ಪರೀಕ್ಷೆ ಕುರಿತು ಪೂರ್ವ ತಿಳಿವಳಿಕೆ ಅವಶ್ಯ
ಗದಗ: ಮಕ್ಕಳು ಪರೀಕ್ಷೆ ಎಂದರೆ ಭಯಭೀತರಾಗುತ್ತಾರೆ. ಅವರಿಗೆ ಈ ಕುರಿತು ಪೂರ್ವ ತಿಳಿವಳಿಕೆ ನೀಡಿದಾಗ ಭಯಮುಕ್ತರಾಗಿ ಪರೀಕ್ಷೆ ಎದುರಿಸಬಹುದು ಎಂದು ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಾ ವರವಿ ಹೇಳಿದರು.
ಅವರು ಈಚೆಗೆ ಸ್ಥಳೀಯ ಬಸವೇಶ್ವರ ನಗರದ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇನ್ನರ್ವ್ಹೀಲ್ ಕ್ಲಬ್ದಿಂದ 'ಪರೀಕ್ಷೆ ಎದುರಿಸುವುದು ಹೇಗೆ?' ವಿಷಯವಾಗಿ ಮಕ್ಕಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಇದು ಸ್ಪರ್ಧಾತ್ಮಕ ಯುಗ, ಇಲ್ಲಿ ಸ್ಪರ್ಧೆ ಸಾಮಾನ್ಯ. ಅದಕ್ಕಾಗಿ ಮಕ್ಕಳು ಓದಿಗೆ ಹೆಚ್ಚು ಗಮನ ನೀಡಬೇಕು. ಅದಕ್ಕಾಗಿ ಸತತ ಅಧ್ಯಯನ ಅವಶ್ಯ ಎಂದರು.
ಶಿಕ್ಷಕಿ ಕವಿತಾ ಬೇಲೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳು ಓದಿದ್ದನ್ನು ಮನನ ಮಾಡಿಕೊಳ್ಳಬೇಕು. ಓದಿದ್ದನ್ನು ಬರೆದಾಗ ಜ್ಞಾಪಕದಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯ. ಅದಕ್ಕಾಗಿ ಓದಿನೊಂದಿಗೆ ಬರವಣಿಗೆಯೂ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಟಿ.ಎಲ್. ರಾಠೋಡ ಮಾತನಾಡಿ, ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಾಗ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ ಎಂದರು.
ಪ್ರಬಂಧ ಸ್ಪರ್ಧೆಯ ನಿರ್ಣಾಯಕರಾಗಿ ಗದುಗಿನ ಸರ್ವ ಧರ್ಮ ಸೇವಾ ಸಂಸ್ಥೆಯ ಅಧ್ಯಕ್ಷ ಚೆನ್ನಾರೆಡ್ಡಿ ಗೂಳರಡ್ಡಿ ಕಾರ್ಯನಿರ್ವಹಿಸಿದರು.
ಸ್ಪರ್ಧೆಯಲ್ಲಿ ನಳನಾಕ್ಷಿ ಗೌಡರ, ರಂಜಿತಾ ಹರತಾಳ, ಕೀರ್ತಿ ಮೇದ್ ಹಾಗೂ ಸಂಗೀತಾ ಇಟಗಿ ಬಹುಮಾನ ಪಡೆದುಕೊಂಡರು.
ಎಸ್ಡಿಎಂಸಿ ಸದಸ್ಯ ಮಲ್ಲಿಕಾರ್ಜುನ ಗುಜ್ಜಾಯಿ, ನೀಲೀಂದ್ರ ಮ್ಯಾಗೇರಿ ಹಾಗೂ ಇನ್ನರ್ವ್ಹೀಲ್ ಕ್ಲಬ್ ಸದಸ್ಯೆ ಸವಿತಾ ಪಾಟೀಲ, ವಿದ್ಯಾ ಸೂಡಿಶೆಟ್ಟರ, ಆಶಾ ಹುಕ್ಕೇರಿ, ಹೇಮಾ ಪೊಂಗಾಲಿಯಾ, ಸುವರ್ಣಾ ವಸ್ತ್ರದ, ವಿದ್ಯಾ ಗಂಜಿಹಾಳ ಹಾಗೂ ಶಾಲೆಯ ಶಿಕ್ಷಕ ಬಳಗದವರು ಉಪಸ್ಥಿತರಿದ್ದರು. ಶುಭಾ ಕುಂದಗೋಳ ಪ್ರಾರ್ಥಿಸಿದರು. ಶಿಕ್ಷಕಿ ಎಸ್.ಜಿ. ಕಲಬುರ್ಗಿ ಕಾರ್ಯಕ್ರಮ ನಿರೂಪಿಸಿದರು. ಸುಲೋಚನಾ ಐಹೊಳಿ ವಂದಿಸಿದರು.