ದುರ್ಗಸಿಂಹನ ಮಹಾಮಂಟಪ ವೈಭವ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಫೆ. 22
ರೋಣ ಪಟ್ಟಣದಲ್ಲಿ 22 ವರ್ಷಗಳ ಬಳಿಕ ಶನಿವಾರ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿದ್ಧಗೊಂಡಿದ್ದ ದುರ್ಗಸಿಂಹನ ಮಹಾಮಂಟಪ ಆವರಣದಲ್ಲಿ ವಿಜ್ಞಾನ, ಧಾರ್ಮಿಕ ಹಾಗೂ ಆಧ್ಯಾತ್ಮಕಕ್ಕೆ ಸಂಬಂಧಿಸಿದ ಪುಸ್ತಕಗಳಿಗೆ ವಿಶೇಷ ಪ್ರಾಧಾನ್ಯತೆ ನೀಡಿದೆ. ಇದರಿಂದ ಸಾಹಿತ್ಯಾಸಕ್ತರು, ಓದುಗರು ತಮ್ಮಿಷ್ಟದ ಪುಸ್ತಕಗಳ ಖರೀದಿಯಲ್ಲಿ ತಲ್ಲೀನರಾದ ದೃಶ್ಯ ಸಾಮಾನ್ಯವಾಗಿತ್ತು.
ಹೌದು, ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸಾಹಿತ್ಯ ಸಮ್ಮೆಳನದ ಅಂಗವಾಗಿ ಮುಖ್ಯ ಮಂಟಪದ ಬಲಭಾಗದಲ್ಲಿ ನಿರ್ಮಿಸಲಾದ ತಾತ್ಕಾಲಿಕ 40 ಮಳಿಗೆಯಲ್ಲಿ 22 ಪುಸ್ತಕ ಮಳಿಗೆ, ಕೃಷಿ, ವಿಜ್ಞಾನ, ಆಧ್ಯಾತ್ಮಿಕ, ಸ್ತ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘದವರಿಂದ ಹಾಕಲಾದ ಗೃಹಪಯೋಗಿ ವಸ್ತುಗಳು, ಜೀವವಿಮೆ ಮತ್ತು ಪ್ರಚಲಿತ ವಿಷಯಗಳಗೆ ಸಂಬಂಧಿಸಿದ ಮಳಿಗೆಗಳಲ್ಲಿ ಜನರ ಖರೀದಿ ಜೋರಾಗಿತ್ತು.
ಪುಸ್ತಕ ಖರೀದಿಗೆ ಮುಗಿಬಿದ್ದ ಜನತೆ: ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನ ತಿಳಿವಳಿಕೆ ಅಗತ್ಯವಿರುವ ಗಣತ, ವಿಜ್ಞಾನ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳಿಗೆ ಹೆಚ್ಚಿನ ಬೇಡಿಕೆ ಸಿಕ್ಕಿದೆ. ಸಾಹಿತ್ಯ ಸಮ್ಮೆಳನಕ್ಕೆ ನಾಡಿನ ವಿವಿಧ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಸಹಸ್ರಾರು ಜನತೆ ತಮ್ಮ ಮಕ್ಕಳ ಓದು ಹಾಗೂ ಓದಿನ ನಂತರದ ದಿನಗಳಲ್ಲಿ ಎದುರಾಗುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಜ್ಜುಗೊಳಿಸಲು ಪೂರಕ ಪುಸ್ತಕ ಖರೀದಿಯಲ್ಲಿ ತೊಡಗಿಕೊಂಡ ದೃಶ್ಯ ಕಂಡುಬಂತು. ಸಾಹಿತ್ಯ ಸಮ್ಮೇಳನ ಸವಿ ಸವಿಯಲು ಮುಂಚೂಣಿಯಲ್ಲಿರುವವರು ಎಂಬ ಖ್ಯಾತಿಗೆ ಒಳಗಾಗಿರುವ ಶಿಕ್ಷಕರು, ಪ್ರಾಧ್ಯಾಪಕರು, ಉಪನ್ಯಾಸಕರು ತಮ್ಮ ಬೋಧನಾ ಕೌಶಲ್ಯ ಸುಧಾರಣೆ ಹೆಚ್ಚಿಸಿಕೊಳ್ಳಲು ಹಾಗೂ ಪರಿಣಾಮಕಾರಿ ಪಾಠ ಬೋಧನೆಗೆ ಅಗತ್ಯವಿರುವ ಪುಸ್ತಕಗಳನ್ನು ಪಡೆದುಕೊಳ್ಳಲು ಎಲ್ಲ ಪುಸ್ತಕ ಮಳಿಗೆಗಳಲ್ಲಿ ತಡಕಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಶಾಂತಿ ಪ್ರಕಾಶನದಿಂದ ಧಾರ್ಮಿಕ ಹಾಗೂ ಆಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳ ಮಾರಾಟ ಭರ್ಜರಿಯಾಗಿತ್ತು. ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ನಾಡಿನ ಅನೇಕ ಹೆಸರಾಂತ ಕವಿಗಳ, ಸಾಹಿತಿಗಳ, ಖ್ಯಾತ ಪತ್ರಕರ್ತರು ಪ್ರಕಟಿಸಿದ ಪುಸ್ತಕಗಳು ಮಳಿಗೆಗಳಲ್ಲಿ ರಾರಾಜಿಸುತ್ತಿದ್ದವು. ಜತೆಗೆ ಜಿಲ್ಲೆಯ ಲೇಖಕರು ರಚಿಸಿದ ಪುಸ್ತಕಗಳಿಗೆ ಬಾರಿ ಬೇಡಿಕೆ ಕಂಡು ಬಂದಿತು.
ಸಮ್ಮೇಳನಾಧ್ಯಕ್ಷರ ಪುಸ್ತಕಗಳಿಗೂ ಹೆಚ್ಚಿದ ಬೇಡಿಕೆ: 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಸೋಮಶೇಖರ ಇಮ್ರಾಪುರ ರಚಿಸಿದ ಕನ್ನಡದ ಸಾವಿರದ ಒಗಟುಗಳು, ಆಯ್ದ ಜನಪದ ಒಗಟುಗಳು, ಚಿಕ್ಕ ಮನೆಗೆ ಚಿನ್ನದ ಬೀಗ, ಜಲತರಂಗ, ಅಕ್ಕಮಹಾದೇವಿ(ಸಣ್ಣಾಟ), ಅಲ್ಲಮಪ್ರಭು (ಸಣ್ಣಾಟ), ಸಾಹಿತ್ಯ ಸಂವೇದನೆ, ಮಧ್ಯ ಯುಗದ ಮಹಿಳಾ ಸಾಹಿತ್ಯ ಮತ್ತು ಸೃಜನಶೀಲತೆ, ಪೂರ್ವಾಪುರ ಇನ್ನಿತರ ಪುಸ್ತಕಗಳಿಗೆ ಶೇ. 50 ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮಾಡಲಾಯಿತು. ಇದರಿಂದ ಮಾರಾಟ ಇನ್ನಷ್ಟು ಜೋರಾಗಿತ್ತು.
ಅತಿ ಕಡಿಮೆ ಮುಖಬೆಲೆ: 22 ಪುಸ್ತಕ ಮಳಿಗೆಯಲ್ಲಿ ಅತಿ ಕಡಿಮೆ ಮುಖಬೆಲೆಯ ಕನ್ನಡ ಕೃತಿಗಳು ಹೆಚ್ಚೆಚ್ಚು ಮರಾಟವಾಗಿದ್ದು ಕಂಡು ಬಂತು. ಚಿಕ್ಕ ಚಿಕ್ಕ ಮಾಹಿತಿ ಪೂರ್ಣ ಕೃತಿಗಳು ಕೇವಲ 5-6 ರುಪಾಯಿಗೆ ಮಾರಾಟ ಆಗುತ್ತಿದ್ದರಿಂದ ಜನರ ಚಿತ್ತ ಅತ್ತ ಹರಿದಿತ್ತು. ಜತೆಗೆ ರಾಧಾಕೃಷ್ಣ ಪ್ರಕಾಶನದವರ ಮಳಿಗೆಯಲ್ಲಿ ಎಲ್ಲ ಪುಸ್ತಕಗಳಿಗೆ ಕೇವಲ ರು. 10 ಮಾರಾಟ ಮಾಡುತ್ತಿದ್ದುದು ಗಮನಾರ್ಹವಾಗಿತ್ತು. ಎಲ್ಲ ಬಗೆಯ ಪುಸ್ತಕಗಳನ್ನು ಹೊಂದಿರುವ ಮಳಿಗೆಯಲ್ಲಿ ಸಾಹಿತ್ಯಾಸಕ್ತರು ನಿರೀಕ್ಷೆ ಮೀರಿ ಭೇಟಿ ನೀಡಿ ಪುಸ್ತಕ ಖರೀದಿಸುತ್ತಿದ್ದು ವಹಿವಾಟು ಜೋರಾಗಿಯೇ ಸಾಗುತ್ತಿದೆ. ಮಳಿಗೆಗೆ ಹೆಚ್ಚಾಗಿ ವಿದ್ಯಾರ್ಥಿಗಳು, ಶಿಕ್ಷಕರು ಬರುತ್ತಿದ್ದು ಆವರಣದಲ್ಲಿ ತೆರೆದ ಗ್ರಂಥಾಲಯದಂತೆ ಗೋಚರಿಸುತ್ತಿದೆ.
ಲಕ್ಷಕ್ಕೂ ಅಧಿಕ ವಹಿವಾಟು: ಸಮ್ಮೇಳನದಲ್ಲಿ ಪುಸ್ತಕ ಮಳಿಗೆಯ ವಹಿವಾಟು ದಿನವೊಂದಕ್ಕೆ ರು. 1 ಲಕ್ಷಕ್ಕೂ ಅಧಿಕ ಆಗುವ ಲಕ್ಷಣಗಳು ಕಂಡು ಬರುತ್ತಿವೆ. ಮಧ್ಯಾಹ್ನದ ವೇಳೆಗೆ ಪ್ರತಿ ಮಳಿಗೆಯಲ್ಲಿ ರು. 2ರಿಂದ ರು. 3 ಸಾವಿರ ವ್ಯಾಪಾರವಾಗಿದ್ದು, ಮೊದಲ ದಿನವಾದ ಶನಿವಾರ ಮಳಿಗೆಯೊಂದರ ವಹಿವಾಟು ರು. 4ರಿಂದ ರು. 6 ಸಾವಿರ ದಾಟುತ್ತದೆ ಎಂದು ಮಂಗಳೂರು ಶಾಂತಿ ಪ್ರಕಾಶನದ ಮಹೇಶ ಹೇಳಿದರು.