. ಕುರಿ, ಎಚ್.ಎಚ್. ಬಳ್ಳಾರಿ, ಎಫ್.ಎಸ್. ಅಕ್ಕಿ, ಎಚ್.ಬಿ. ರಡ್ಡೇರ, ಬಿ.ಎಸ್. ಈಳಗೇರ, ಲಿಂಬಯ್ಯಸ್ವಾಮಿ, ಟಿ.ಈಶ್ವರ, ಲಕ್ಷ್ಮಣಗೌಡ್ರ ಪಾಟೀಲ, ಆರ್.ಎಸ್. ಬುರಡಿ, ಸಿಪಿಐ ಶ್ರೀನಿವಾಸ ಮೇಟಿ, ಶರಣು ಗೋಡಿ, ರಾಘವೇಂದ್ರ ತಿಮ್ಮರಡ್ಡೇರ ಮುಂತಾದವರು ಉಪಸ್ಥಿತರಿದ್ದರು.
ಬಹಿರಂಗ ಅಧಿವೇಶನ ನಿರ್ಣಯಗಳು
ಸಮ್ಮೇಳನದಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿ ಗಿರೀಶ ಕೋಡಬಾಳ ಅನೇಕ ಗೊತ್ತುವಳಿಗಳನ್ನು ಮಂಡನೆ ಮಾಡಿದರು. ಶಿಂಗಟಾಲೂರು-ಹುಲಿಗುಡ್ಡ ಏತ ನೀರಾವರಿ ಯೋಜನೆಯನ್ನು ಶಿರಹಟ್ಟಿ ತಾಲೂಕಿಗೆ ವಿಸ್ತರಿಸಿ ನಿಗದಿತ ಕಾಲಮಿತಿಯಲ್ಲಿ ಮುಗಿಸಿ ರೈತರಿಗೆ ಅನುಕೂಲಮಾಡಿಕೊಡಬೇಕು. ಹೊಳೆ-ಇಟಗಿ-ಸಾಸಲವಾಡ ನೀರಾವರಿ ಯೋಜನೆಯನ್ನು ಪುನಃ ಕಾರ್ಯಗತಗೊಳಿಸಿ ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ತಾಲೂಕು ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಅನುದಾನ ಮಂಜೂರಿ ಮಾಡುವುದು. ಸಮ್ಮೇಳನದ ಸವಿ ನೆನಪಿಗಾಗಿ ಸುಸಜ್ಜಿತ ಶಾಖಾ ಗ್ರಂಥಾಲಯ ನಿರ್ಮಿಸುವುದು. ನಿತ್ಯ ವ್ಯವಹಾರದಲ್ಲಿ ಕನ್ನಡ ಬಳಕೆಗಾಗಿ ಪ್ರೋತ್ಸಾಹಕ ಕಾರ್ಯಕ್ರಮ ಹಾಕಿಕೊಳ್ಳುವುದು. ಸಮ್ಮೇಳನದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸುವುದು. ವಿಜಯನಗರ ಸಕ್ಕರೆ ಕಾರ್ಖಾನೆಯಿಂದ ಕಬ್ಬು ಬೆಳೆಯುವ ರೈತರಿಗೆ ಆರ್ಥಿಕ ನೆರವು ನೀಡುವುದು. ಲಕ್ಷ್ಮೇಶ್ವರ ತಾಲೂಕನ್ನಾಗಿ ಘೋಷಿಸುವುದು. ಬೆಳ್ಳಟ್ಟಿ ಗ್ರಾಮದಲ್ಲಿ ನಾಡಕಚೇರಿ ಸ್ಥಾಪಿಸುವುದು. ಅಂತರ್ಜಲ ಹೆಚ್ಚಿಸಲು ತಾಲೂಕಿನ ಕೆರೆಗಳನ್ನು ಅಭಿವೃದ್ಧಿಪಡಿಸಿ ಆ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರೊದಗಿಸುವುದು. ಸಸ್ಯಕಾಶಿಯೆಂದು ಹೆಸರು ಪಡೆದ ಕಪ್ಪತ್ತಗುಡ್ಡ ಅಭಿವೃದ್ಧಿಪಡಿಸುವುದು. ತಾಲೂಕಿನ ಐತಿಹಾಸಿಕ ಸ್ಥಳಗಳಾದ ಲಕ್ಷ್ಮೇಶ್ವರದ ಸೋಮನಾಥ ದೇವಾಲಯ, ಶಿರಹಟ್ಟಿಯ ಫಕೀರೇಶ್ವರ ಮಠ, ವರವಿಯ ಮೌನೇಶ್ವರ ದೇವಾಲಯ, ಶ್ರೀಮಂತಗಡದ ಹೊಳಲಮ್ಮ ದೇವಿ ದೇವಸ್ಥಾನ ಇತರೇ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವ ನಿರ್ಣಯಗಳನ್ನು ಮಂಡನೆ ಮಾಡಲಾಯಿತು.