ಬಿಟಿ ಹತ್ತಿ ಬೆಳೆ ನಷ್ಟ ಪರಿಹಾರಕ್ಕೆ ಒತ್ತಾಯ
ಕನ್ನಡಪ್ರಭ ವಾರ್ತೆ, ಗದಗ, ಫೆ. 20
ಬಿಟಿ ಕನಕ ಕಾವೇರಿ ಹತ್ತಿ ಬೆಳೆ ನಷ್ಟವಾಗಿದ್ದರಿಂದ ರೈತರೆಲ್ಲರೂ ಸಂಕಷ್ಟ ಎದುರಿಸುತ್ತಿದ್ದು ರೈತರಿಗೆ ಸರ್ಕಾರ ಪರಿಹಾರ ನೀಡಲು ಆಗ್ರಹಿಸಿ ಫೆ. 21 ಹಾಗೂ 22ರಂದು ಹಾವೇರಿ ಜಿಲ್ಲೆಯ ಮೊಟೆಬೆನ್ನೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ರಾಸ್ತಾ ರೋಕೋ ಚಳವಳಿ ನಡೆಸಲಾಗುವುದೆಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಜಿ. ಶಾಂತಸ್ವಾಮಿಮಠ ಹೇಳಿದರು.
ಅವರು ಬುಧವಾರ ನಗರದ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಕೋ ಕಂಪನಿಯ ಪ್ರತಿ ಎಕರೆಗೆ ರು. 50 ಸಾವಿರ ಪರಿಹಾರ ಕೊಡಬೇಕು. ರಾಜ್ಯ ಸರ್ಕಾರ ಮೈಕೋ ಕಂಪನಿಯನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಕಡಲೆ ಬೀಜ ಬಿತ್ತುವಾಗ ಕ್ವಿಂಟಲ್‌ಗೆ ರು. 6 ಸಾವಿರದಂತೆ ಆರ್‌ಎಸ್‌ಎಸ್‌ಕೆ ಮುಖಾಂತರ ಮಾರಾಟ ಮಾಡಿದ್ದು, ಅದೆ ದರದಲ್ಲಿ ಸರ್ಕಾರ ಕಡಲೆ ಬೀಜ ಖರೀದಿಸಬೇಕು. ಸರ್ಕಾರ ಕ್ವಿಂಟಲ್‌ಗೆ ನಿಗದಿಪಡಿಸಿದ ರು. 3100 ದರ ಹಿಂಪಡೆಯಬೇಕು. ಹಾವೇರಿ ಜಿಲ್ಲಾದ್ಯಂತ ಬೆಳೆದಿರುವ ಕಡಲೆ ಚೀಲವನ್ನು ರಾಶಿಯಿಂದ ಹೊರಗಡೆ ಇಟ್ಟುಕೊಂಡು ರೈತರು ಕೂರುವಂತಾಗಿದೆ. ಆದಷ್ಟು ಬೇಗನೆ ಕಡಲೆ ಬೆಳೆ ಖರೀದಿ ಕೇಂದ್ರವನ್ನು ಸರ್ಕಾರ ಆರಂಭಿಸಬೇಕು. ಶೇಂಗಾ, ಸೂರ್ಯಕಾಂತಿ ಬೆಳೆಯನ್ನು ಬೆಂಬಲ ಬೆಲೆಗೆ ತೆಗೆದುಕೊಂಡಿದ್ದು, ರೈತರ ಬ್ಯಾಂಕ್ ಖಾತೆಗಳಿಗೆ ಒಂದು ವಾರದೊಳಗೆ ಖರೀದಿ ಹಣ ಜಮವಾಗುವಂತೆ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಗದಗ ಜಿಲೆಯ ಹುಲಿಗುಡ್ಡ ಏತ ನೀರಾವರಿ ಯೋಜನೆಯ ಕೆಲಸ ಮಂದಗತಿಯಲ್ಲಿ ನಡೆದಿದ್ದು, ಅದನ್ನು ಬೇಗನೆ ಪೂರ್ಣಗೊಳಿಸಿ ಮೇ ತಿಂಗಳೊಳಗೆ ಜಿಲ್ಲೆಯ ರೈತರಿಗೆ ನೀರು ಬಿಡುವಂತಾಗಬೇಕು. ಅದೆ ರೀತಿ ಕಳಸಾ-ಬಂಡೂರಿ ನಾಲಾ ಜೋಡಣಾ ಯೋಜನೆ ಬೇಗೆ ಪೂರ್ಣಗೊಳಿಸಬೇಕು. ಈ ಯೋಜನೆಯ ಕಾಮಗಾರಿ ಬರಿ ಹಳ್ಳದ ಪ್ರದೇಶದಲ್ಲಿ ಮಂದಗತಿಯಲ್ಲಿ ನಡೆದಿದೆ. ಚಂಡೂರಲ್ಲಿ ಕೂಡಲೇ ಕೆಲಸ ಆರಂಭಗೊಳಿಸಬೇಕು. ಜಲಸಂಪನ್ಮೂಲ ನೀರಾವರಿ ಸಚಿವ ಎಂ.ಬಿ. ಪಾಟೀಲರು ಈಚೆಗೆ ಧಾರವಾಡದಲ್ಲಿ ರೈತರ ಸಭೆಯಲ್ಲಿ ಕಳಸಾದಿಂದ ಬರುವ ನೀರನ್ನು ಜೂನ್ 2014ರೊಳಗಾಗಿ ಬಿಡುಗಡೆ ಮಾಡುತ್ತೇವೆಂದು ಭರವಸೆ ನೀಡಿದ್ದಾರೆ. ಇದಾದರೂ ಬೇಗನೆ ಈಡೇರಬೇಕು ಎಂದು ಆಗ್ರಹಿಸಿದರು. ರೈತರ ಸಂಘದ ಗದಗ ಜಿಲ್ಲಾ ಕಾರ್ಯಾಲಯಕ್ಕೆ ಸರ್ಕಾರ ರೈತ ಭವನದ ಒಂದು ಭಾಗ ನೀಡಬೇಕು. ಜಿಲ್ಲಾಡಳಿತಕ್ಕೆ ಈ ಕುರಿತು ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಎಪಿಎಂಸಿ ಅಧ್ಯಕ್ಷರು ಮಾಜಿ ಶಾಸಕ ಡಿ.ಆರ್. ಪಾಟೀಲ ರೈತ ಸಂಘದ ಕಾರ್ಯಚಟುವಟಿಕೆಗೆ ಅನುಕೂಲ ಕಲ್ಪಿಸಲು ರೈತಭವನದ ಜಾಗೆ ನೀಡಿಕೆ ಕುರಿತು ಸರ್ಕಾರ ಸಕಾರಾತ್ಮಕ ಸ್ಪಂದನೆ ದೊರಕಿಸಿಕೊಡಬೇಕೆಂದು ರೈತ ಸಂಘದ ಪರವಾಗಿ ಒತ್ತಾಯಿಸಲಾಯಿತು.
ಗದಗ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಸಂಕನಗೌಡ್ರ ಹಾಗೂ ಜಿಲ್ಲಾ ಉಪಾಧ್ಯಕ್ಷ ಮಹಾದೇವಗೌಡ ಪಾಟೀಲ ಹಾಗೂ ರೈತ ಸಂಘದ ವಿವಿಧ ಪದಾಧಿಕಾರಿಗಳು, ಸದಸ್ಯರು ಸುದ್ದಿಗೋಷ್ಠಿಯಲ್ಲಿದ್ದರು.