ಪ್ರತಿಭೆ ಅನಾವರಣಕ್ಕೆ ಸಮ್ಮೇಳನಗಳು ಅವಶ್ಯ
ಮುಂಡರಗಿ: ಮಕ್ಕಳಿಗೆ ಪ್ರತಿಭೆ ಅನಾವರಣಗೊಳಿಸಲು ವಾರ್ಷಿಕ ಸ್ನೇಹ ಸಮ್ಮೇಳನ ಅವಕಾಶ ಕಲ್ಪಿಸಿಕೊಡುತ್ತದೆ. ಅಂತಹ ಸ್ನೇಹ ಸಮ್ಮೇಳನಗಳು ಅವಶ್ಯ ಎಂದು ಸ್ಥಳೀಯ ಜ.ಅನ್ನದಾನ ವಿದ್ಯಾ ಸಮಿತಿಯ ವಿಶೇಷ ಅಧಿಕಾರಿ ಎಸ್.ಎಂ. ಹೊಸಮಠ ಹೇಳಿದರು. ಬುಧವಾರ ಪಟ್ಟಣದ ಎಂ.ಎಸ್. ಡಂಬಳ ಬಾಲಕಿಯರ ಪ್ರೌಢಶಾಲೆ ಮತ್ತು ಜ.ಅನ್ನದಾನೀಶ್ವರ ಹೆಣ್ಣುಮಕ್ಕಳ ಪಪೂ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಈ ಭಾಗದ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶಿಕ್ಷಣ ದೊರಕಿಸಿಕೊಡುವ ಉದ್ದೇಶದಿಂದ ಪೂಜ್ಯರು ಹೆಣ್ಣು ಮಕ್ಕಳಿಗಾಗಿಯೇ ಪ್ರತ್ಯೇಕ ಪ್ರೌಢ ಶಾಲೆ, ಕಾಲೇಜು ತೆರೆದಿದ್ದಾರೆ ಎಂದರು. ಸಾನ್ನಿಧ್ಯ ವಹಿಸಿದ್ದ ಜ. ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು ಮಾತನಾಡಿ, ಜಾಣ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು. ಶಾಲಾ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಶಂಕ್ರಪ್ಪ ಬಾರಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವ ಕಾರ್ಯದರ್ಶಿ ಅಂದಪ್ಪ ಬೆಲ್ಲದ, ಶಾಲಾ ಮೇಲ್ವಿಚಾರಣಾ ಸಮಿತಿ ಸದಸ್ಯ ವಿ.ಎಸ್. ಚವಡಿ ಇದ್ದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೀರಣ್ಣ ಮೇಟಿ ಸ್ವಾಗತಿಸಿದರು. ಪ್ರಾ. ಬಿ.ಕೆ. ಪಾಟೀಲ ವಾರ್ಷಿಕ ವರದಿ ವಾಚಿಸಿದರು. ಎಸ್.ಎಸ್. ಇನಾಮತಿ ನಿರೂಪಿಸಿ, ವಂದಿಸಿದರು.