ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮನಸೆಳೆದ ಅಂಧ ಮಕ್ಕಳ ನಾಟ್ಯ ಯೋಗ

Vishwanath S
Updated On : 25 Feb 2014, 11:04 am

ಕನ್ನಡಪ್ರಭ ವಾರ್ತೆ, ರೋಣ, ಫೆ. 24
ಕಣ್ಣು, ಕೈ, ಕಾಲು, ಸದೃಢ ದೇಹ ಸಾಮರ್ಥ್ಯ ಎಲ್ಲವೂ ಇದ್ದರೂ ಅಸಾಯಕರಂತೆ ಕೈಕಟ್ಟಿ ಕುಳಿತುಕೊಳ್ಳುವ ಅದೆಷ್ಟೋ ಯುವಕರಿಗೆ ಮಾದರಿ ಎಂಬಂತೆ ಅಂಧ ಮಕ್ಕಳು ನಾನು ಭಂಗಿಗಳ ಮೂಲಕ ನಾಟ್ಯ ಯೋಗವನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.
ಇದಕ್ಕೆ ಸಾಕ್ಷಿಯಾಗಿದ್ದು ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ರಾತ್ರಿ ಡಾ. ಭೀಮಸೇನ ಜೋಶಿ ಮುಖ್ಯ ವೇದಿಕೆಯ ದುರ್ಗಸಿಂಹ ಮಹಾ ಮಂಟಪದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ. ತಾಲೂಕಿನ ಹೊಳೆಆಲೂರು ಗ್ರಾಮದ ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆಯ ಮಕ್ಕಳು ಯೋಗ ನೃತ್ಯ ಪ್ರದರ್ಶಿಸಿದರು. 20ಕ್ಕೂ ಹೆಚ್ಚು ಅಂಧ ಮಕ್ಕಳು ಬಹುತೇಕ 6ರಿಂದ 12 ವರ್ಷದವರು. ಇವರು ಯಾರ ಸಹಾಯವೂ ಇಲ್ಲದೆ ಯೋಗಾಸನದ ವಿವಿಧ ಆಸನಗಳನ್ನು ಕರಾರುವಕ್ಕಾಗಿ ಮಾಡಿದರು.
ಆಕರ್ಷಿಸಿದ ಯೋಗಾಸನಗಳು: ಗಂಡಬೇರುಂಡ ಆಸನ, ಪೀಪಾಸನ, ಶಕುನಿ ಆಸನ, ತ್ರೀ ವಿಕ್ರಮಾಸನ, ಚಕ್ರಾಸನ, ಕುಕ್ಕುಟಾಸನ, ಮಯೂರಾಸನ, ಸಲಭಾಸನ, ಮಚೇಂದ್ರಾಸನ, ಗರುಡಾಸನ, ಧನುರ್ನಾಸನ, ವೃಕ್ಷಾಸನ, ಅರ್ಧ ಸಲಭಾಸನ, ವಜ್ರಾಸನ ಸೇರಿದಂತೆ ಅನೇಕ ಆಸನಗಳನ್ನು ವೈಜ್ಞಾನಿಕ ವಿಧಾನಗಳಿಗನುಗುಣವಾಗಿ ಪ್ರದರ್ಶಿಸಿದರು. ಈ ಅಂಧ ಮಕ್ಕಳು ಮುಕ್ತ ಹಸ್ತರುಚಿಕಾಶನ ಪ್ರದರ್ಶನದ ವೇಳೆ ಗಣ್ಯರು, ಪ್ರೇಕ್ಷಕರು ಎದ್ದು ನಿಂತು ಜೋರಾಗಿ ಚಪ್ಪಾಳೆ ತಟ್ಟಿದರು.
ಸುಮಾರು 20 ಅಡಿ ಎತ್ತರದಿಂದ ಜೋತು ಬಿಟ್ಟ ರೋಪ ಮಲ್ಲಕಂಬ(ಹಗ್ಗ) ಪಟಪಟನೆ ಹತ್ತುವುದು, ಇಳಿಯುವುದಲ್ಲದೇ ಹಗ್ಗದ ಮೇಲೆ ಪದ್ಮಾಸನ, ಶವಾಸನ, ಶಿರಾಸನ, ಲೋಲಾಸನ ಸೇರಿದಂತೆ ನಾನು ರೀತಿಯ ಯೋಗದ ಭಂಗಿಗಳನ್ನು ಹಗ್ಗದಲ್ಲಿಯೇ ಮಾಡಿ ತೋರಿಸಿದರು. ಅಲ್ಲದೇ ಅಂಧ ಮಕ್ಕಳಲ್ಲಿ ಅಗಾಧ ಪ್ರತಿಭೆ ಇರುತ್ತದೆ ಎಂಬುದಕ್ಕೆ ಹತ್ತಕ್ಕೂ ಹೆಚ್ಚು ಮಕ್ಕಳು ಕರ್ನಾಟಕದ ಈವರೆಗಿನ ಮುಖ್ಯಮಂತ್ರಿಗಳ ಹೆಸರು, ವರ್ಷ ಕುರಿತು, 50ರ ವರೆಗಿನ ಮಗ್ಗಿಗಳನ್ನು ಮುಂಬಂದಿಯಾಗಿ ಯಾವ ರೀತಿ ಹೇಳಲಾಗುತ್ತದೆಯೇ ಅದೇ ರೀತಿಯಾಗಿ ಹಿಂಬಂದಿ(ಉಲ್ಟಾ)ಯಾಗಿ ಪಟಪಟನೆ ಹೇಳಿದರು. ಸಂಗೀತಕ್ಕೆ ತಕ್ಕಂತೆ ತಾಳ, ಮೇಳಕ್ಕನುಗುಣವಾಗಿ ಹೆಜ್ಜೆ ಹಾಕುತ್ತಾ ಯೋಗ ನಾಟ್ಯ ಪ್ರದರ್ಶಿಸಿದರು.
ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ: ಸಮ್ಮೇಳನದ ಕೊನೆದಿನ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕೊತಬಾಳದ ಇಪ್ಟಾ ತಂಡದಿಂದ ದೀಪ ನೃತ್ಯ, ಕೊಣ್ಣೂರ ಜೈ ಕಿಸಾನ ತಂಡದಿಂದ ಜೋಗತಿ ನೃತ್ಯ, ಗದಗ ಎಎಸ್ಎಸ್ ಕಾಲೇಜ್ ತಂಡದಿಂದ ಗುರ್ಜಿ ನೃತ್ಯ, ಚಾಮರಾಜಪೇಟೆ ಎಂ. ಲಿಂಗಯ್ಯ ತಂಡದಿಂದ ಕಂಸಾಳೆ ನೃತ್ಯ, ಅರುಣ ಕುಲಕರ್ಣಿ ಅವರಿಂದ ಹಾಸ್ಯ, ಬನಶಂಕರಿ ಬಯಲಾಟ ತಂಡದಿಂದ ದೊಡ್ಡಾಟ, ಮುದಕಪ್ಪ ಮಾದರ ಅವರಿಂದ ಗೀಗೀ ಪದ, ಪಂಜಾಬದ ಮಾನಸ ಕಲಾ ತಂಡದಿಂದ ಬಾಂಗ್ಡಾ ನೃತ್ಯ, ರಾಜೇಶ್ವರಿ ಕಲಾಕುಟೀರ ತಂಡದಿಂದ ಸಮೂಹ ಗೀತೆ, ಚೈತ್ರಾ ಗಾಣಿಗೇರ ಅವರಿಂದ ಏಕಪಾತ್ರಾಭಿನಯ ಸೇರಿದಂತೆ ಅನೇಕ ಕಲಾ ತಂಡಗಳಿಂದ ಜನಪದ ಕಲೆಗಳು ಅನಾವರಣಗೊಂಡವು. ಭಾನುವಾರ ರಾತ್ರಿ ಪ್ರಾರಂಭವಾದ ಸಾಂಸ್ಕೃತಿಕ ಕಾರ್ಯಕ್ರಮ ಸೋಮವಾರ ಬೆಳಗಿನ ಜಾವ 5ರ ವರೆಗೂ ಜರುಗಿತು.
ಹುಟ್ಟಿದರೇ... ಕನ್ನಡ ನಾಡಲ್ಲಿ ಹುಟ್ಟಬೇಕು. ಮೆಟ್ಟಿದರೇ... ಕನ್ನಡ ಮಣ್ಣಲ್ಲಿ ಮೆಟ್ಟಬೇಕು...ಈ ಹಾಡಿಗೆ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ, ಕಸಾಪ ಜಿಲ್ಲಾಧ್ಯಕ್ಷ ಶಿವಪ್ಪ ಕುರಿ, ಕಾರ್ಯದರ್ಶಿ ಶರಣು ಗೋಗೇರಿ, ಸಿಪಿಐ ವೆಂಕಟಪ್ಪ ನಾಯಕ, ವಿ.ಬಿ. ಸೋಮನಕಟ್ಟಿಮಠ, ಕಲಾವಿದ ಶಂಕ್ರಣ್ಣ ಸಂಕಣ್ಣವರ, ದಶರಥ ಗಾಣಿಗೇರ, ಶಿವರಡ್ಡಿ ದಾನರಡ್ಡಿ, ರಮಾಕಾಂತ ಕಮತಗಿ, ವಿ.ಎನ್. ಅಮಾತಿಗೌಡ್ರ, ಎಸ್.ಕೆ. ಕಳಸನ್ನವರ, ಸಿ.ಕೆ. ಕೇಸರಿ, ಎಸ್.ಆರ್. ದೊಡ್ಡಮನಿ, ಮಹೇಶ ಕುರಿ, ಪ್ರಭು ಮೇಟಿ, ಸಿದ್ದು ಪಾಟೀಲ ಸೇರಿದಂತೆ ಅನೇಕ ಗಣ್ಯರು ಹಾಡಿಗೆ ಹೆಜ್ಜೆ ಹಾಕಿ ಕುಣಿದರು. ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಮ್ಮೇಳನಕ್ಕೆ ಅದ್ಧೂರಿಯಾಗಿ ತೆರೆ ಬಿದ್ದಿತು.
ಚಪ್ಪಾಳೆ, ಕೇಕೆಗಳು ಪ್ರದರ್ಶನ ಮಟ್ಟಿಗೆ ಸೀಮಿತವಾಗದೇ ಅಂಧ ಮಕ್ಕಳನ್ನು ಇತರರಂತೆ ಪ್ರೀತಿಸಿ, ಪೋಷಿಸುವಂತಾಗಬೇಕು. ಸಮಾಜದಲ್ಲಿ ಇತರರೊಂದಿಗೆ ಮುಕ್ತ ಮನಸ್ಸಿನಿಂದ ಬೆರೆಯುವಂತಹ ವಾತಾವರಣ ಕಲ್ಪಿಸಿಬೇಕು. ಅಂಧ ಮಕ್ಕಳಿಗೆ ಅನುಕಂಪ ಬೇಡ, ಅವಕಾಶ ಕೊಡಿ.
- ಕಲ್ಮೇಶ,
ಹೊಳೆಆಲೂರಿನ ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆಯ ತರಬೇತಿದಾರ

-ಪಿ.ಎಸ್. ಪಾಟೀಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement