ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಲಕ್ಕುಂಡಿ ಉತ್ಸವ: ಗ್ರಾಮೀಣ ಕ್ರೀಡೆಗಳ ಉದ್ಘಾಟನೆ

Vishwanath S
Updated On : 23 Feb 2014, 12:26 pm

ಗದಗ: ಜಿಲ್ಲಾ ಲಕ್ಕುಂಡಿ ಉತ್ಸವದ ಅಂಗವಾಗಿ ಶನಿವಾರ ಏರ್ಪಡಿಸಿರುವ ಗ್ರಾಮೀಣ ಕ್ರೀಡಾ ಸ್ಪರ್ಧೆಯನ್ನು ಶಾಸಕ ಬಿ.ಆರ್. ಯಾವಗಲ್ ಲಕ್ಕುಂಡಿ ಕಾಶಿ ನನ್ನೇಶ್ವರ ದೇವಸ್ಥಾನದಿಂದ ಕದಾಂಪುರ ವರೆಗೆ ಹಾಗೂ ಮರಳಿ ಬರುವ ಕ್ರಾಸ್ ಕಂಟ್ರಿ ಓಟದ ಸ್ಪರ್ಧೆಗೆ ಚಾಲನೆ ನೀಡಿದರು.
ವಿಜೇತರು: ಪುರುಷರ ವಿಭಾಗದ 10 ಕಿ.ಮೀ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಕನಕಪ್ಪ ಗದಗ ಪ್ರಥಮ, ವೀರೇಶ ರೋಣದ ದ್ವಿತೀಯ, ಮಂಜುನಾಥ ತೃತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದ 8 ಕಿಮೀ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಶಾಹಿದಾ ಬಳಿಗಾರ ಪ್ರಥಮ, ಪ್ರೇಮಾ ಹುಚ್ಚಣ್ಣವರ ದ್ವಿತೀಯ, ಐಶ್ವರ್ಯ ಕರಿಗಾರ ತೃತೀಯ ಹಾಗೂ ಮೈತ್ರಾ ಹೊಳಲದ ಚತುರ್ಥ ಬಹುಮಾನ ಪಡೆದರು. ನಿರ್ಣಾಯಕರಾಗಿ ಶರಣಪ್ಪ ಬೇಲೇರಿ, ಡಾ. ಅಂದಾನಯ್ಯ ಹಿರೇಮಠ, ಮೃತ್ಯುಂಜಯ ಕುಲಕರ್ಣಿ, ಅನಂತ ದೇಸಾಯಿ ಕಾರ್ಯನಿರ್ವಹಿಸಿದರು. ಹನುಮಪ್ಪ ಇಂಗಳಳ್ಳಿ, ತಾಪಂ ಸದಸ್ಯ ಮಹೇಶ ಮುಸುಕಿನಬಾವಿ, ಗ್ರಾಪಂ ಅಧ್ಯಕ್ಷೆ ಶಾಂತವ್ವ ನಂದಪ್ಪನವರ, ತಾಪಂ ಮಾಜಿ ಅಧ್ಯಕ್ಷ ಮಲ್ಲಪ್ಪ ಉಮಚಗಿ, ತಾಪಂ ಕಾರ್ಯನಿರ್ವಹಣಾಧಿಕಾರಿ ರೇವಣ್ಣವರ, ಯುವಜನ ಸೇವಾ ಮತ್ತು ಕ್ರೀಡಾ ಅಧಿಕಾರಿ ಶಂಕರ, ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಲಕ್ಷ್ಮೇಶ್ವರ: ರು. 38 ಲಕ್ಷ ಉಳಿತಾಯ ಬಜೆಟ್
ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯ 2014-15ನೇ ಸಾಲಿನ ಮುಂಗಡ ಪತ್ರವನ್ನು ಶನಿವಾರ ನಡೆದ ವಿಶೇಷ ಸಭೆಯಲ್ಲಿ ಮಂಡಿಸಲಾಯಿತು. ಸುಮಾರು ರು. 38.87 ಲಕ್ಷ ಉಳಿತಾಯದ ಮುಂಗಡ ಪತ್ರಕ್ಕೆ ಸರ್ವ ಸದಸ್ಯರು ಬೆಂಬಲ ನೀಡುವ ಮೂಲಕ ಅನುಮೋದನೆ ನೀಡಿದರು. ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ ಮಾತನಾಡಿ, ಪಟ್ಟಣಕ್ಕೆ ಬರುವ ಅನುದಾನವನ್ನು ಸದ್ಭಳಕೆ ಮಾಡಿಕೊಂಡು ಪಟ್ಟಣದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಾಗಿದೆ. ಉತ್ತಮ ಕಾಮಗಾರಿ ಮಾಡುವ ಮೂಲಕ ಸ್ವಚ್ಛ ಮತ್ತು ಸುಂದರವಾದ ಪಟ್ಟಣವನ್ನಾಗಿ ಮಾಡೋಣ ಎಂದರು. ಬಜಟ್ ಚರ್ಚೆಯ ನಂತರ ಮುಂದುವರಿದ ಸಭೆಯಲ್ಲಿ ಸದಸ್ಯ ಮಹೇಶ ಹೊಗೆಸೊಪ್ಪಿನ ಮಾತನಾಡಿ, ಮುಂಬರುವ ಬೇಸಿಗೆ ಕಾಲದಲ್ಲಿ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆಗಳಿಗೆ ಅಧಿಕಾರಿಗಳು ಮುಂಜಾಗ್ರತೆ ತೆಗೆದುಕೊಳ್ಳವಲ್ಲಿ ಎಲ್ಲ ಸದಸ್ಯರು ನಿಮ್ಮ ಬೆಂಬಲಕ್ಕೆ ಇರುತ್ತಾರೆ. ಅದಕ್ಕಾಗಿ ಅಧಿಕಾರಿಗಳು ಈ ಕುರಿತು ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದರು. ಉಪಾಧ್ಯಕ್ಷ ಎಂ.ಆರ್. ಪಾಟೀಲ ಮಾತನಾಡಿ, ಪಟ್ಟಣದಲ್ಲಿ ಈ ಹಿಂದೆ ನಡೆದ ಹಲವಾರು ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ಅವುಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಅಂತಹ ಕಾಮಗಾರಿ ಮಾಡುತ್ತಿರುವ ಗುತ್ತಿಗೆರೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು. ದಾದಾಪೀರ ಮುಚ್ಚಾಲೆ, ಜಯಕ್ಕ ಕಳ್ಳಿ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.
ಇಂದು ಪೊಲಿಯೋ
ನರಗುಂದ: ಪಟ್ಟಣದ ಸೋಮಾಪುರದ ಬಸವೇಶ್ವರ ದೇವಸ್ಥಾನದಲ್ಲಿ ಫೆ. 23ರ ಬೆಳಗ್ಗೆ 8ಕ್ಕೆ 2ನೇ ಹಂತದ ಪಲ್ಸ್ ಪೊಲಿಯೋ ಕಾರ್ಯಕ್ರಮ ಜರುಗಲಿದೆ. ಶಾಸಕ ಬಿ.ಆರ್. ಯಾವಗಲ್, ವೆಂಕರಡ್ಡಿ ದೇವರಡ್ಡಿಯವರ, ಚಂಬಣ್ಣ ವಾಳದ, ಗುರುದೇವಿ ಶಾನವಾಡಮಠ, ಡಾ. ಎಸ್.ಜಿ. ವಸ್ತ್ರದ, ರೇಣುಕಾ ಕೋರನ್ನವರ, ಆರ್.ವಿ. ಕುಪಸ್ತ, ಎಸ್.ಎಂ. ಮಂಗಳಿ, ಎಂ.ಆರ್. ಕುಲಕರ್ಣಿ, ಜಿ.ಜಿ. ಕೊಣ್ಣೂರ, ವಿ.ಕೆ. ತಳವಾರ ಮುಂತಾದವರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement