ಡೊಳ್ಳುಕುಣಿತಕ್ಕೆ ಹುಚ್ಚೆದ್ದು ಕುಣಿದ ಯುವಕರು
ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆ ಕನ್ನಡಪ್ರಭ ವಾರ್ತೆ, ಗದಗ, ಫೆ. 23
ಲಕ್ಕುಂಡಿ ಉತ್ಸವದ ಅಂಗವಾಗಿ ಶನಿವಾರ ರಾತ್ರಿ ಆಯೋಜಿಸಲಾಗಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಸಾವಿರಾರು ಜನ ಪ್ರೇಕ್ಷಕರನ್ನು ರಂಜಿಸಿದವು. ಸಿಎಂ ಸಿದ್ದರಾಮಯ್ಯ ನಿಗದಿತ ಸಮಯಕ್ಕಿಂತ ಒಂದೂವರೆ ಗಂಟೆಗಳ ಕಾಲ ವಿಳಂಬವಾಗಿ ಆಗಮಿಸಿ ಉತ್ಸವ ಉದ್ಘಾಟಿಸಿದರೂ ಮನರಂಜನಾ ಕಾರ್ಯಕ್ರಮ ನೋಡುವ ಉತ್ಸಾಹದಲ್ಲಿದ್ದ ಜನತೆ ಕಾರ್ಯಕ್ರಮಕ್ಕಾಗಿ ಕಾದು ಕುಳಿತಿದ್ದು ಗಮನಾರ್ಹವಾಗಿತ್ತು.
ರಾತ್ರಿ 10.30ರಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಮನಕಲಾ ಕೇಂದ್ರದಿಂದ ವಿಶೇಷ ನೃತ್ಯ ರೂಪಕ ಎಲ್ಲರ ಗಮನ ಸೆಳೆಯಿತು. ನಂತರ ಖ್ಯಾತ ಗಾಯಕಿ ಅರ್ಚನಾ ಉಡುಪ ಮತ್ತು ತಂಡದವರಿಂದ ಸಂಗೀತ ಸಂಜೆ ಪ್ರಾರಂಭವಾಗುತ್ತಿದ್ದಂತೆ ನೆರೆದಿದ್ದ ಪ್ರೇಕ್ಷಕರಲ್ಲಿ ಕೇಕೆ, ಘೋಷಣೆಗಳು ಪ್ರಾರಂಭವಾದವು. ಭಾವಗೀತೆ, ಚಲನಚಿತ್ರಗೀತೆ, ಘಜಲ್, ಕವಾಲಿ, ಹಿಂದಿ ಚಿತ್ರಗೀತೆಗಳು ಸೇರಿದಂತೆ ಸಂತ ಶಿಶುನಾಳ ಶರೀಫರ ಹಾಡುಗಳನ್ನು ಸತತವಾಗಿ ಒಂದು ಗಂಟೆಗೂ ಹೆಚ್ಚು ಕಾಲ ಹಾಡುವ ಮೂಲಕ ಎಲ್ಲರ ಗಮನ ಸೆಳೆದರು. ಅದರಲ್ಲಿಯೂ 'ತರವಲ್ಲ ತಗಿ ನಿನ್ನ ತಂಬೂರಿ' ಹಾಡನ್ನು ನೆರೆದಿದ್ದ ಸಾವಿರಾರು ಪ್ರೇಕ್ಷಕರಿಂದ ಹಾಡಿಸಿ ಎಲ್ಲರನ್ನು ಮತ್ತಷ್ಟು ಮನರಂಜನೆ ನೀಡಿದರು.
ಬೆಂಗಳೂರಿನ ಮೋಸೀನ್ ಖಾನ್ ಮತ್ತು ತಂಡದವರು ನಡೆಸಿಕೊಟ್ಟ ವಾದ್ಯವೃಂದದಲ್ಲಿ ಪಾಲ್ಗೊಂಡಿದ್ದ ಇಬ್ಬರು ವಿದೇಶಿ ಕಲಾವಿದರು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾದರು. ನಂತರ ಬೆಂಗಳೂರಿನ ಆರಾಧನಾ ತಂಡ ನಡೆಸಿಕೊಟ್ಟ ವಿಶೇಷ ನೃತ್ಯ, ನೃತ್ಯದ ವಿಭಾಗದಲ್ಲಿನ ಎಲ್ಲಾ ಸಂಯೋಜನೆ ಒಳಗೊಂಡಿದ್ದು ಪ್ರತಿಯೊಬ್ಬರಿಗೂ ಜನಪದ ಮತ್ತು ಆಧುನಿಕತೆಯ ಟಚ್ನ್ನು ಒಂದೇ ವೇದಿಕೆಯಲ್ಲಿ ನೀಡಿತು. ಅದರಲ್ಲಿಯೂ ಭರತನಾಟ್ಯ ಹಾಗೂ ಜನಪದ ಶೈಲಿಯ ಕಾಂಬಿನೇಶನ್ ಮನಸೂರೆಗೊಂಡಿತು.
