ಜಿಎಸ್ಸೆಸ್ರಿಂದ ಬೆಂಗಳೂರು ವಿವಿಗೆ ಜಾಗತಿಕ ಮಟ್ಟದ ಮಾನ್ಯತೆ
ಮುಂಡರಗಿ: ಜಿ.ಎಸ್. ಶಿವರುದ್ರಪ್ಪನವರು ಬೆಂಗಳೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಜಾಗತಿಕ ಮಟ್ಟದ ವಿವಿಧ ಸಾಹಿತ್ಯಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ವಿವಿಗೆ ಜಾಗತಿಕ ಮಟ್ಟದಲ್ಲಿ ಒಂದು ಮಾನ್ಯತೆ ದೊರಕಿಸಿಕೊಟ್ಟರು ಎಂದು ಸರ್ಕಾರಿ ಪಪೂ ಕಾಲೇಜಿನ ಕನ್ನಡ ಉಪನ್ಯಾಸಕ ಎಂ.ಎಂ. ಹೆಬ್ಬಾಳ ಹೇಳಿದರು.
ಅವರು ಶನಿವಾರ ಸ್ಥಳೀಯ ಜ. ಅನ್ನದಾನೀಶ್ವರ ವಸತಿ ನಿಲಯದಲ್ಲಿ ಚಂದನ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಬದುಕು ಬರಹ ಹಾಗೂ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಎಸ್ಎಸ್ ರಚಿಸಿದ ಅನೇಕ ಕವಿತೆಗಳು ಈ ನಾಡಿನ ಲಕ್ಷಾಂತರ ಜನರ ಮನೆ-ಮನಗಳಲ್ಲಿ ನಿತ್ಯನಿರಂತರವಾಗಿ ಉಳಿಯುವಂತವುಗಳಾಗಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಭಾಗ್ಯಲಕ್ಷ್ಮಿ ಬಿಳಿಮಗ್ಗದ ಮಾತನಾಡಿ, ಕುವೆಂಪು ಅವರಂತೆ ಯಾವುದೇ ಸಾಹಿತ್ಯ ಪಂಥಕ್ಕೆ ಸೇರದೆ ಪದ್ಯ ಮತ್ತು ಗದ್ಯಗಳೆರಡರಲ್ಲಿಯೂ ಭಾವ, ಅರ್ಥ ಮತ್ತು ಲಯಗಳನ್ನೆ ಪ್ರಧಾನವಾಗಿಟ್ಟುಕೊಂಡು ಕಾವ್ಯ ರಚಿಸಿದ ಕೀರ್ತಿ ಡಾ. ಜಿ.ಎಸ್.ಎಸ್ ಅವರಿಗೆ ಸಲ್ಲುತ್ತದೆ ಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಬಿ. ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಜಯಶ್ರೀ ಅಳವಂಡಿ ಹಾಗೂ ಸಂಗಡಿಗರು ಜಿ.ಎಸ್. ಶಿವರುದ್ರಪ್ಪನವರ ಹಲವಾರು ಕವಿತೆಗಳನ್ನು ಹಾಡಿದರು. ಬಸವರಾಜ ಸಿರುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದನ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಯುವರಾಜ ರಾಮೇನಹಳ್ಳಿ ಸ್ವಾಗತಿಸಿ, ನಿರೂಪಿಸಿದರು.