ಹೆಣ್ಣಿನ ಕುರಿತಾಗಿರುವ ತಪ್ಪು ಗ್ರಹಿಕೆ ಬದಲಾಗಲಿ
ಕನ್ನಡಪ್ರಭ ವಾರ್ತೆ, ಗದಗ, ಫೆ. 24
(ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆ)
ಹೆಣ್ಣಿನ ಕುರಿತಾಗಿ ಸಮಾಜದಲ್ಲಿ ಇಂದಿಗೂ ತಪ್ಪು ಗ್ರಹಿಕೆಯಿದೆ. ಹಾಗಾಗಿ ಸಮಾಜದಲ್ಲಿರುವ ತಪ್ಪು ಗ್ರಹಿಕೆ ಬದಲಾಗಬೇಕಿದೆ. ಹೆಣ್ಣನ್ನು ಒಂದು ವಸ್ತುವಾಗಿ ನೋಡದೆ ಅವಳಲ್ಲಿರುವ ವ್ಯಕ್ತಿತ್ವ ನೋಡಬೇಕು ಎಂದು ಬಳ್ಳಾರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಬಿ.ಐ. ಕಲಾವತಿ ಹೇಳಿದರು.
ಅವರು ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಕ್ಕುಂಡಿ ಉತ್ಸವದ ಮಹಿಳಾ ಗೋಷ್ಠಿಯಲ್ಲಿ ಮಾತನಾಡಿದರು. ಮಹಿಳೆಯ ಕರ್ತೃತ್ವ ಶಕ್ತಿಯನ್ನು ಅಪಮೌಲ್ಯಗೊಳಿಸುವ ಕೆಲಸ ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ. ಹೆಣ್ಣಿನ ಅನುಭವ ವಲಯ, ಗಂಡಿನ ಅನುಭವ ವಲಯಕ್ಕಿಂತ ವಿಶಾಲವಾಗಿದೆ. ಹಾಗಾಗಿ ಮಹಿಳೆ ಪುರುಷನನ್ನು ಮೀರಿ ನಿಲ್ಲಬಲ್ಲಳು. ಪ್ರಜ್ಞಾವಂತ ನಾಗರಿಕರೆಲ್ಲರೂ ಚಿಂತನೆ ನಡೆಸಿ ಮಹಿಳೆಗೆ ಸೂಕ್ತ ಸ್ಥಾನಮಾನ ನೀಡು ಸಮಾಜದಲ್ಲಿ ಪುರುಷರಷ್ಟೆ ಮಹಿಳೆಗೆ ಸೂಕ್ತ ಸ್ಥಾನಮಾನ, ಗೌರವ ನೀಡುವ ಕಾರ್ಯವಾಗಲಿ ಎಂದರು.
ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಹಂಪಿ ಅಭಿವೃದ್ಧಿ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸಿದ್ಧಗಂಗಮ್ಮ ಮಾತನಾಡಿ, ಮಹಿಳೆಯರು ತಮ್ಮಲ್ಲಿರುವ ಆತಂಕ ದೂರ ಮಾಡಿ, ಸಂಘಟಿತರಾದಾಗ ಮಾತ್ರ ಮಹಿಳೆಯ ಅಭಿವೃದ್ಧಿ ಸಾಧ್ಯ ಎಂದರು. ಜೆ.ಟಿ. ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಡಾ. ವೀಣಾ ಹೂಗಾರ ಮಾತನಾಡಿ, ಸಾಮಾಜಿಕ ಅಸಮತೋಲನ ಎದುರಿಸುತ್ತಲೇ ಮಹಿಳೆ ಶೋಷಣೆಗೆ ಒಳಗಾಗುತ್ತಿದ್ದಾಳೆ ಎಂದು ವಿಷಾದ ವ್ಯಕ್ತ ಪಡಿಸಿದರು. ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಎಚ್.ಎಂ. ಹೇಮಲತಾ ಮಹಿಳಾ ಅಭಿವೃದ್ಧಿಯ ನೆಲೆಗಳ ಕುರಿತು ಮಾತನಾಡಿದರು. ಕವಿತಾ ದಂಡಿನ ನಿರೂಪಿಸಿದರು. ಶುಷ್ಮಾ ಚಿಟ್ಟಿ ವಂದಿಸಿದರು.
