ನುಡಿ ಹಬ್ಬಕ್ಕೆ ಕಲಾ ತಂಡಗಳ ಮೆರುಗು
ದುರ್ಗಸಿಂಹ ಮಹಾ ಮಂಟಪ ಕನ್ನಡಪ್ರಭ ವಾರ್ತೆ,ರೋಣ, ಫೆ. 23
ಬಾನಿನಲ್ಲಿ ಸೂರ್ಯ ತನ್ನ ತಾರುಣ್ಯ ಕಳೆದುಕೊಂಡು ಚಂದ್ರೋದಯ ವೇಳೆಯಲ್ಲಿ ಮೇಳೈಸಿದ ಸಾಂಸ್ಕೃತಿಕ ದೃಶ್ಯಗಳು ವಯಸ್ಕರಲ್ಲಿ, ತರುಣ, ತರುಣಿಯರಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸಿದವು. ವಿನೂತನ ವೇಷ ಭೂಷಣದೊಂದಿಗೆ ಕಲೆಯನ್ನು ಅನಾವರಣಗೊಳಿದ ಕಲಾ ತಂಡಗಳು ನೋಡುಗರನ್ನು ಮಂತ್ರ ಮುಗ್ಧಗೊಳಿಸಿದವು.
ಸಾಹಿತ್ಯಾಸಕ್ತರಿಗೆ, ಸಾಹಿತ್ಯ ಅಭಿಮಾನಿಗಳಿಗೆ, ಕಲಾ ರಸಿಕರಿಗೆ ಪಟ್ಟಣದಲ್ಲಿ ಜರುಗಿದ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ದುರ್ಗಸಿಂಹ ಮಹಾ ಮಂಟಪದಲ್ಲಿ ಅನಾವರಣಗೊಂಡ ಸಾಂಸ್ಕೃತಿಕ ರಂಗು ಸಮ್ಮೇಳನಕ್ಕೆ ಮತ್ತಷ್ಟು ಮೆರಗು ತಂದಿತು. ಸಾಹಿತ್ಯ ಜಾತ್ರೆಯಲ್ಲಿ ಜನಪದ ಕಲಾ ರಸದೌತಣ ಸವಿ ಉಂಡ ಜನತೆಯ ಸಂಭ್ರಮ ಮುಗಿಲುಮುಟ್ಟಿತ್ತು.
ಇದಕ್ಕೆ ಸಾಕ್ಷಿಯಾಗಿದ್ದು ಪಟ್ಟಣದ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶನಿವಾರ ಜರುಗಿದ ಗದಗ ಜಿಲ್ಲಾ 6ನೇ ಸಮ್ಮೇಳನದ ಡಾ. ಭೀಮಸೇನ ಜೋಶಿ ಮಹಾವೇದಿಕೆಯ ದುರ್ಗಸಿಂಹ ಮಹಾ ಮಂಟಪದಲ್ಲಿ ಕಂಡು ಬಂದ ಜಾನಪದ ಕಲಾ ತಂಡಗಳ ದೃಶ್ಯಾವಳಿಗಳಿವು. ಕಲಾ ರಸಿಕರನ್ನು ಒಂದೊಂದು ಕಲೆಯೂ ಜಾನಪದ ಲೋಕಕ್ಕೆ ಕರೆದುಕೊಂಡು ಹೋಯಿತು.
ಕೇಕೇ ಹಾಕಿದ ಸಾಹಿತ್ಯಾಸಕ್ತರು: ರಾಜ್ಯ ಮತ್ತು ಅಂತಾರಾಜ್ಯಗಳಿಂದ ಆಗಮಿಸಿದ ಕಲಾ ತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸುತ್ತಿದ್ದ ದೃಶ್ಯಗಳ ನೋಡುಗರ ಮನ ಸೂರೆಗೊಳಿಸಿದವು. ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಪಪೂ ಕಾಲೇಜ್ ವಿದ್ಯಾರ್ಥಿಗಳ ಸಮೂಹ ನೃತ್ಯದೊಂದಿಗೆ ಪ್ರಾರಂಭವಾದ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಂಡು ಸುಧಾ ಇನಾಂದಾರ ಅವರಿಂದ ಕಥಕ್ ನೃತ್ಯ, ಮಾರನಬಸರಿ ಶಾಲಾ ಮಕ್ಕಳಿಂದ ಪ್ರದರ್ಶಿಸಿಲ್ಪಟ್ಟ ಕಂಸಾಳೆ ನೃತ್ಯಕ್ಕೆ ವೇದಿಕೆಯಲ್ಲಿ ಜಮಾಯಿಸಿದ ಕಲಾಭಿಮಾನಿಗಳು ಹುಚ್ಚೆದ್ದು ಕುಣಿದು ಕೇಕೇ ಹಾಕಿ ಸಂಭ್ರಮಿಸಿ, ಮಕ್ಕಳನ್ನು ಹುರದುಂಬಿಸಿದರು.
ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಕಾರ್ಯಕ್ರಮ: ಜನಪದ ಲೋಕದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ರೋಣ ತಾಲೂಕು ಕೊತಬಾಳ ಗ್ರಾಮದ ಸಂಕ್ರಣ್ಣ ಸಂಕಣ್ಣವರ ಅರುಣೋದಯ ಕಲಾ ತಂಡದಿಂದ ಮೂಡಿ ಬಂದ ಜೋಗತಿ ನೃತ್ಯ ಜಾನಪದ ಲೋಕದಲ್ಲಿಯೇ ಉತ್ತರ ಕರ್ನಾಟಕದಲ್ಲಿ ವಿಶಿಷ್ಟ ಸ್ಥಾನಮಾನವನ್ನು ತಂದು ಕೊಟ್ಟ ಕೀರ್ತಿಯನ್ನು ಮರುಕಳಿಸಿತು. ಜೋಗತಿ ಹೊತ್ತ ಪುರುಷ ವೇಷಧಾರಿಗಳು ಕಲಾ ರಸಿಕರನ್ನು ತುದಿಗಾಲಲ್ಲಿ ನಿಂತು ನೋಡುವಂತೆ ಮಾಡಿದವು.
ಸಾಂಸ್ಕೃತಿಕ ಮೇಳದಲ್ಲಿ ಜನಸಾಗರ: ಸಿಎಂ ಸಿದ್ದರಾಮಯ್ಯನವರಿಂದ ಉದ್ಘಾಟನೆಗೊಂಡ ಸಮ್ಮೇಳನ, ಉದ್ಘಾಟನಾ ಸಂದರ್ಭದಲ್ಲಿದ್ದ ಅಪಾರ ಪ್ರಮಾಣದ ಜನಸಾಗರ ಸಾಂಸ್ಕೃತಿಕ ಕಾರ್ಯಕ್ರಮದದುದ್ದಕ್ಕೂ ವೇದಿಕೆಯಲ್ಲಿ ತುಂಬಿಕೊಂಡಿತ್ತು. ಕಸಾಪ ಮತ್ತು ಸಮ್ಮೇಳನ ಸಾಂಸ್ಕೃತಿಕ ಸಮಿತಿ ಆಯೋಜಿಸಿದ ಅಚ್ಚುಕಟ್ಟು ಕಾರ್ಯಕ್ರಮಗಳು ಕಲಾ ರಸಿಕರನ್ನು, ಅಭಿಮಾನಿಗಳನ್ನು ವೇದಿಕೆಯಲ್ಲಿ ಹಿಡಿದಿಟ್ಟುಕೊಳ್ಳುವಂತೆ ಮಾಡಿತು.
ಮಂಡ್ಯ ಜಿಲ್ಲೆಯ ಸವಿತಾ ಮಳವಳ್ಳಿ ಕಲಾ ತಂಡದಿಂದ ಪೂಜಾ ಕುಣಿತ, ಉಮಾ ಮಹೇಶ್ವರಿ ತಂಡದಿಂದ ಪಟ ಕುಣಿತ, ಚಿಕ್ಕಮಗಳೂರ ಅಂಬಿಕಾ ಕಡೂರ ತಂಡದಿಂದ ಮಹಿಳಾ ವೀರಗಾಸೆ, ಹಿರಮೇಮಣ್ಣೂರ ಕಲಾ ತಂಡದಿಂದ ಸುಗ್ಗಿ ಕುಣಿತ, ಗೋವಾ ಕಲಾ ತಂಡದಿಂದ ದೀಪ ನೃತ್ಯ, ಪಂಜಾಬದ ಮಾನಸಾ ಜಿಲ್ಲಾ ಕಲಾ ತಂಡದಿಂದ ಬಾಂಗ್ಡಾ ನೃತ್ಯ, ಮಹಾರಾಷ್ಟ್ರದ ಕೊಲ್ಲಾಪೂರ ಕಲಾ ತಂಡದಿಂದ ಲಾವಣಿ ನೃತ್ಯ, ಪಟ್ಟಣದ ಸರ್ಕಾರಿ ಬಾಲಕಿಯರ ಶಾಲೆಯಿಂದ ನೃತ್ಯ ರೂಪಕ, ಲಕ್ಷ್ಮೀ ಮುಕನಾಯ್ಕರ, ರಶ್ಮೀ ಅರಶಿದ್ಧಿ ಅವರಿಂದ ಭರತ ನಾಟ್ಯ, ಮಾಳವಾಡದ ಮಾರುತೇಶ್ವರ ಹರಿಭಜನಾ ತಂಡದಿಂದ ಹರಿಭಜನೆ, ಬಸವರಾಜ ಪಾಗದ, ಸುರೇಶ ಅಕ್ಕಸಾಲಿಗರ ಅವರಿಂದ ಹಾಸ್ಯ ಸಂಜೆ, ಕುಂದಗೊಳ ರಂಗಸಂಗ ಕಲಾತಂಡದಿಂದ ದೊಡ್ಡಾಟ ಹೀಗೆ ನಾನಾ ಭಾಗದ ತಂಡಗಳು ಶನಿವಾರ ಮಧ್ಯರಾತ್ರಿ 2 ಗಂಟೆ ವರೆಗೂ ವಿಭಿನ್ನವಾದ ಜಾನಪದ ಕಲೆಗಳನ್ನು ಅನಾವರಣಗೊಳಿಸಿದವು. ಒಟ್ಟಾರೆ ಪಟ್ಟಣದಲ್ಲಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಾನಪದ, ಗೀಗೀ ಪದ, ಡೊಳ್ಳು ಕುಣಿತ, ಜೋಗತಿ ನೃತ್ಯ ಸೇರಿದಂತೆ ನಾನಾ ರೀತಿಯ ಕಲೆಗಳು ಒಂದೇ ವೇದಿಕೆಯಲ್ಲಿ ಮೂಡಿ ಬಂದಿದ್ದು ವಿಶೇಷ.
-ಪಿ.ಎಸ್. ಪಾಟೀಲ