ಸರ್ವರಿಗೂ ಸಮಾನ ನ್ಯಾಯ, ಅವಕಾಶ ಸಿಗಲಿ
ಕನ್ನಡಪ್ರಭ ವಾರ್ತೆ, ಗದಗ, ಫೆ. 20
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನ ಅವಕಾಶ ಹಾಗೂ ಸಾಮಾಜಿಕ ನ್ಯಾಯ ದೊರೆಯಬೇಕು. ಈ ತತ್ವವನ್ನಾಧರಿಸಿ ಆಚರಣೆಯಲ್ಲಿ ಸಂವಿಧಾನದ ಆಶಯಕ್ಕನುಗುಣವಾಗಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಅನುಷ್ಠಾನದಲ್ಲಿದೆ ಎಂದು ಗದಗ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಸ್.ಎಸ್. ಮುರಗೋಡ ಹೇಳಿದರು.
ಅವರು ಗುರುವಾರ ನಗರದ ಎಪಿಎಂಸಿ ಆವರಣದಲ್ಲಿನ ಸ್ವಾಮಿವಿವೇಕಾನಂದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆ, ಜಿಲ್ಲೆಯ ಎಲ್ಲ ದಲಿತಪರ ಸಂಘಟನೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಕುರಿತು ವಿಚಾರ ಕಮ್ಮಟ ಉದ್ಘಾಟಿಸಿ ಮಾತನಾಡಿದರು. ಪರಿಶಿಷ್ಟರಿಗೆ ನ್ಯಾಯ ಹಾಗೂ ಸೂಕ್ತ ಅವಕಾಶ ಒದಗಿಸಲು ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿವೆ. ಅದರ ಸದುಪಯೋಗ ಪಡೆದು ಶೋಷಿತರು ಮುಖ್ಯವಾಹಿನಿಯಲ್ಲಿ ಒಂದಾಗಬೇಕು ಎಂದರು.
ಬೆಳಗಾವಿ ವಿಭಾಗದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧೀಕ್ಷಕ ಅಶೋಕ ಕುರೇರ ಮಾತನಾಡಿ, ಬರೀ ಕಾಯ್ದೆ ಕಾನೂನುಗಳಿಂದ ಮೀಸಲಾತಿ ನೀಡುವುದರಿಂದ ಶೋಷಣೆ ನಿಲ್ಲದು. ಎಲ್ಲ ವರ್ಗದ ಜನರು ಈ ಕುರಿತು ಚಿಂತಿಸಬೇಕು ಹಾಗೂ ಪರಿಶಿಷ್ಟರು ಅವರಿಗಿರುವ ಶಿಕ್ಷಣ, ತರಬೇತಿ, ಉದ್ಯೋಗಾವಕಾಶ ಮುಂತಾದವುಗಳ ಸರಿಯಾದ ಬಳಕೆ ಮಾಡಿಕೊಳ್ಳಬೇಕು ಎಂದರು.
ಎಸ್ಪಿ ಡಾ. ಎಸ್.ಡಿ. ಶರಣಪ್ಪ ಮಾತನಾಡಿ, ದೇಶದ ಅಭಿವೃದ್ಧಿ ಹಾಗೂ ಸಾಮಾಜಿಕ ಶಾಂತಿ ಸುವ್ಯವಸ್ಥೆಗಾಗಿ ಶೋಷಿತರಿಗೆ ನ್ಯಾಯ ಹಾಗೂ ಅವಕಾಶ ದೊರೆಯುವುದು ಅಗತ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಮಾತನಾಡಿ, ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಸಮುದಾಯ ಹಾಗೂ ಸಾರ್ವಜನಿಕರಿಗೆ ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಕುರಿತು ತಿಳಿವಳಿಕೆ ನೀಡುವುದು ವಿಚಾರ ಕಮ್ಮಟದ ಉದ್ದೇಶವಾಗಿದೆ ಎಂದರು. ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಕುರಿತು ಜಿ.ಬಿ. ನೀಲರಡ್ಡಿ, ದೌರ್ಜನ್ಯದಲ್ಲಿ ನೊಂದವರಿಗೆ ಪರಿಹಾರಗಳು ಹಾಗೂ ಕಾಯ್ದೆ ಅನುಷ್ಠಾನ ಕುರಿತು ವೈ.ಬಿ. ತಳವಾರ, ಅಸ್ಪೃಶ್ಯತೆ ಆಚರಣೆಯ ದುಷ್ಪರಿಣಾಮಗಳ ಕುರಿತು ಡಾ. ಅರ್ಜುನ ಗೊಳಸಂಗಿ, ಪರಿಶಿಷ್ಟರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಡಾ. ಬಿ.ಆರ್. ಅಂಬೇಡ್ಕರ್ ನಿಗಮದ ಅಧಿಕಾರಿ ಎಸ್.ಕೆ. ಚವ್ಹಾಣ ಹಾಗೂ ಗದಗ ತಾಲೂಕಿನ ಸಮಾಜ ಕಲ್ಯಾಣ ಅಧಿಕಾರಿ ಎ.ಎಂ. ಹೆಬ್ಬಳ್ಳಿ ಉಪನ್ಯಾಸ ನೀಡಿದರು. ದಲಿತ ಸಂಘಟನೆ ಮುಖಂಡ ಎಸ್.ಎಂ. ಬಳ್ಳಾರಿ, ಯೋಗಣ್ಣವರ ಹಾಗೂ ಮೋ ಹನ ಅಲಮೇಲಕರ ಮಾತನಾಡಿದರು. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಖಾಜಾಹುಸೇನ ಮುಧೋಳ ಸ್ವಾಗತಿಸಿದರು. ಸಮಾಜ ಕಲ್ಯಾಣ ಅಧಿಕಾರಿ ರಾಟಿ ವಂದಿಸಿದರು.