ಕಣ್ಮನ ಸೆಳೆದ ವಾರ್ತಾ ಇಲಾಖೆ ಲೇಸರ್ ಶೋ
ಗದಗ: ತಾಲೂಕಿನ ಲಕ್ಕುಂಡಿ ಉತ್ಸವದ ಮುಖ್ಯ ವೇದಿಕೆಯಲ್ಲಿ ಶನಿವಾರ ಮಧ್ಯರಾತ್ರಿ ಲೇಸರ್ ಕಿರಣಗಳು ಸೃಷ್ಟಿಸಿದ ಅದ್ಭುತ ಮಾಯಾ ಲೋಕಕ್ಕೆ ಜನ ಬೆರಗಾಗಿ ಹೋದರು. ವಾರ್ತಾ ಇಲಾಖೆ ಆಯೋಜಿಸಿದ ಈ ಲೇಸರ್ ಶೋದ ಮುಖ್ಯ ಉದ್ದೇಶ ಮನರಂಜನೆಯೊಂದಿಗೆ ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳ ಕುರಿತು ದೃಶ್ಯ ಶ್ರವಣ ಮಾಧ್ಯಮ ಮೂಲಕ ಮಾಹಿತಿ ನೀಡುವುದಾಗಿತ್ತು. ಅಭಿವೃದ್ಧಿ ಹಾಡಿನೊಂದಿಗೆ ಲೇಸರ ಕಿರಣಗಳು ನರ್ತಿಸಿ ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ, ವಿವಿಧ ವರ್ಗಗಳ ಸಾಲ ಮುಕ್ತ ಯೋಜನೆ, ವಸತಿ ಯೋಜನೆ, ಕುಟೀರ ಜ್ಯೋತಿ, ಬಾಕಿ ಬಿಲ್ಲು ಮನ್ನಾ, ವಿದ್ಯಾಸಿರಿ, ಹೆಣ್ಣುಮಕ್ಕಳ ಹಾಜರಾತಿಯ ಪ್ರೋತ್ಸಾಹಧನ, ತೋಟಗಾರಿಕೆ, ಸೋಲಾರ ಪಂಪ್ಸೆಟ್, ಕೃಷಿ ಬೆಲೆ ಆಯೋಗ, ಕಮ್ಮಿ ಬೆಲೆಗೆ ಗುಣಮಟ್ಟ ಔಷಧಿ ಮಳಿಗೆ, ಮೀನುಗಾರರ ಸೌಲಭ್ಯ ಹೀಗೆ ಹತ್ತು ಹಲವು ಅಭಿವೃದ್ಧಿ ಯೋಜನೆಗಳ ಕುರಿತು ಕರ್ನಾಟಕ ಜಗದ ಪುಣ್ಯವಂತರು ನಾನಾ ಸವಲತ್ತು ಪಡೆಯವಾತರು ಎನ್ನುವ ಸಮ್ಮೇಳನದ ಹಾಡಿನಲ್ಲಿ ಮೂಡಿ ಬಂದ ಅಭಿವೃದ್ಧಿ ಚಿತ್ರಗಳ ರಂಗು ಕಣ್ಮುಂದೆ ತುಂಬಿ ಬಂದು ನರ್ತನ ಮಾಡಿದಂತೆ ಭಾಸವಾಗುತ್ತಿತ್ತು. ಕಾರ್ಯಕ್ರಮದ ಕೊನೆಗೆ ಡಾ. ರಾಜಕುಮಾರರ ಹುಟ್ಟಿದರೇ ಕನ್ನಡನಾಡಲ್ಲಿ ಎನ್ನುವ ಹಾಡಿಗೆ ಲೇಸರ್ ಕಿರಣಗಳ ಅದ್ಭುತ ವರ್ಣಲೋಕವನ್ನು ನೋಡುಗರ ಮುಂದಿಟ್ಟವು. ಲೇಸರ್ ಶೋ ಅನ್ನು ಬೆಂಗಳೂರಿನ ಲೇಸರ್ ಮ್ಯಾಜಿಕ ಸಂಸ್ಥೆ, ವಾರ್ತಾ ಇಲಾಖೆ ಪ್ರದರ್ಶಿಸಿತು.