ಅಭಿಮಾನದ ಬದುಕನ್ನುಕಲ್ಪಿಸುವುದೆ ಸರ್ಕಾರ ಗುರಿ
ಗದಗ: ಬಡ ಜನತೆಗೆ ಸರ್ಕಾರದಿಂದ ಸಾಲ-ಸೌಲಭ್ಯ ದೊರಕಿಸುವ ಮೂಲಕ ಸ್ವಾವಲಂಬಿ ಹಾಗೂ ಅಭಿಮಾನದ ಬದುಕು ಕಲ್ಪಿಸುವುದು ಸರ್ಕಾರದ ಗುರಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಭಾನುವಾರ ಸಂಜೆ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿವಿಧ ಯೋಜನೆಯಡಿ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಸಾಲ-ಸೌಲಭ್ಯಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಅಲ್ಪಸಂಖ್ಯಾತರು ಸೇರಿದಂತೆ ಸರ್ವ ಶೋಷಿತ ವರ್ಗಗಳ ಒಳಿತಿಗಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಬಡಜನರಲ್ಲಿ ಗೌರವ ಆತ್ಮಸ್ಥೈರ್ಯ ತುಂಬುವ ಮೂಲಕ ಆರ್ಥಿಕವಾಗಿ ಸದೃಢಗೊಳಿಸುವ ಕಾರ್ಯಕ್ಕೆ ಪ್ರಾಮುಖ್ಯ ನೀಡಲಾಗಿದೆ. ಒಟ್ಟು 1005 ಫಲಾನುಭವಿಗಳಿಗೆ ರು. 372 ಲಕ್ಷ ಸಾಲ-ಸೌಲಭ್ಯಗಳನ್ನು ಜಿಲ್ಲೆಯ ಅಲ್ಪಸಂಖ್ಯಾತರಿಗಾಗಿ ನೀಡುವ ಈ ಯೋಜನೆ ಅತ್ಯಂತ ಮಹತ್ತರವಾದದ್ದಾಗಿದೆ. ಮಧ್ಯವರ್ತಿ ಮತ್ತು ಭ್ರಷ್ಟಾಚಾರ ಬಡವರ ಶತ್ರುಗಳಾಗಿದ್ದು, ಫಲಾನುಭವಿಗಳು ಈ ಕುರಿತು ಜಾಗ್ರತರಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಯಿತು. ಮಾಜಿ ಶಾಸಕ ಡಿ.ಆರ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಎಂ. ದಂಡಿನ, ಉಮರಫಾರೂಕ್ ಹುಬ್ಬಳ್ಳಿ, ಜೆ.ಎಸ್. ಸೈಯ್ಯದಕೌಸರ್ ಮಕಾನದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಅಕ್ಬರ್ಸಾಬ್ ಬಬರ್ಚಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹ್ಮದ ಸಲೀಂ ಸ್ವಾಗತಿಸಿದರು.