ಲಕ್ಕುಂಡಿಗೆ ಬಹುಪ್ರಾಚೀನ ಇತಿಹಾಸ
ಗದಗ: ನಾಡಿನ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಜನಪರ ಐತಿಹ್ಯ ಪ್ರಮುಖ ಪಾತ್ರ ವಹಿಸುತ್ತದೆ. ಲಕ್ಕುಂಡಿಗೆ ಬಹು ಪ್ರಾಚೀನ ಇತಿಹಾಸವಿದ್ದು, ಈ ಕುರಿತು ಸ್ಪಷ್ಟವಾದ ಮಾಹಿತಿ ಲಕ್ಕುಂಡಿಯಲ್ಲಿ ದೊರೆತ ಶಾಸನದಿಂದ ತಿಳಿದುಬರುತ್ತದೆ ಎಂದು ಸಾಹಿತಿ ಹನುಮಾಕ್ಷಿ ಗೋಗಿ ಹೇಳಿದರು.
ಭಾನುವಾರ ಲಕ್ಕುಂಡಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಲಕ್ಕುಂಡಿ ಉತ್ಸವದಲ್ಲಿ ವಿಚಾರ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲಕ್ಕುಂಡಿ ತನ್ನದೆ ಆದ ವಿಶಿಷ್ಟ ಶಿಲ್ಪಕಲೆ ಹೊಂದಿ ನಾಡಿನಲ್ಲಿಯೇ ಪ್ರಖ್ಯಾತಿ ಪಡೆದಿದೆ. ಇಂತಹ ಲಕ್ಕುಂಡಿಯ ಉತ್ಸವವನ್ನು ಹಮ್ಮಿಕೊಳ್ಳುವ ಮೂಲಕ ನಾಡಿನ ಜನತೆಗೆ ಲಕ್ಕುಂಡಿಯ ಇತಿಹಾಸದ ಕುರಿತು ಮನವರಿಕೆ ಮಾಡುವ ಕಾರ್ಯ ನಡೆಯುತ್ತಿರುವುದು ಅಭಿನಂದನಾರ್ಹಎಂದರು.
ವಿಶ್ವಪರಂಪರೆಗೆ ಸೇರಿಸಿ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ. ಚಿನ್ನಸ್ವಾಮಿ ಸೋಸಲೆ ಮಾತನಾಡಿ, ಪುರಾಣ ಮಿಶ್ರಿತವನ್ನೇ ಭಾರತೀಯ ಚರಿತ್ರೆ ಎಂದು ನಾವು ರಚಿಸಿದ್ದೇವೆ. ಆದರೆ, ಚರಿತ್ರೆಯನ್ನು ಜನಮುಖಿಯಾಗಿ ಯಾರೂ ಅಧ್ಯಯನ ಮಾಡದೇ ಇರುವುದು ವಿಪರ್ಯಾಸ. ಜನಮುಖಿಯಾಗಿ ಚರಿತ್ರೆಯನ್ನು ಕಟ್ಟಿದಾಗ ಮಾತ್ರ ನಿಜವಾದ ಚರಿತ್ರೆಯಾಗುತ್ತದೆ. ಇತಿಹಾಸವನ್ನು ಚರಿತ್ರೆಯ ಮೂಲಕ ನೋಡಬೇಕು. ಅಂದಿನ ಇತಿಹಾಸವನ್ನು ಇಂದು ಜನರ ಮಧ್ಯೆ ಸಮೀಕರಿಸಬೇಕಾದ ಅನಿವಾರ್ಯತೆಯಿದೆ.
ಲಕ್ಕುಂಡಿ ಕೇವಲ ಸೀಮಿತ ಜನರಿಗೆ ರೂಪಿತವಾಗದೆ, ಇದರ ಬಗ್ಗೆ ಸಮಗ್ರ ಅಧ್ಯಯನವಾಗುವ ಅವಶ್ಯಕತೆ ಇದೆ. ಲಕ್ಕುಂಡಿಯನ್ನು ವಿಶ್ವಪರಂಪರೆಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಗದಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಅಪ್ಪಣ್ಣ ಹಂಜಿ ಮಾತನಾಡಿ, ಪ್ರಾಚೀನ ಕಾಲದಲ್ಲಿ ನಕ್ಷತ್ರಾಕರಾದ ದೇವಾಲಯಗಳ ನಿರ್ಮಾಣ ಕಾರ್ಯ ಪ್ರಥಮವಾಗಿ ಗದಗ ಜಿಲ್ಲೆಯಿಂದ ಪ್ರಾರಂಭವಾಯಿತು. ರೋಣ ತಾಲೂಕಿನ ಕೊಣ್ಣೂರಿನಲ್ಲಿರುವ ದೇವಸ್ಥಾನವೇ ನಕ್ಷತ್ರಾಕಾರದ ಪ್ರಥಮ ದೇವಸ್ಥಾನವಾಗಿದೆ. ಆದರೆ, ನಮ್ಮ ಆಚಾರ, ವಿಚಾರ, ನಂಬಿಕೆ, ಸಂಪ್ರದಾಯ ವಾಸ್ತುಕಲೆಯ ಮೇಲೆ ಪರೋಕ್ಷವಾಗಿ ಪರಿಣಾಮ ಬೀರಿವೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಕುರ್ತಕೋಟಿ ಸರ್ಕಾರಿ ಮಹಾವಿದ್ಯಾಲಯದ ಡಾ. ವೈ.ಆರ್. ಬೇಲೇರಿ ಲಕ್ಕುಂಡಿ ಇತಿಹಾಸ ಸಂಸ್ಕೃತಿ ಮತ್ತು ಹಂಪಿ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ಕುರಿತು, ಸಹ ಪ್ರಾಧ್ಯಾಪಕ ಡಾ. ಎ. ಶ್ರೀಧರ ಗ್ರಾಮೀಣ ಅಭಿವೃದ್ಧಿ ಮುನ್ನೋಟ ಕುರಿತು ಮತ್ತು ಲಕ್ಕುಂಡಿಯ ಗ್ರಾಪಂ ಮಾಜಿ ಸದಸ್ಯ ಬಿ.ಬಿ. ಮಾಡಲಗೇರಿ ಅವರು ಕೃಷಿ ಬದುಕಿನ ತಲ್ಲಣಗಳು ಕುರಿತು ಮಾತನಾಡಿದರು. ಗೋಷ್ಠಿಯನ್ನು ಪ್ರಕಾಶ ಮಂಗಳೂರ ನಿರೂಪಿಸಿದರು.