ವಂಚಿತ ಮಕ್ಕಳಿಗೂ ಶಿಕ್ಷಣ ದೊರೆಯಲಿ
ಶಿರಹಟ್ಟಿ: ಸಮಾಜದ ಕಟ್ಟಕಡೆಯ ಅವಕಾಶ ವಂಚಿತರಿಗೆ ಉತ್ತಮ ಗುಣಮಟ್ಟದ, ಪರಿಣಾಮಕಾರಿ ಶಿಕ್ಷಣ ದೊರೆಯಬೇಕು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಸರ್ವರೂ ಪರಿಣಾಮಕಾರಿ ಸೇವೆ ಸಲ್ಲಿಸಬೇಕು ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಕರೆ ನೀಡಿದರು.
ಅವರು ಪಟ್ಟಣದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರು 2013-14ನೇ ಸಾಲಿನಲ್ಲಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ 8, 9 ಹಾಗೂ 10ನೇ ತರಗತಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆ ಅಡಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದಿಂದ ಕರ್ನಾಟಕ ದರ್ಶನ ಪ್ರವಾಸ ಕೈಗೊಳ್ಳಲಿರುವ ಮಕ್ಕಳು ಫೆ. 26ರೊಳಗೆ ಬೆಂಗಳೂರಿಗೆ ಬಂದರೆ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನ ದರ್ಶನ ಮಾಡಿಸುವುದಾಗಿ ತಿಳಿಸಿದರು. ಶೈಕ್ಷಣಿಕ ಪ್ರವಾಸದಲ್ಲಿ ಕಂಡ ಅನುಭವದ ಕುರಿತು ಮಕ್ಕಳು ವಾಪಸ್ ಬಂದ ನಂತರ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸ್ಪರ್ಧೆ ಏರ್ಪಡಿಸುತ್ತಿದ್ದು, ಅದರಲ್ಲಿ ಪ್ರಥಮ ಬಂದ ಮಕ್ಕಳಿಗೆ ಪ್ರಶಸ್ತಿ ಕೊಡುವುದಾಗಿ ಘೋಷಣೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ ಮಾತನಾಡಿ, ವಿದ್ಯಾರ್ಥಿಗಳು ಪ್ರವಾಸದ ಸಮಯದಲ್ಲಿ ಅಸುರಕ್ಷಿತ ಅಹಾರ ಸೇವನೆ ಮಾಡಬಾರದು. ಮಿತವಾದ ಆಹಾರ ಸೇವನೆ ಒಳ್ಳೆಯದು ಎಂದರು. ಜಿಪಂ ಸದಸ್ಯ ಎಂ.ಎಸ್. ದೊಡ್ಡಗೌಡರ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿದರು.
ತಾಪಂ ಅಧ್ಯಕ್ಷೆ ಸುನಂದ ಬಿದರಳ್ಳಿ, ಪಪಂ ಸದಸ್ಯ ಸಂತೋಷ ಕುರಿ, ಜಿಲ್ಲಾ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ವೈ.ಎಸ್. ಪಾಟೀಲ, ಕೆ.ಎ. ಬಳಿಗೇರ, ಆರ್.ಬಿ. ಪವಾರ, ಜಿ.ಡಿ. ಈರಕ್ಕನವರ ಮುಂತಾದವರು ಇದ್ದರು.