ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಭುವನೇಶ್ವರಿ ಭಾವಚಿತ್ರ ಮೆರವಣಿಗೆ

Vishwanath S
Updated On : 23 Feb 2014, 12:27 pm

ರೋಣ: 6ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಸೋಮಶೇಖರ ಇಮ್ರಾಪುರ ಹಾಗೂ ತಾಯಿ ಭುನೇಶ್ವರಿ ಭಾವಚಿತ್ರದ ಮೆರವಣಿಗೆ ಶನಿವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಪಟ್ಟಣದ ಎಸ್.ಆರ್. ಪಾಟೀಲ ಪ್ರಾಥಮಿಕ ಶಾಲೆಯಿಂದ ಪ್ರಾರಂಭವಾದ ಮೆರವಣಿಗೆ, ಸೂಡಿ ಕ್ರಾಸ್, ಹಳೆ ಸಂತೆ ಬಜಾರ್, ಮುಲ್ಲಾನಭಾವಿ ಕ್ರಾಸ್, ಬಸ್ ನಿಲ್ದಾಣ ಮುಂದೆ ಹಾಯ್ದು ಸಮ್ಮೇಳನ ನಡೆವ, ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಆವರಣ ತಲುಪಿತು.
ಮೆರವಣಿಗೆಯಲ್ಲಿ ಶಿರಹಟ್ಟಿ ಮಠದ ಆನೆ, ನಂದಿಕೋಲು ಕುಣಿತದ ತಂಡ, ಹೆಜ್ಜೆ ಮಜಲು ತಂಡ, ಪೂಜಾ ಕುಣಿತ, ಮಹಿಳಾ ಹಾಗೂ ಪುರುಷ ಡೊಳ್ಳಿನ ಮೇಳಗಳು, ಶಾಲಾ ಮಕ್ಕಳಿಂದ ಲೇಜಿಮ್, ನೂರಾರು ಸಂಖ್ಯೆಯಲ್ಲಿದ್ದ ಕುಂಭಹೊತ್ತ ಮಹಿಳೆಯರು, ಹುಲಿವೇಷ, ಕಂಸಾಳೆ ನೃತ್ಯ ಹಾಗೂ ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಾಲಾ ಮಕ್ಕಳು, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದವು.
ಅದರಲ್ಲಿಯೂ ಮಹಿಳಾ ಡೊಳ್ಳು ಕುಣಿತ ಹಾಗೂ ರಿವಾಯತ್ ಪದದ ತಂಡವು ಮೆರವಣಿಗೆಯಲ್ಲಿ ಹೆಚ್ಚು ಆಕರ್ಷಣೆಗೆ ಕಾರಣವಾದವು, ಇನ್ನು ಅಸೂಟಿ ಶಾಲೆಯ ವಿದ್ಯಾರ್ಥಿಗಳ ಲೇಜಿಮ್ ಎಲ್ಲರ ಗಮನ ಸೆಳೆಯಿತು. ಮೆರವಣಿಗೆಯುದ್ದಕ್ಕೂ ಸಾಹಿತ್ಯಾಸಕ್ತರು, ಪದಾಧಿಕಾರಿಗಳು ಹಾಗೂ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಿರುವ ಕಾರ್ಯಕರ್ತರು ಮೆರವಣಿಗೆ ವ್ಯವಸ್ಥಿತವಾಗಿ ಸಾಗಲು ಬಿಸಿಲನ್ನು ಲೆಕ್ಕಿಸದೆ ಶ್ರಮಿಸಿದರು. ಸಂಘಟಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ತಂಡದ ಸದಸ್ಯರಿಗೆ ನೀರು ಹಾಗೂ ತಂಪು ಪಾನೀಯದ ವ್ಯವಸ್ಥೆ ಕಲ್ಪಿಸಿದ್ದರು. ಮೆರವಣಿಗೆ 11 ರಿಂದ 2ರ ವರೆಗೆ ನಡೆದಿದ್ದು, ಸುಡು ಬಿಸಿಲು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರನ್ನು ಹೆಚ್ಚು ಕಾಡಿದ್ದರಿಂದ ಅಲ್ಲಿ ನೆರಳು ಕಾಣುತ್ತಿದ್ದಂತೆ ಮೆರವಣಿಗೆಯಿಂದ ಆಚೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜಿಲ್ಲೆಯ ನೂರಾರು ಸಾಹಿತ್ಯಾಸಕ್ತರು ವಾಹನಗಳ ಮೂಲಕ ಆಗಮಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆ ಪ್ರಾರಂಭವಾಗುವ ಪೂರ್ವದಲ್ಲಿಯೇ ರೋಣ ಪಟ್ಟಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದ ಪಟ್ಟಣದ ಎಲ್ಲ ರಸ್ತೆಗಳ ಎರಡೂ ಬದಿಯಲ್ಲಿ ಕನ್ನಡಾಂಬೆಯ ಧ್ವಜ ರಾರಾಜಿಸುತ್ತಿದ್ದವು. ಇದರೊಟ್ಟಿಗೆ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಲು ಹಾಕಿರುವ ಬ್ಯಾನರ್ಗಳು ಬಂಟಿಗ್ಸ್ ಕೆಲವೆಡೆ ಸಾರ್ವಜನಿಕರಿಗೆ ನೆರಳಾಗಿ ಪರಿಣಮಿಸಿದ್ದವು. ಮಹಿಳೆಯರು ಮಕ್ಕಳು ಎನ್ನದೇ ಎಲ್ಲ ವಯೋವಾನದವರು ಮೆರವಣಿಗೆಯಲ್ಲಿ ಇದ್ದರು.
ಪಟ್ಟಣಕ್ಕೆ ಬರುವ ಹಾಗೂ ಇಲ್ಲಿಂದ ಹೋಗುವ ಪ್ರತಿಯೊಂದು ವಾಹನಕ್ಕೆ (ಸರ್ಕಾರಿ ವಾಹನ ಸೇರಿ) ಕನ್ನಡಾಂಬೆಯ ಧ್ವಜವನ್ನು ಕಟ್ಟಿದ್ದರಿಂದ ಪಟ್ಟಣದ ತುಂಬೆಲ್ಲ ಕನ್ನಡದ ಕಲರವ ಜೋರಾಗಿಯೇ ಬೀಸಿತ್ತು. ಮೆರವಣಿಗೆಗೆ ಸ್ವಾಗತ ಸಮಿತಿ ಸದಸ್ಯರು ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಗಣ್ಯರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement