ಜಗತ್ತನ್ನು ನೋಡಲು ಇಂಗ್ಲಿಷ್ ಬೆಳಕಿನ ಕಿಂಡಿ
ಮುಂಡರಗಿ: ಕನ್ನಡ ಮಾತೃಭಾಷೆಯಾದರೆ ಇಂಗ್ಲಿಷ್ ನಮ್ಮ ಬದುಕಿನ ಭಾಷೆ. ಇಂಗ್ಲಿಷ್ನಿಂದ ಮಾಹಿತಿ ತಂತ್ರಜ್ಞಾನ ತಿಳಿದುಕೊಳ್ಳಬಹುದು. ಇಡೀ ಜಗತ್ತನ್ನು ನೋಡಲು ಇಂಗ್ಲಿಷ್ ಭಾಷೆ ಬೆಳಕಿನ ಕಿಂಡಿ ಇದ್ದಂತೆ ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಪಟ್ಟಣದ ತೋಂಟದಾರ್ಯ ಸಿಬಿಎಸ್ಇ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಇಂಗ್ಲಿಷ್ ಮನುಷ್ಯನ ವಿಕಾಸ ಮಾಡುವ ಭಾಷೆ. ಪ್ರತಿಯೊಬ್ಬರನ್ನೂ ಮುಖ್ಯವಾಹಿನಿಗೆ ತರುವಲ್ಲಿ ಇಂಗ್ಲಿಷ್ ಭಾಷೆ ಸಹಕಾರಿಯಾಗಿದೆ. ಇಂದು ನಮ್ಮ ಗ್ರಾಮೀಣ ಪ್ರದೇಶ ಮಕ್ಕಳೂ ಉನ್ನತ ಹುದ್ದೆಗಳಾದ ಎಸಿ, ಡಿಸಿ, ಎಸ್ಪಿ, ಡಿಎಸ್ಪಿ ಸೇರಿದಂತೆ ಉನ್ನತ ಹುದ್ದೆಗೇರಲು ಅನುಕೂಲವಾಗಿದೆ. ಶ್ರೀಗಳು ಮುಂಡರಗಿ ಭಾಗದಲ್ಲಿ ಇಂಥ ಶಾಲೆ ಪ್ರಾರಂಭಿಸುವ ಮೂಲಕ ಇಲ್ಲಿನ ಮಕ್ಕಳಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದ್ದಾರೆ. ಈಗಾಗಲೇ 3 ವರ್ಷಗಳಿಂದ 100ಕ್ಕೆ 100ರಷ್ಟು ಫಲಿತಾಂಶ ಮಾಡುತ್ತಿರುವ ಸಿಬಿಎಸ್ಇ ಶಾಲೆಯ ವಿದ್ಯಾರ್ಥಿಗಳು ಬರುವ ದಿನಗಳಲ್ಲಿ ಕನ್ನಡವನ್ನು ಜೀವದ ಭಾಷೆಯಾಗಿ ಬಳಕೆ ಮಾಡುವ ಮೂಲಕ ಇಂಗ್ಲಿಷ್ನಲ್ಲಿಯೂ ಉನ್ನತ ಸ್ಥಾನ ಹೊಂದಿ ಸಂಸ್ಥೆ, ತಾಲೂಕು, ಜಿಲ್ಲೆ, ರಾಜ್ಯಕ್ಕೆ ಹೆಸರು ತರುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಜ. ತೋಂಟದ ಸಿದ್ದಲಿಂಗ ಶ್ರೀಗಳ ಜನಪರ ಕಾಳಜಿಯಿಂದಾಗಿ ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳು ಹಾಗೂ 3ರಿಂದ 4 ಕಡೆಗಳಲ್ಲಿ ಸಿಬಿಎಸ್ ಶಾಲೆಗಳನ್ನು 30ಕ್ಕೂ ಹೆಚ್ಚು ಕಡೆಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಿದ್ದಾರೆ. ಇಂದಿನ ಕಂಪ್ಯೂಟರ್ ಜಗತ್ತಿನಲ್ಲಿ ಎಲ್ಲರಿಗೂ ಇಂಗ್ಲಿಷ್ ಜ್ಞಾನ ಅವಶ್ಯವಾಗಿದೆ ಎಂದರು. ವೇದಿಕೆಯಲ್ಲಿ ಶಾಲೆ ವಿದ್ಯಾರ್ಥಿ ಪ್ರತಿನಿಧಿ ಜಾವೇದ ಬಿಸ್ತಿ ಉಪಸ್ಥಿತರಿದ್ದರು. ಇದೇ ಸಂದರ್ಭ ವರ್ಷದ ಉತ್ತಮ ವಿದ್ಯಾರ್ಥಿಯಾಗಿ ಜಾವೇದ್ ಬಿಸ್ತಿ, ಉತ್ತಮ ವಿದ್ಯಾರ್ಥಿನಿಯಾಗಿ ಕೀರ್ತಿ ಚವಡಿಯವರನ್ನು ಆಯ್ಕೆ ಮಾಡಿ ಗೌರವಿಸಲಾಯಿತು. ಜ. ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯರಾದ ಜ್ಯೋತಿ ನಾಯ್ಕ ಸ್ವಾಗತಿಸಿದರು. ಪ್ರಾ. ಮಹೇಶ ಮಾಲಗಿತ್ತಿ ವಾರ್ಷಿಕ ವರದಿ ವಾಚಿಸಿದರು. ವಿಜಯಾ ಹಿರೇಮಠ ನಿರೂಪಿಸಿದರು. ಮಂಜುಳಾ ಸೋಮಣ್ಣವರ ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.