ನಾಳೆ ತೊಟ್ಟಿಯಿಂದ ತೊಟ್ಟಿಲಿಗೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಗದಗ, ಫೆ. 21
ಸೇವಾ ಭಾರತಿ ಟ್ರಸ್ಟ್ ಹುಬ್ಬಳ್ಳಿ ಘಟಕದ ಅಡಿ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಗದಗ ವತಿಯಿಂದ ಫೆ. 23ರಂದು ಸಂಜೆ 4.30ಕ್ಕೆ ಬೆಟಗೇರಿಯ ಹೆಲ್ತಕ್ಯಾಂಪ್ನ ಮುಖ್ಯರಸ್ತೆಯಲ್ಲಿ ತೊಟ್ಟಿಯಿಂದ ತೊಟ್ಟಿಲಿಗೆ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಚನ್ನಪ್ಪನವರ ಹೇಳಿದರು.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜದಲ್ಲಿ ಹಲವಾರು ಮಕ್ಕಳು ತಂದೆ-ತಾಯಿಯ ಪ್ರೀತಿ ವಾತ್ಸಲ್ಯದ ಮಡಿಲಿನಿಂದ ವಂಚಿತರಾಗಿದ್ದಾರೆ. ಮನೆ, ಸಂಸ್ಕಾರ, ಶಾಲೆ ಇವುಗಳಿಂದ ಬಹುದೂರ ಉಳಿದಿರುವುದು ಸಾವಿರಾರು. ಇವರ ಬದುಕಿಗೊಂದು ಗುರಿಕೊಟ್ಟು ಒಬ್ಬ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡುವುದರ ಜತೆಗೆ ಗ್ರಾಮೀಣ ಹಾಗೂ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಕ್ಷೇತ್ರದಲ್ಲಿ ಸೇವಾ ಚಟುವಟಿಕೆ ಹೀಗೆ ಹತ್ತು ಹಲವು ಮಹತ್ವದ ಕಾರ್ಯಗಳನ್ನು ಹುಬ್ಬಳ್ಳಿಯ ಸೇವಾಭಾರತಿ ಟ್ರಸ್ಟ್ ತನ್ನ ಹಲವಾರು ಪ್ರಕಲ್ಪಗಳ ಮೂಲಕ ಮಾಡುತ್ತಿದೆ. ಗುಳೇದಗುಡ್ಡದಲ್ಲಿ ಸಂಚಾರಿ ಆಸ್ಪತ್ರೆ ಪ್ರಾರಂಭಿಸಲಾಗಿದ್ದು, ಇಲ್ಲಿನ 21 ಗ್ರಾಮಗಳಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಬೆಳಗಾವಿಯಲ್ಲಿ ಹೊಲಿಗೆ ತರಬೇತಿ ಕೇಂದ್ರ, ಗುಲ್ಬರ್ಗದಲ್ಲಿ ಸಂಸ್ಕಾರ ಕೇಂದ್ರ, ಬಾಗಲಕೋಟೆಯಲ್ಲಿ ಆಶ್ರಮಧಾಮ ಸೇರಿದಂತೆ ಗದಗನಲ್ಲಿ ಅರುಣೋದಯ ವಿಶೇಷ ಅಗತ್ಯತೆಯುಳ್ಳ ಮಕ್ಕಳ ಶಾಲೆ, ಕೇಶವ ರಕ್ತ ಸಹಾಯಕ ಕೇಂದ್ರ ಮತ್ತು ವಿಶೇಷ ದತ್ತು ಸ್ವೀಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂ ದರು. ಅತ್ಯಂತ ಕ್ರೌರ್ಯ ಮನೋಭಾವದ ಸಮಾಜ ನಮ್ಮದಾಗಿದ್ದು, ಹೆತ್ತ ಕುಡಿಯನ್ನೇ ಕೊಲ್ಲುವ ಇಲ್ಲವೇ ಹಣಕ್ಕಾಗಿ ಮಾರಾಟ ಮಾಡುವ, ಆ ಮೂಲಕ ಮಕ್ಕಳನ್ನು ಬೆಳೆಸಿ ಅನೈತಿಕ ಇಲ್ಲವೇ ಕಾನೂನು ಬಾಹಿರ ಕಾರ್ಯಕ್ಕೆ ತೊಡಗಿಸುವ ದೊಡ್ಡ ಜಾಲ ಸಮಾಜದಲ್ಲಿದೆ. ಇಂತಹ ಜಾಲಕ್ಕೆ ಮಕ್ಕಳನ್ನು ಸಿಕ್ಕಿಸದಂತಹ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಈ ಕಾರಣಕ್ಕಾಗಿಯೇ ಗದಗನ ವಿಶೇಷ ದತ್ತು ಸ್ವೀಕಾರ ಸಂಸ್ಥೆಯು ಪ್ರಾರಂಭವಾಗಿದ್ದು, ಇಲ್ಲಿಗೆ ಬರುವ ಮಕ್ಕಳು ಅನಾಥ, ಒಪ್ಪಿಸದ, ಅನಾಥವಾಗಿ ಬಿಟ್ಟುಹೋದ ಮಕ್ಕಳನ್ನು ಇಲ್ಲಿ ರಕ್ಷಿಸಲಾಗುತ್ತಿದೆ. ಈ ಕೇಂದ್ರವು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಹೆತ್ತವರಿಗೆ ಬೇಡವಾದ ಮಕ್ಕಳನ್ನು ಅನಾಥವಾಗಿ ಬಿಟ್ಟುಹೋಗದೆ ನಿಯಮಾನುಸಾರ ದತ್ತು ಸ್ವೀಕಾರ ಕೇಂದ್ರಕ್ಕೆ ಒಪ್ಪಿಸುವಂತೆ ಅರಿವು ಮೂಡಿಸುವುದು. ಮಕ್ಕಳಿಲ್ಲದ ಪಾಲಕರು ತಾವೇ ಯಾರದೋ ಮಗುವನ್ನು ಪಡೆದು ಸಾಕುವುದು ಕಾನೂನು ಬಾಹಿರ, ಕಾರಣ ಕಾನೂನು ಬದ್ಧವಾಗಿ ದತ್ತು ಪಡೆಯುವಂತೆ ಜಾಗೃತಿ ಮೂಡಿಸುವುದು. ಈ ರೀತಿ ದತ್ತು ಕೇಂದ್ರಕ್ಕೆ ಬಂದ ಮಕ್ಕಳನ್ನು ಮಕ್ಕಳಿಲ್ಲದೇ ಕೊರಗುವ ದಂಪತಿಗಳಿಗೆ ಕಾನೂನಿನ ಪ್ರಕಾರ ದತ್ತು ನೀಡಲಾಗುತ್ತದೆ. ಸದ್ಯ ದತ್ತು ಸ್ವೀಕಾರ ಕೇಂದ್ರದಲ್ಲಿ 8 ಮಕ್ಕಳನ್ನು ರಕ್ಷಿಸಲಾಗಿದ್ದು, ಕಾನೂನಿನ ಪ್ರಕಾರ 3 ಮಕ್ಕಳನ್ನು ದತ್ತು ನೀಡುವ ಅಂತಿಮ ಪ್ರಕ್ರಿಯೆ ನಡೆದಿದೆ ಎಂದರು.
ಫೆ. 23ರಂದು ಸಂಜೆ 4.30ಕ್ಕೆ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಹೊಸಳ್ಳಿ ಬೂದೀಶ್ವರ ಸಂಸ್ಥಾನಮಠದ ಬೂದೀಶ್ವರ ಶ್ರೀಗಳು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ವಹಿಸುವರು. ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ಅಧ್ಯಕ್ಷ ಚನ್ನವೀರಪ್ಪ ಚನ್ನಪ್ಪನವರ ಅಧ್ಯಕ್ಷತೆ ವಹಿಸುವರು. ಹುಬ್ಬಳ್ಳಿಯ ಸೇವಾ ಭಾರತಿ ಟ್ರಸ್ಟ್ನ ಅಧ್ಯಕ್ಷ ಡಾ. ರಘು ಅಕಮಂಚಿ ವಕ್ತಾರರಾಗಿ ಪಾಲ್ಗೊಳ್ಳುವರು. ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಡಿಸಿ ಎನ್.ಎಸ್. ಪ್ರಸನ್ನಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಚ್.ಪರಮೇಶ್ವರಪ್ಪ, ಅಂದಪ್ಪ ಪಟ್ಟಣಶೆಟ್ಟಿ, ಮುಕುಂದ ಪೊತ್ನೀಸ್, ದೀಪ್ಚಂದ ಭಾಪಣಾ ಮುಂತಾದವರು ಪಾಲ್ಗೊಳ್ಳುವರು ಎಂದು ತಿಳಿಸಿದರು. ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ಕಾರ್ಯದರ್ಶಿ ಪ್ರಹ್ಲಾದರಾವ್ ಕಾರ್ಕಳ, ಶ್ರೀಧರ ಉಡುಪಿ, ಬಸವರಾಜ ನಾಗಲಾಪುರ, ರಾಜೇಶ ಖಟವಟೆ, ಲಲಿತಾಬಾಯಿ ಮೇರವಾಡೆ, ಪ್ರಾ. ಎಂ.ಸಿ. ಕಟ್ಟಿಮನಿ ಸುದ್ದಿಗೋಷ್ಠಿಯಲ್ಲಿದ್ದರು.