ಕುಮಾರೇಶ್ವರರ ಸಮಾಜ ಸೇವೆ ಅವಿಸ್ಮರಣೀಯ
ಕನ್ನಡಪ್ರಭ ವಾರ್ತೆ, ಗದಗ, ಫೆ. 23
ಹಾನಗಲ್ ಕುಮಾರ ಮಹಾಸ್ವಾಮಿಗಳ ಸಮಾಜಮುಖಿ ಚಿಂತನೆ ಹಾಗೂ ಅವರ ಸಮಾಜ ಸೇವೆ ಅವಿಸ್ಮರಣೀಯವಾದದ್ದು ಎಂದು ಅಡ್ನೂರ ದಾಸೋಹಮಠದ ಪಂಚಾಕ್ಷರ ಶಿವಾಚಾರ್ಯ ಶ್ರೀಗಳು ಹೇಳಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಶನಿವಾರ ಅಖಿಲ ಭಾರತ ಶ್ರೀಮದ್ ವೀರಶೈವ ಮಹಾಸಭೆ ಹಾಗೂ ಶಿವಯೋಗ ಮಂದಿರ ಸಂಸ್ಥಾಪಕ ಹಾನಗಲ್ಲ ಕುಮಾರ ಶ್ರೀಗಳ 84ನೇ ಪುಣ್ಯಸ್ಮರಣೋತ್ಸವ ಹಾಗೂ ಪುರಾಣ ಮಹಾಮಂಗಲೋತ್ಸವದಲ್ಲಿ ಮಾತನಾಡಿದರು.
ನಾಡಿನ ಧರ್ಮದ ಚಿಂತನೆಗಳೊಂದಿಗೆ ಅಂಧ, ಅನಾಥ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ವೀರೇಶ್ವರ ಪುಣ್ಯಾಶ್ರಮ ಸ್ಥಾಪನೆಯಿಂದ ಸಮಾಜಕ್ಕೆ ಹೊರೆಯಾಗುವ ಅಂಧ, ಅನಾಥರ ಬಾಳಿಗೆ ಹೊಸ ಬೆಳಕನ್ನು ನೀಡುಲು ಲಿಂ. ಪಂಡಿತ ಪಂಚಾಕ್ಷರ ಗವಾಯಿಗಳವರ ಹಾಗೂ ಪಂ. ಪುಟ್ಟರಾಜ ಕವಿ ಗವಾಯಿಗಳವರ ಮುಖಾಂತರ ಅವರ ಬಾಳಿಗೆ ಬೆಳಕನ್ನು ನೀಡಿದರು ಎಂದರು.
ಸಮ್ಮುಖ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ವೀರಶೈವ ಧರ್ಮದ ಉನ್ನತಿಯೊಂದಿಗೆ ಸಮಾಜದಲ್ಲಿನ ಹಲವಾರು ಎಡರು-ತೊಡರುಗಳನ್ನು ಬರೆಹರಿಸಿ ಸಮಾಜದ ಸದ್ಚಿಂತನೆ ಮಾಡಿದವರು ಎಂದರು.
ವೀರೇಶ್ವರ ಪುಣ್ಯಾಶ್ರಮ ವ್ಯವಸ್ಥಾಪಕ ಬಸವರಾಜ ಹಿಡ್ಕಿಮಠ ಮಾತನಾಡಿ, ಹಾನಗಲ್ ಕುಮಾರಸ್ವಾಮಿಗಳು ಶಿವ ಸ್ವರೂಪಿಗಳು, ಗುರು-ವಿರಕ್ತರನ್ನು ಸಮಾನತೆಯಿಂದ ನೋಡಿದ ಸಾಕಾರ ಮೂರ್ತಿಗಳು ಅವರ ಸಮಾಜಸೇವೆ ಅನುಪಮ, ಅವರ ಜೀವನ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು. ವಿರೂಪಾಕ್ಷಯ್ಯಶಾಸ್ತ್ರಿ ಕೂಬಿಹಾಳ ಪುರಾಣ ಪ್ರವಚನ ಮಾಡಿದರು. ಹುಚ್ಚಯ್ಯ ಗವಾಯಿಗಳು ಸಂಗೀತ ಸೇವೆ ನೀಡಿದರು. ವೀರೇಶ ಹಿರೇಮಠ ತಬಲಾ ಸಾಥ್ ನೀಡಿದರು.
ಆಶ್ರಮದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪುರಾಣ ಮಹಾಮಂಗಲೋತ್ಸವದ ಅಂಗವಾಗಿ ಶನಿವಾರ ಬೆಳಗ್ಗೆ ವೀರೇಶ್ವರ ಪುಣ್ಯಾಶ್ರಮದಿಂದ ಹಾನಗಲ್ ಕುಮಾರ ಮಹಾಶಿವಯೋಗಿಗಳವರ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಪುಣ್ಯಾಶ್ರಮಕ್ಕೆ ತಲುಪಿತು. ನಂತರ ಮಹಾಪ್ರಸಾದ ಜರುಗಿತು. ಪಿಪಿಜಿ ಅಂಧರ ಶಿಕ್ಷಣ ಸಮಿತಿಯ ಆಡಳಿತಾಧಿಕಾರಿ ಪಿ.ಸಿ ಹಿರೇಮಠ, ಬಸವರಾಜ ಕುಂಬಾರ, ರುದ್ರಯ್ಯ ಗುರುಮಠ, ಸಿ.ಪಿ. ಚೌಕಿಮಠ ಮುಂತಾದವರು ಉಪಸ್ಥಿತರಿದ್ದರು. ಜಿ. ವೀರೇಶಶಾಸ್ತ್ರಿ ಗಜಗನಾಳ ನಿರೂಪಿಸಿದರು.