ಗದಗ ತಾಲೂಕಿನ ಕುರ್ತಕೋಟಿಯ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಳದವರು ನಡೆಸಿಕೊಟ್ಟ ಕೋಲಾಟದಲ್ಲಿ ಹತ್ತಾರು ವಿಶೇಷತೆ ಅಳವಡಿಸಿದ್ದು ಆಧುನಿಕ ಹಾಡುಗಳಿಗೆ ಪಾರಂಪರಿಕ ಕೋಲಾಟ ಹೊಸ ಮೆರುಗಿಗೆ ಕಾರಣವಾಯಿತು.
ಮನಸೆಳೆದ ಸೋಮನ ಕುಣಿತ: ತುಮಕೂರಿನ ವಿ.ಜಿ. ಕುಮಾರಸ್ವಾಮಿ ಹಾಗೂ ತಂಡದಿಂದ ನಡೆದ ಸೋಮನ ಕುಣಿತವೂ ಮನರಂಜನೆಗಾಗಿಯೇ ನಿದ್ದೆಗೆಟ್ಟು ಕುಳಿತಿದ್ದ ಪ್ರೇಕ್ಷಕರಿಗೆ ಭಕ್ತಿಭಾವ ಹಾಗೂ ಮನರಂಜನೆ ಒಟ್ಟಿಗೆ ಒಡಮೂಡಿಸಿತು. ಈ ತಂಡದಲ್ಲಿದ್ದ ಇಬ್ಬರು ಬಾಲಕರ ನೃತ್ಯವೂ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿತು.
ಇನ್ನು ತಮ್ಮ ನೃತ್ಯ ಹಾಗೂ ಕಲಾವಂತಿಕೆಗಾಗಿಯೇ ಗದಗ ಜಿಲ್ಲೆಗೆ ಕಳೆದ ಬಾರಿ ರಾಜ್ಯೋತ್ಸವ ಪ್ರಶಸ್ತಿ ತಂದುಕೊಟ್ಟ ರೋಣ ತಾಲೂಕಿನ ಕೊತಬಾಳ ಗ್ರಾಮದ ಅರುಣೋದಯ ಕಲಾ ತಂಡದ ಜೋಗತಿ ನೃತ್ಯ ಪ್ರಾರಂಭವಾಗುತ್ತಿದ್ದಂತೆ, ಎಲ್ಲೆಡೆ ಜೋರಾದ ಕೇಕೆ, ಸಿಳ್ಳೆ ಕೇಳಿ ಬಂದವು. ಅವರ ಹಾಡು ಹಾಗೂ ನೃತ್ಯಕ್ಕೆ ಎಲ್ಲರೂ ನಿಬ್ಬೆರಗಾದರು. ನಂತರ ಬೆಂಗಳೂರಿನ ಮಹಾದೇವ ಮೂರ್ತಿ ತಂಡದಿಂದ ಕಂಸಾಳೆ, ಗದಗನ ವಿಶ್ವನಾಥ ಹಿರೇಮಠ ತಂಡದಿಂದ ಸಂಗೀತ ಕಾರ್ಯಕ್ರಮ, ಶಿವಾನಂದ ಹುಣಸೀಮರದ ಭಕ್ತಿಗೀತೆ, ಬೆಟಗೇರಿಯ ಮೈಲಾರ ಲಿಂಗೇಶ್ವರ ದೊಡ್ಡಾಟ ಮೇಳದವರಿಂದ ದೊಡ್ಡಾಟ ಕಾರ್ಯಕ್ರಮ ಜರುಗಿತು. ಎಪಿಎಂಸಿ ಉಪಾಧ್ಯಕ್ಷ ಸಿದ್ದು ಪಾಟೀಲ, ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ ಸೇರಿದಂತೆ ಸ್ಥಳೀಯ ಗಣ್ಯರು ಹಾಜರಿದ್ದರು. ಒಂದು ಕಲಾ ಪ್ರದರ್ಶನ ಪೂರ್ಣಗೊಳ್ಳುತ್ತಿದ್ದಂತೆ ಅವರಿಗೆ ನೆನಪಿನ ಕಾಣಿಕೆ ನೀಡಿದರು. ಬೆಳಗಿನ ಜಾವ 3.30ರ ವರೆಗೂ ಕಾರ್ಯಕ್ರಮಗಳು ಜರುಗಿದವು.
-ಶಿವಕುಮಾರ ಕುಷ್ಟಗಿ