ರಾಜ್ಯದ ಉತ್ಸವಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ
ಕನ್ನಡಪ್ರಭ ವಾರ್ತೆ, ಗದಗ, ಫೆ. 22
ರಾಜ್ಯದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ವಿವಿಧ ಉತ್ಸವಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸರ್ಕಾರ ನಾಡಿನ ಜನತೆಯಲ್ಲಿ ಸಾಂಸ್ಕೃತಿಕ ಪ್ರಜ್ಞೆ ಬೆಳೆಸಲು ಶ್ರಮಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ 3 ದಿನದ 'ಲಕ್ಕುಂಡಿ ಉತ್ಸವ 2014'ಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಹಿತ್ಯ ಕಲೆ, ಶಿಲ್ಪ ಕಲೆ ನಾಡಿನ ಸಂಸ್ಕೃತಿಯನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಸರ್ಕಾರ ನಿರ್ವಹಿಸುತ್ತಿದೆ. ಉತ್ಸವಗಳ ಆಚರಣೆಯಿಂದ ಕಲಾವಿದರಿಗೆ ಉತ್ತೇಜನ ನೀಡಲು ಸಹಕಾರಿಯಾಗಲಿದೆ. ಹಂಪಿ ಉತ್ಸವದಷ್ಟೇ ಲಕ್ಕುಂಡಿ ಉತ್ಸವಕ್ಕೂ ಪ್ರಾಧಾನ್ಯತೆ ಇದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಉತ್ಸವಗಳನ್ನು ತಪ್ಪದೇ ಜರುಗಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ, ಲಕ್ಕುಂಡಿ ಶಿಲ್ಪ ಕಲೆಯ ಮೂಲಕ ಜಿಲ್ಲೆಯ ಶ್ರೀಮಂತ ಚಾರಿತ್ಯಕ್ಕೆ ಗರಿ ಮೂಡಿಸಿದೆ. ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಶಿಲ್ಪ ಮತ್ತು ವಾಸ್ತುಶಿಲ್ಪಕಲೆ ಜನರೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದೆ. ಉತ್ಸವಗಳು ನಾಡಿನ ಸಾಂಸ್ಕೃತಿಕ ಸಮಸ್ಯೆಗಳ ಪರಿಹಾರ ಒದಗಿಸಲು ವೇದಿಕೆಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ, ಡಾ. ಎಚ್.ಸಿ. ಮಹದೇವಪ್ಪ, ಶರಣಪ್ರಕಾಶ ಪಾಟೀಲ, ಸಲೀಂ ಅಹ್ಮದ, ಐ.ಜಿ. ಸನದಿ, ವಾಸಣ್ಣ ಕುರುಡಗಿ, ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನ, ರಾಮಕೃಷ್ಣ ದೊಡ್ಡಮನಿ ಮುಂತಾದವರು ಹಾಜರಿದ್ದರು.
ಎಪಿಎಂಸಿ ಉಪಾಧ್ಯಕ್ಷ ಸಿದ್ದು ಪಾಟೀಲ ವಂದಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಾಹಿತ್ಯ ಕಲೆ, ಶಿಲ್ಪ ಕಲೆ ನಾಡಿನ ಸಂಸ್ಕೃತಿಯನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಸರ್ಕಾರ ನಿರ್ವಹಿಸುತ್ತಿದೆ. ಉತ್ಸವಗಳ ಆಚರಣೆಯಿಂದ ಕಲಾವಿದರಿಗೆ ಉತ್ತೇಜನ ನೀಡಲು ಸಹಕಾರಿಯಾಗಲಿದೆ. ಹಂಪಿ ಉತ್ಸವದಷ್ಟೇ ಲಕ್ಕುಂಡಿ ಉತ್ಸವಕ್ಕೂ ಪ್ರಾಧಾನ್ಯತೆ ಇದೆ.
- ಸಿದ್ದರಾಮಯ್ಯ,
ಮುಖ್ಯಮಂತ್ರಿ