ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಾತೃಭಾಷೆ ಅಭಿವೃದ್ಧಿಗೆ ಸರ್ಕಾರ ಸಿದ್ಧ

Vishwanath S
Updated On : 23 Feb 2014, 12:26 pm

ದುರ್ಗಸಿಂಹ ಮಹಾ ಮಂಟಪ (ರೋಣ): ಶಾಸ್ತ್ರೀಯ ಸ್ಥಾನಮಾನ ಹೊಂದಿದ ಕನ್ನಡ 2 ಸಾವಿರ ವರ್ಷಗಳ ಇತಿಹಾಸವುಳ್ಳ ಸಂಪದ್ಭರಿತ ಭಾಷೆಯಾಗಿದ್ದು, ಅದರ ಬೆಳವಣಿಗೆಗೆ ಸರ್ಕಾರ ಸದಾ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  
ಶನಿವಾರ ಸಂಜೆ ಪಟ್ಟಣದ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಆವರಣದ ದುರ್ಗಸಿಂಹ ಮಹಾಮಂಟಪದಲ್ಲಿ ಏರ್ಪಡಿಸಿದ್ದ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಮಾತೃ ಭಾಷೆ ನಿರ್ಲಕ್ಷಿಸದೇ ಅಗ್ರಸ್ಥಾನ ಸಿಗುವಲ್ಲಿ ಭಾಷೆಯನ್ನು ಪ್ರೀತಿಸಬೇಕು. ಕನ್ನಡ ಭಾಷೆಯ ಸಾಹಿತಿಗಳಿಗೆ ಸಿಕ್ಕಷ್ಟು ಜ್ಞಾನಪೀಠ ಪ್ರಶಸ್ತಿಗಳು ಮತ್ತಾವುದೇ ಭಾಷೆಗೆ ಸಿಕಿಲ್ಲ. ಇದು ಕನ್ನಡಿಗರ ಹೆಮ್ಮೆಯ ಸಂಗತಿಯಾಗಿದೆ. ಭಾಷೆಯನ್ನು ಪ್ರೀತಿಸುವ, ಬೆಳೆಸುವ ಕಾರ್ಯವಾಗಬೇಕು. ಇತರೆ ಭಾಷೆಗಳ ದುರಭಿಮಾನಿಯಾಗದೆ ಸ್ವ-ಭಾಷಾಭಿಮಾನ ಬೆಳಸಿಕೊಳ್ಳಬೇಕು. ಆಡಳಿತ ಭಾಷೆ, ವ್ಯವಹಾರಿಕ ಭಾಷೆ ಕನ್ನಡವಾಗಬೇಕು. ಮಾತೃ ನುಡಿ ಕನ್ನಡದಲ್ಲಿರಬೇಕು. ನಾನು ಮುಖ್ಯಮಂತ್ರಿಯಾದಾಗಿನಿಂದ ಈವರೆಗೂ ನನ್ನ ಕಚೇರಿಗೆ ಬರುವ ಕಡತಗಳನ್ನು ಕನ್ನಡದಲ್ಲಿ ಬರೆಸುತ್ತಿದ್ದೇನೆ. ಎಲ್ಲರೂ ಕನ್ನಡದಲ್ಲಿ ಮಾತನಾಡುವುದು, ವ್ಯವಹರಿಸುವುದು, ಸಹಿ ಮಾಡುವುದನ್ನು ಕಲಿಯಬೇಕು ಎಂದರು.
ರೋಣ ತಾಲೂಕು ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಸಂಗಮವಾಗಿದೆ. ಸಂಗೀತ ದಿಗ್ಗಜ ಡಾ. ಭೀಮಸೇನ ಜೋಶಿ ಜನಸಿದ ನಾಡು, ಕನ್ನಡ ಏಕೀಕರಣಕ್ಕೆ ಹೋರಾಡಿದ ಆಲೂರು ವೆಂಕಟರಾಯ, ಅಂದಾನಪ್ಪ ದೊಡ್ಡಮೇಟಿ, ಡಾ. ಸೋಮಶೇಖರ ಇಮ್ರಾಪುರ ಮುಂತಾದ ಮಹನೀಯರನ್ನು ಕೊಡುಗೆ ನೀಡಿದ ತಾಲೂಕು, ಸಾಹಿತ್ಯ ಹಿನ್ನೆಲೆ ಹೊಂದಿದೆ. ತಾಲೂಕಿನ ಇಟಗಿ ಭೀಮಾಂಭಿಕಾ ದೇವಸ್ಥಾನದ ಅನ್ನದಾಸೋಹ ಭವನಕ್ಕೆ ರು. 1 ಕೋಟಿ ಬಿಡುಗಡೆ ಮಾಡಲಾಗುವುದು. ಗದಗ ಕಸಾಪ 2014ಕ್ಕೆ ನೂರು ವಸಂತ ಪೂರೈಸಿದ್ದು, ಇದರ ಶತಮಾನೋತ್ಸವ ಆಚರಣೆಗೆ ರು. 5 ಕೋಟಿ ಬಿಡುಗಡೆ ಮಾಡಲಾಗುವುದು ಎಂದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ರೋಣ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಲ್ಲಿ ಸಿಎಂ ಸಿದ್ದರಾಮಯ್ಯ ಗಮನ ಹರಿಸಬೇಕು. ರೋಣ ಪಟ್ಟಣದಲ್ಲಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಗಜೇಂದ್ರಗಡ ತಾಲೂಕನ್ನಾಗಿ ಘೋಷಿಸಿ ಅಭಿವೃದ್ಧಿಗೆ ರು. 10 ಕೋಟಿ ಬಿಡುಗಡೆ ಮಾಡಬೇಕು ಎಂದು ಸಿಎಂಗೆ ಆಗ್ರಹಿಸಿದರು.
ಸಾನ್ನಿಧ್ಯ ವಹಿಸಿದ್ದ ಹಾಲಕೇರಿ ಅಭಿನವ ಅನ್ನದಾನ ಸ್ವಾಮೀಜಿ ಮಾತನಾಡಿ, ಮಾತೃ ಭಾಷೆಯಲ್ಲಿ ಲೆಕ್ಕ ಪತ್ರಗಳ ಬೆರೆಯುವ, ಸಹಿ ಮಾಡುವ, ಲಗ್ನ ಪತ್ರಿಕೆ ಮುದ್ರಿಸುವ ಕಾರ್ಯವಾಗಬೇಕು. ಅಂತರ್ಜಲ ಹೆಚ್ಚಿಸುವಲ್ಲಿ ನದಿಗಳ ಮೂಲಕ ಕೆರೆಗಳನ್ನು ತುಂಬಿಸಬೇಕು ಎಂದರು.
ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಡಾ. ಸೋಮಶೇಖರ ಇಮ್ರಾಪುರ ವಹಿಸಿದ್ದರು. ಈ ಸಂದರ್ಭದಲ್ಲಿ ಮಲಪ್ರಭೆ ಎಂಬ ಸ್ಮರಣ ಸಂಚಿಕೆಯನ್ನು ಸಚಿವ ಎಚ್.ಕೆ. ಪಾಟೀಲ ಬಿಡುಗಡೆ ಮಾಡಿದರು. ಸಿಎಂ ಸಿದ್ದರಾಮಯ್ಯನವರಿಗೆ ಪುರಸಭೆ ಹಾಗೂ ಕಸಾಪ ವತಿಯಂದ ಸನ್ಮಾನಿಸಲಾಯಿತು. ಪ್ರಾಸ್ತಾವಿಕವಾಗಿ ಕಸಾಪ ಜಿಲ್ಲಾಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಸಹಕಾರಿ ಸಚಿವ ಎಚ್.ಎಸ್. ಮಹಾದೇವ ಪ್ರಸಾದ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ, ವೀರಣ್ಣ ಮತ್ತಿಕಟ್ಟಿ, ಮಾಜಿ ಸಂಸದ ಎಸ್.ಆರ್.ಪಾಟೀಲ, ಐ.ಎಸ್. ಪಾಟೀಲ, ಶಾಸಕ ರಾಮಕೃಷ್ಣ ದೊಡ್ಡಮನಿ, ಮಿಥುನ ಪಾಟೀಲ, ತಾಪಂ ಅಧ್ಯಕ್ಷೆ ತಿಪ್ಪವ್ವ ದೊಡ್ಡಮನಿ, ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಎಸ್ಪಿ ಎಸ್.ಡಿ. ಶರಣಪ್ಪ, ಅಮರೇಗೌಡ ಭೈಯಾಪುರ, ವಿ.ಬಿ. ಸೋಮನಕಟ್ಟಮಠ, ರಮಾಕಾಂತ ಕಮತಗಿ, ಸಿ.ಕೆ. ಕೇಸರಿ ಮುಂತಾದವರು ಉಪಸ್ಥಿತರಿದ್ದರು.
ಶರಣು ಗೋಗೇರಿ ನಿರೂಪಿಸಿದರು. ಕಸಾಪ ತಾಲೂಕಾಧ್ಯಕ್ಷ ಶಿವರಾಜ ಗುರಿಕಾರ ವಂದಿಸಿದರು.
ರೋಣ ತಾಲೂಕು ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಸಂಗಮವಾಗಿದೆ. ಸಂಗೀತ ದಿಗ್ಗಜ ಡಾ. ಭೀಮಸೇನ ಜೋಶಿ ಜನಸಿದ ನಾಡು, ಕನ್ನಡ ಏಕೀಕರಣಕ್ಕೆ ಹೋರಾಡಿದ ಆಲೂರು ವೆಂಕಟರಾಯ, ಅಂದಾನಪ್ಪ ದೊಡ್ಡಮೇಟಿ, ಡಾ. ಸೋಮಶೇಖರ ಇಮ್ರಾಪುರ ಮುಂತಾದ ಮಹನೀಯರನ್ನು ಕೊಡುಗೆ ನೀಡಿದ ತಾಲೂಕು, ಸಾಹಿತ್ಯ ಹಿನ್ನೆಲೆ ಹೊಂದಿದೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement