ಇಂದಿನಿಂದ ಲಕ್ಕುಂಡಿ ಉತ್ಸವ
ಕನ್ನಡಪ್ರಭ ವಾರ್ತೆ, ಗದಗ, ಫೆ. 21
ಗದಗ ಜಿಲ್ಲಾ ಆಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಲಕ್ಕುಂಡಿಯಲ್ಲಿ ದಾನ ಚಿಂತಾಮಣಿ ಅತ್ತಿಮಬ್ಬಿ ವೇದಿಕೆಯಲ್ಲಿ ಫೆ. 22ರಿಂದ 24ರ ವರೆಗೆ ಲಕ್ಕುಂಡಿ ಉತ್ಸವ-2014 ಏರ್ಪಡಿಸಲಾಗಿದೆ. ಫೆ. 22ರಂದು ರಾತ್ರಿ 8.15ಕ್ಕೆ ಲಕ್ಕುಂಡಿ ಉತ್ಸವದ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ಸಿಎಂ ಸಿದ್ದರಾಮಯ್ಯ ಉತ್ಸವ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ವಸ್ತು ಪ್ರದರ್ಶನ ಉದ್ಘಾಟಿಸುವರು. ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಶಿಲ್ಪಕಲಾ ಶಿಬಿರ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಚಿತ್ರಕಲಾ ಶಿಬಿರ ಉದ್ಘಾಟಿಸುವರು. ಶಾಸಕ ಬಿ.ಆರ್. ಯಾವಗಲ್ ಅಧ್ಯಕ್ಷತೆ ವಹಿಸುವರು. ಸಂಸದರು, ವಿಧಾನಸಭೆ ಹಾಗೂ ವಿಪ ಸದಸ್ಯರು, ಜಿಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ತಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಲಕ್ಕುಂಡಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಆಗಮಿಸುವರು. ಹಂಪಿ ವಿಶ್ವವಿದ್ಯಾಲಯದ ಉಪಕುಲಪತಿಗಳು, ಪ್ರವಾಸೋದ್ಯಮ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಅರವಿಂದ ಜಾಧವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳು, ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು, ಪ್ರಾದೇಶಿಕ ಆಯುಕ್ತರು, ಉತ್ತರ ವಲಯದ ಆರಕ್ಷಕ ಮಹಾನಿರೀಕ್ಷಕರು ಆಗಮಿಸುವರು. ಉದ್ಘಾಟನೆಯ ನಂತರ ವಾರ್ತಾ ಇಲಾಖೆಯಿಂದ ಸರ್ಕಾರದ ಅಭಿವೃದ್ಧಿ ಯೋಜನೆಗಳ ಕುರಿತು ಲೇಸರ್ ಶೋ ಕಾರ್ಯಮ ಜರುಗಲಿದೆ.
ಇಂದು ವಿವಿಧ ಕಾರ್ಯಕ್ರಮ
ಲಕ್ಕುಂಡಿ ಉತ್ಸವ ಫೆ. 22ರಿಂದ 3 ದಿನಗಳ ಕಾಲ ಲಕ್ಕುಂಡಿಯ ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ಜರುಗಲಿದೆ. ಸಿಎಂ ಸಿದ್ದರಾಮಯ್ಯ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಉತ್ಸವದ 3 ದಿನ ನಡೆಯುವ ಕಾರ್ಯಕ್ರಮಗಳು ಈ ಕೆಳಗಿನಂತಿವೆ. ಫೆ. 22ರ ಉತ್ಸವದ ಮೊದಲ ಬೆಳಗ್ಗೆ 7ಕ್ಕೆ ಶಾಸಕ ಬಿ.ಆರ್. ಯಾವಗಲ್ ಗ್ರಾಮೀಣ ಕ್ರೀಡೆಗಳನ್ನು ಹಾಗೂ ಮಧ್ಯಾಹ್ನ 3.30ಕ್ಕೆ ಗದಗ ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನರ ಜಾನಪದ ಕಲಾ ವಾಹಿನಿ ಮೆರವಣಿಗೆ ಉದ್ಘಾಟಿಸುವರು. ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ಸಂಜೆ 6ರಿಂದ 7.30ರ ವರೆಗೆ ಸುಗಮ ಸಂಗೀತ, ವಚನಗಾಯನ, ಭಕ್ತಿಗೀತೆ ಹಾಗೂ ಕಥಾಕೀರ್ತನ ಕಾರ್ಯಕ್ರಮ ಜರುಗಲಿವೆ. ರಾತ್ರಿ 8ರಿಂದ 9.30ರ ವರೆಗೆ ಗದಗ ಜಿಲ್ಲಾ ಲಕ್ಕುಂಡಿ ಉತ್ಸವದ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ರಾತ್ರಿ 9.30ರಿಂದ 11ರ ವರೆಗೆ ಶಿವಮೊಗ್ಗ ಹಾಗೂ ಬೆಂಗಳೂರಿನ ವಿವಿಧ ಕಲಾ ತಂಡಗಳಿಂದ ಸಂಗೀತ ನೃತ್ಯ ಹಾಗೂ ವಾದ್ಯವೃಂದ ಕಾರ್ಯಕ್ರಮಗಳಿವೆ. ರಾತ್ರಿ 11.30ಕ್ಕೆ ಜಾನಪದ ಜಾತ್ರೆ ಕಾರ್ಯಕ್ರಮದಲ್ಲಿ ಮಹಿಳಾ ಡೊಳ್ಳು, ಕೋಲಾಟ, ಸೋಮನ ಮತ್ತು ಜೋಗತಿ ಕುಣಿತ ಹಾಗೂ ಕಂಸಾಳೆ ಪ್ರದರ್ಶನ, 12.50ರಿಂದ 1.10ರ ವರೆಗೆ ಭಕ್ತಿಗೀತೆ ಮತ್ತು 1.30ಕ್ಕೆ ದೊಡ್ಡಾಟ ಪ್ರದರ್ಶನವಿದೆ.
ಫೆ. 23ರಂದು ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ಬೆಳಗ್ಗೆ 9.30ರಿಂದ 9.50ರ ವರೆಗೆ ಜಾನಪದ, ಭಕ್ತಿ ಮತ್ತು ವಚನ ಗಾಯನ ಅನಂತರ ಜರುಗುವ ವಿಚಾರ ಗೋಷ್ಠಿಯಲ್ಲಿ ಲಕ್ಕುಂಡಿ ಇತಿಹಾಸ ಮತ್ತು ಸಂಸ್ಕೃತಿ, ಗದಗ ಜಿಲ್ಲೆಯ ದೇವಾಲಯಗಳು, ಗ್ರಾಮೀಣ ಅಭಿವೃದ್ಧಿಯ ಮುನ್ನೋಟ ಹಾಗೂ ಕೃಷಿ ಬದುಕಿನ ತಲ್ಲಣಗಳು ಕುರಿತು ಉಪನ್ಯಾಸಗಳು ಜರುಗಲಿವೆ. ಮಧ್ಯಾಹ್ನ 1ರಿಂದ 1.45ರ ವರೆಗೆ ಸಂಗೀತ ಸಂಗಮ ಮತ್ತು ಭಕ್ತಿಗೀತೆ, 2ಕ್ಕೆ ಕವಿಗೋಷ್ಠಿ ನಂತರ ಸಂಜೆ 5ಕ್ಕೆ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿವೆ. ಸಂಜೆ 6ರಿಂದ ಭರತನಾಟ್ಯ, ಸಂಗೀತ ಝೆಂಕಾರ, ನೃತ್ಯ ರೂಪಕ, ಓರಿಸ್ಸಾ ನೃತ್ಯ, ಡೊಳ್ಳಿನ ಹಾಡು, ಪ್ರಭಾತ ಕಲಾವಿದರ ನೃತ್ಯ ನಾಟಕ, ಸಮೂಹ ನೃತ್ಯ, ಜಾನಪದ, ಸಂಗೀತ, ಹಾಸ್ಯ, ಮುಳ್ಳು ಕುಣಿತ, ರಾತ್ರಿ 12.10ಕ್ಕೆ ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನಗೊಳ್ಳಲಿದೆ.
ಫೆ. 24ರಂದು ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ಬೆಳಗ್ಗೆ 9.30ರಿಂದ 9.40ರ ವರೆಗೆ ಸಂಗೀತ ಮತ್ತು ಭಕ್ತಿ ಗಾಯನ ನಂತರ 10ಕ್ಕೆ ಜರುಗುವ ಮಹಿಳಾ ಗೋಷ್ಠಿಯಲ್ಲಿ ಮಹಿಳೆ ಮತ್ತು ಸಾಮಾಜಿಕ ಪ್ರಜ್ಞೆ, ಗ್ರಾಮೀಣ ಪರಿಸರದ ಮಹಿಳೆಯ ಬದುಕು, ಸಮಸ್ಯೆ ಸವಾಲುಗಳು ಹಾಗೂ ಮಹಿಳಾ ಅಭಿವೃದ್ಧಿಯ ನೆಲೆಗಳು ಕುರಿತು ಉಪನ್ಯಾಸಗಳು ಜರುಗಲಿವೆ.
ಮಧ್ಯಾಹ್ನ 1ರಿಂದ 2ರ ವರೆಗೆ ಭಜನೆ, ಗೀಗೀ, ಅಲ್ಲದೇ ಸಿತಾರ ಹಾಗೂ ವಾಯೋಲಿನ್ಗಳ ಜುಗಲಬಂದಿ ನಡೆಯಲಿದೆ. 2ಕ್ಕೆ ಕಾವ್ಯ ಕುಂಚ ಗಾಯನ ನಂತರ ಸಂಜೆ 4ಕ್ಕೆ ಉತ್ಸವದ ಸಮಾರೋಪ ಸಮಾರಂಭ ಜರುಗಲಿದೆ. ನಂತರ ಸಂಜೆ 6ರಿಂದ ಕನ್ನಡದ ಗಜಲ್, ಜಾನಪದ, ಡಾ. ಜಿ.ಎಸ್.ಎಸ್. ಕಾವ್ಯ ನಮನ, ಹಾಸ್ಯ ಸಂಜೆ, ನಾದ ನೃತ್ಯ, ರಘು ದಿಕ್ಷೀತ್ ತಂಡದ ರಸ ಸಂಜೆ, ಗುರ್ಜಿ, ಕಥಕ ನೃತ್ಯ, ಭರತನಾಟ್ಯ, ಸುಗಮ ಸಂಗೀತ ಹಾಗೂ ಎರಡು ನಾಟಕಗಳು ಪ್ರದರ್ಶನಗೊಳ್ಳಲಿವೆ.