ಆರೋಪ ಸತ್ಯಕ್ಕೆ ದೂರ: ಚಂಬವ್ವ ಪಾಟೀಲ
ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಜಿಪಂ ಅನುದಾನದಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಅಕ್ರಮ ಹಾಗೂ ಗ್ರಾಮಗಳಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಇರುವ ಬಗ್ಗೆ ಲಕ್ಕುಂಡಿ ಜಿಪಂ ಸದಸ್ಯರ ವಿರುದ್ಧ ಲಕ್ಕುಂಡಿ ಅಭಿವೃದ್ಧಿ ರಕ್ಷಣಾ ಸಮಿತಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಜಿಪಂ ಸದಸ್ಯೆ ಚಂಬವ್ವ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಪಂ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಂಪೂರ್ಣ ತನಿಖೆ ನಡೆಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಸೂಚಿಸಿದ್ದೇನೆ. ಗ್ರಾಮದಲ್ಲಿ ಅಕ್ರಮ ಕಾಮಗಾರಿ ನಡೆದಿವೆ ಎಂದು ಕೆಲ ಸಂಘಟನೆಗಳು ಆರೋಪ ಮಾಡಿದಾಗ ಸ್ವತಃ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಅಧಿಕಾರಿಗಳು ಸ್ಥಳ ತನಿಖೆ ಮಾಡಿದ್ದು, ಸಂಘಟನೆಯ ಪದಾಧಿಕಾರಿಗಳು ಕಾಮಗಾರಿಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದು, ಈ ಕುರಿತು ಲಿಖಿತ ರೂಪದಲ್ಲಿ ನೀಡಿದ್ದಾರೆ.
ಅಲ್ಲದೇ, ಕೆಲ ದಿನಗಳಿಂದ ಅನಾರೋಗ್ಯ ಕಾರಣವಾಗಿ ಕೆಲ ಸರ್ಕಾರಿ ಹಾಗೂ ಸಾರ್ವಜನಿಕರ ಸಭೆ, ಸಮಾರಂಭಗಳಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಈ ವಿಷಯ ಗೊತ್ತಿದ್ದರೂ ಸಂಘಟನೆಯೂ ತಮ್ಮ ವಿರುದ್ಧ ಆರೋಪ ಮಾಡುತ್ತಿರುವ ಕ್ರಮ ಸರಿಯಲ್ಲ. 2014ರ ಲಕ್ಕುಂಡಿ ಉತ್ಸವಕ್ಕೆ ನಡೆದ ಪೂರ್ವಭಾವಿ ಸಭೆ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಸಭೆಗೆ ಇದುವರೆಗೂ ಅಧಿಕಾರಿಗಳು ತಮ್ಮನ್ನು ಆಹ್ವಾನಿಸಿಲ್ಲ ಹಾಗೂ ಮಾಹಿತಿ ನೀಡಿಲ್ಲ. ಹೀಗಾಗಿ, ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಸಭೆಗೆ ಆಹ್ವಾನಿಸದ ಕುರಿತಂತೆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಉತ್ಸವದ ಅಂಗವಾಗಿ ಕೇವಲ ಕಾಟಾಚಾರಕ್ಕೆ ಕಾಮಗಾರಿ ಮಾಡದಂತೆ ಅಧಿಕಾರಿಗಳಿಗೆ ಆದೇಶ ಮಾಡಲಾಗಿದೆ. ಉತ್ಸವದ ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಿ ಅಲ್ಲಿ ಕಾರ್ಯನಿರತ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಛಾಯಚಿತ್ರದೊಂದಿಗೆ ಪತ್ರಿಕೆ ಪ್ರಕಟಣೆ ಕೊಡುವುದರಿಂದ ಉತ್ಸವದ ಕಾಮಗಾರಿಯಲ್ಲಿ ಪಾಲ್ಗೊಂಡಂತೆ ನಮಗೆ ಅನಿಸುವುದಿಲ್ಲ. ಅದರ ಬದಲಾಗಿ ಪ್ರಾಮಾಣಿಕ ಹಾಗೂ ಬದ್ಧತೆಯಿಂದ ಲಕ್ಕುಂಡಿ ಉತ್ಸವ ಆಚರಿಸಲು ಪ್ರಾಮಾಣಿಕ ಪ್ರಯತ್ನ ತಾವು ಮಾಡುತ್ತಿರುವದಾಗಿ ತಿಳಿಸಿದ್ದಾರೆ.
ಗ್ರಾಮದ ಬೆರಳೆಣಿಕೆಯ ಹಾಗೂ ರಾಜಕೀಯ ಮಾಡುವ ಮನಸ್ಸುಳ್ಳ ಸಂಘಟಕರು ತಮ್ಮ ಹೆಸರನ್ನು ದುರುದ್ದೇಶವಾಗಿ ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೇ ದುಡ್ಡು ಮಾಡಲು ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದು, ಇಂತಹ ಹೇಳಿಕೆಗಳಿಗೆ ತಾವು ಹೆದರುವುದಿಲ್ಲ. ಯಾವುದೇ ರಾಜಿ ಇಲ್ಲದೇ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವುದಾಗಿ ತಿಳಿಸಿದ್ದಾರೆ.